ಕೆಂಪು ಮಾರ್ಗದ ಮೆಟ್ರೋ ಯೋಜನೆ ವಿಳಂಬ ಸಾಧ್ಯತೆ; ಕೇಂದ್ರ ಸರ್ಕಾರ ಡಿಪಿಆರ್‌ ಹಿಂತಿರುಗಿಸಿದ್ದೇಕೆ?

ʼನಮ್ಮ ಮೆಟ್ರೋʼ ಯೋಜನೆಗೆ ಕೇಂದ್ರವು ಶೇ 50 ಅನುದಾನ ಒದಗಿಸುತ್ತಿರುವ ಹಿನ್ನೆಲೆಯಲ್ಲಿ ಡಿಪಿಆರ್‌ನಲ್ಲಿ ಉಲ್ಲೇಖವಾದ ವೆಚ್ಚಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಸ್ವತಂತ್ರ ಬಾಹ್ಯ ಸಲಹೆಗಾರರ ಮೂಲಕ ವೆಚ್ಚ ಮೌಲ್ಯಮಾಪನ ನಡೆಸಲು ನಿರ್ದೇಶನ ನೀಡಿದೆ.

Update: 2025-09-27 06:38 GMT

ಬೆಂಗಳೂರಿನ ಹೆಬ್ಬಾಳದಿಂದ ಸರ್ಜಾಪುರ ಸಂಪರ್ಕಿಸಿರುವ ಕೆಂಪು ಮಾರ್ಗದ ನಮ್ಮ ಮೆಟ್ರೋ ಯೋಜನೆಯ(3ಎ) ವಿಸ್ತೃತ ಯೋಜನಾ ವರದಿ (ಡಿಪಿಆರ್)ಯನ್ನು ಕೇಂದ್ರ ಸರ್ಕಾರ ಹಿಂದಿರುಗಿಸಿದೆ. ಯೋಜನಾ ವೆಚ್ಚ ದುಬಾರಿಯಾಗಿರುವ ಕಾರಣ ಮರು ಪರಿಶೀಲಿಸಲು ಸೂಚಿಸಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಡಿಪಿಆರ್ ಹಿಂದಕ್ಕೆ ಕಳುಹಿಸಿದೆ.

ರಾಜ್ಯ ಸಚಿವ ಸಂಪುಟವು 2024ರ ಡಿಸೆಂಬರ್‌ನಲ್ಲಿ ಕೆಂಪು ಮಾರ್ಗದ ʼನಮ್ಮ ಮೆಟ್ರೋ ಹಂತ 3ಎʼ ಯೋಜನೆಯ ಡಿಪಿಆರ್‌ಗೆ ಅನುಮೋದನೆ ನೀಡಿತ್ತು.

ʼನಮ್ಮ ಮೆಟ್ರೋʼ ಯೋಜನೆಗೆ ಕೇಂದ್ರ ಸರ್ಕಾರ ಶೇ 50 ಅನುದಾನ ಒದಗಿಸುತ್ತಿರುವ ಹಿನ್ನೆಲೆಯಲ್ಲಿ ವೆಚ್ಚಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಸ್ವತಂತ್ರ ಬಾಹ್ಯ ಸಲಹೆಗಾರರ ಮೂಲಕ ವೆಚ್ಚ ಮೌಲ್ಯಮಾಪನ ನಡೆಸುವಂತೆ ನಿರ್ದೇಶನ ನೀಡಿ ಡಿಪಿಆರ್ ಹಿಂತಿರುಗಿಸಿದೆ.

36.59 ಕಿ.ಮೀ. ಉದ್ದದ ಮಾರ್ಗ

ಒಟ್ಟು 36.59 ಕಿ.ಮೀ. ಉದ್ದದ ಕೆಂಪು ಮಾರ್ಗದ ವಿಸ್ತರಿತ ಮೆಟ್ರೋ ಯೋಜನೆಗೆ 28,405 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಅದರಲ್ಲಿ 8,080 ಕೋಟಿ ರೂ. ಭೂ ಸ್ವಾಧೀನ ವೆಚ್ಚವಾಗಲಿದೆ. ಖಾಸಗಿ ಭೂಮಿಯ ಸ್ವಾಧೀನಕ್ಕಾಗಿ 1,224 ಕೋಟಿ ರೂ. ಖರ್ಚಾಗಲಿದೆ ಎಂದು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಪ್ರತಿ ಕಿ.ಮೀ ಗೆ 776.3 ಕೋಟಿ ವೆಚ್ಚವಾಗಲಿದೆ.

ಯೋಜನೆಯಲ್ಲಿ ಒಟ್ಟು 22.14 ಕಿ.ಮೀ ಎತ್ತರಿಸಿದ ಮಾರ್ಗವಿದ್ದರೆ, ಸುರಂಗ ಮಾರ್ಗವು 14.45 ಕಿ.ಮೀ. ಇರಲಿದೆ. ಈ ಮಾರ್ಗದಲ್ಲಿ ಒಟ್ಟು 28 ನಿಲ್ದಾಣಗಳು ಇರಲಿವೆ. ಇವುಗಳಲ್ಲಿ 17 ಎತ್ತರಿಸಿದ ನಿಲ್ದಾಣಗಳು, 11 ಸುರಂಗ ಮಾರ್ಗದ ನಿಲ್ದಾಣಗಳು ಇರಲಿವೆ.

ಎಲ್ಲೆಲ್ಲಿ ನಿಲ್ದಾಣ ?

ಸೋಮಪುರ, ಸರ್ಜಾಪುರ, ಮುತ್ತಾನಲ್ಲೂರು ಕ್ರಾಸ್, ದೊಮ್ಮಸಂದ್ರ, ಕೊಡತಿ ಗೇಟ್, ಸೂಲಿಕುಂಟೆ, ಕಾರ್ಮೆಲರಾಂ, ಅಂಬೇಡ್ಕರ್ನಗರ, ಕೈಕೊಂಡರಹಳ್ಳಿ, ದೊಡ್ಡಕನ್ನೆಲ್ಲಿ, ಇಬ್ಲೂರು, ಬೆಳ್ಳಂದೂರು ಗೇಟ್, ಜಕ್ಕಸಂದ್ರ, ಅಗರ, ಸೇಂಟ್ ಜಾನ್ಸ್ ಆಸ್ಪತ್ರೆ, ಸಿಪಿಡಬ್ಲ್ಯುಡಿ ಕ್ವಾರ್ಟರ್ಸ್, ಡೇರಿ ಸರ್ಕಲ್, ಸುದ್ದಗುಂಟೆಪಾಳ್ಯ, ವಿಲ್ಸನ್ ಗಾರ್ಡನ್, ನಿಮ್ಹಾನ್ಸ್, ಕೆ.ಆರ್. ಸರ್ಕಲ್, ಟೌನ್ ಹಾಲ್, ಪ್ಯಾಲೇಸ್ ಗುಟ್ಟಹಳ್ಳಿ, ಚಾಲುಕ್ಯ ಸರ್ಕಲ್, ವೆಟರ್ನರಿ ಕಾಲೇಜ್, ಮೇಖ್ರಿ ಸರ್ಕಲ್, ಗಂಗಾನಗರ ಹಾಗೂ ಹೆಬ್ಬಾಳ.

ಐದು ಇಂಟರ್‌ಚೆಂಜ್‌ ಜಂಕ್ಷನ್

ಕೆ.ಆರ್. ವೃತ್ತದಲ್ಲಿ ನೀಲಿ ಮತ್ತು ನೇರಳ ಮಾರ್ಗದ ಸಂಪರ್ಕಿಸಿರುವ ಇಂಟರ್‌ಚೆಂಜ್ ಇರಲಿದೆ. ಡೈರಿ ವೃತ್ತದಲ್ಲಿ ಗುಲಾಬಿ ಮಾರ್ಗದ ಸಂಪರ್ಕವಿದೆ. ಅಗರದಲ್ಲಿ ಉದ್ದೇಶಿತ ಎತ್ತರಿಸಿದ ಮಾರ್ಗದಲ್ಲಿ ನಿಲ್ದಾಣ ಇರಲಿದೆ. ಇಲ್ಲಿ ಕೆಂಪು ಮತ್ತು ನೀಲಿ ಮಾರ್ಗದ ಮಧ್ಯೆ ಸಂಪರ್ಕ ಇರಲಿದೆ.

ಹೆಬ್ಬಾಳದಲ್ಲಿ ಬೇರೆ ಬೇರೆ ಮಾರ್ಗಗಳ ಸಂಪರ್ಕ ಇರಲಿದೆ. ಇಬ್ಲೂರಿನಲ್ಲಿ ನೀಲಿ ಮಾರ್ಗದೊಂದಿಗೆ ಸಂಪರ್ಕ ಕಲ್ಪಿಸುವ ಇಂಟರ್ ಚೇಂಜ್ ನಿಲ್ದಾಣಗಳು ಇರಲಿವೆ.

836 ಆಸ್ತಿಗಳ ಸ್ವಾಧೀನ

ಪ್ರಸ್ತಾಪಿತ ಯೋಜನೆಗೆ ಸುಮಾರು 161.65 ಎಕರೆ ಭೂಮಿ ಅಗತ್ಯವಾಗಿದೆ. ಅದರಲ್ಲಿ 55.69 ಎಕರೆ ಖಾಸಗಿ ಭೂಮಿ ಇದೆ. ಯೋಜನೆಗೆ 314 ವಸತಿ, 37 ವಾಣಿಜ್ಯ ಹಾಗೂ 63 ಕೈಗಾರಿಕೆಗೆ ಸೇರಿದ 836 ಆಸ್ತಿಗಳ ಸ್ವಾಧೀನ ಆಗಬೇಕಿದೆ.

ದಟ್ಟಣೆ ನಿವಾರಣೆಯಲ್ಲಿ ನಿರ್ಣಾಯಕ

ಬೆಂಗಳೂರಿನ ಮಾಹಿತಿ ತಂತ್ರಜ್ಞಾನದ ಹಬ್ ಆಗಿರುವ ಸರ್ಜಾಪುರದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಹಂತ- 3ಎ ಯೋಜನೆಯು ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

ಇದಲ್ಲದೆ, ಸರ್ಜಾಪುರ-ಕೋರಮಂಗಲ ಮಾರ್ಗದಲ್ಲಿ ಎಲಿವೇಟೆಡ್ ಡಬಲ್ ಡೆಕ್ಕರ್ ರಸ್ತೆಗೂ ಯೋಜನೆ ರೂಪಿಸಲಾಗಿದೆ. ವಿಸ್ತೃತ ಯೋಜನಾ ವರದಿಯು ಮೆಟ್ರೋ ಅಗತ್ಯಗಳ ಮೇಲೆ ಕೇಂದ್ರೀಕರಿಸುವುದರಿಂದ ಎಲಿವೇಟೆಡ್ ರಸ್ತೆಗೆ ಹೆಚ್ಚುವರಿ ಹಣದ ಅಗತ್ಯವಿದೆ ಎಂಬ ಕಾರಣಕ್ಕೆ ಅಂತಿಮ ನಿರ್ಧಾರವಾಗಿಲ್ಲ.

Tags:    

Similar News