ರಾಜ್ಯದಲ್ಲಿ 18,500 ಶಿಕ್ಷಕರ ನೇಮಕ: ಮುಂದಿನ ಶೈಕ್ಷಣಿಕ ವರ್ಷದೊಳಗೆ ಪ್ರಕ್ರಿಯೆ ಪೂರ್ಣ
ನಾನು ಅಧಿಕಾರ ಸ್ವೀಕರಿಸಿದ ನಂತರ ಈಗಾಗಲೇ 13,000 ಶಿಕ್ಷಕರ ನೇಮಕಾತಿ ನಡೆದಿದೆ. ಈಗ ಮತ್ತೆ 18,500ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದೇವೆ ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ 18,500ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಎಲ್ಲಾ ಸಿದ್ಧತೆಗಳನ್ನು ನಡೆಸಿದೆ. ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲೇ ಈ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ಶಾಲೆಗಳಿಗೆ 13,000 ಮತ್ತು ಅನುದಾನಿತ ಶಾಲೆಗಳಿಗೆ ಸುಮಾರು 5,600 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಕಟಿಸಿದರು. ಒಳ ಮೀಸಲಾತಿ ಕುರಿತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರ ವರದಿಯಿಂದಾಗಿ ನೇಮಕಾತಿ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿತ್ತು, ಆದರೆ ಈಗ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು.
"ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇವಲ 4,700 ಶಿಕ್ಷಕರನ್ನು ಮಾತ್ರ ನೇಮಕ ಮಾಡಲಾಗಿತ್ತು. ಆದರೆ, ನಾನು ಅಧಿಕಾರ ಸ್ವೀಕರಿಸಿದ ನಂತರ ಈಗಾಗಲೇ 13,000 ಶಿಕ್ಷಕರ ನೇಮಕಾತಿ ನಡೆದಿದೆ. ಈಗ ಮತ್ತೆ 18,500ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದೇವೆ" ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದರು. ಈ ನೇಮಕಾತಿಯಿಂದ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಲಾಗಿದೆ ಎಂದರು.
ಒಳಮೀಸಲಾತಿ ಕೋವಿಡ್ ಕಾರಣದಿಂದ ನೇಮಕಗಳು ಸುಸೂತ್ರವಾಗಿ ನಡೆದಿಲ್ಲ. ರಾಜ್ಯದಲ್ಲಿ ಖಾಲಿ ಇರುವ 2.84 ಲಕ್ಷ ಹುದ್ದೆಗಳಿಗೆ ಶೀಘ್ರ ನೇಮಕ ನಡೆಸಬೇಕು ಎಂದು ಇತ್ತೀಚೆಗೆ ಸ್ಪರ್ಧಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಇತ್ತೀಚೆಗೆ ಧಾರವಾಡದಲ್ಲಿ ಪ್ರತಿಭಟನೆ ನಡೆಸಿ, ವಿವಿಧ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಇದೀಗ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕ್ಷಕ ಹುದ್ದೆಗಳಿಗೆ ನೇಮಕ ಮಾಡುವುದಾಗಿ ಹೇಳಿರುವುದು ಸ್ಪರ್ಧಾರ್ಥಿಗಳಿಗೆ ಭರವಸೆ ಮೂಡಿಸಿದೆ.