ಕಮಲ್ ಹಾಸನ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ; ಏನಂದರು ಅವರು?
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ತಮ್ಮ 'ಥಗ್ ಲೈಫ್' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಮಲ್ ಹಾಸನ್, ಕನ್ನಡ ತಮಿಳಿನಿಂದ ಹುಟ್ಟಿದ ಭಾಷೆ ಎಂದು ಹೇಳಿಕೆ ನೀಡಿದ್ದರು.;
ಕನ್ನಡವು ತಮಿಳಿನಿಂದ ಹುಟ್ಟಿರುವುದು ಎಂದು ನಟ ಕಮಲ್ ಹಾಸನ್ ನೀಡಿರುವ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕನ್ನಡಕ್ಕೆ ಸುದೀರ್ಘ ಇತಿಹಾಸವಿದೆ, ಪಾಪ ಕಮಲ್ ಹಾಸನ್ ಅವರಿಗೆ ವಿಷಯ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಕಮಲ್ ಹಾಸನ್ ಅವರ ಈ ಹೇಳಿಕೆಗೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ತಮ್ಮ 'ಥಗ್ ಲೈಫ್' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಮಲ್ ಹಾಸನ್, ಕನ್ನಡ ತಮಿಳಿನಿಂದ ಹುಟ್ಟಿದ ಭಾಷೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿಡಿಯೋ ಹರಿದಾಡುತ್ತಿದ್ದು, ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ಈ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಅವರು ಚಿತ್ರರಂಗಕ್ಕೆ ಡಾ. ರಾಜ್‌ಕುಮಾರ್ ಕುಟುಂಬ ಮತ್ತು ಶಿವರಾಜ್‌ಕುಮಾರ್ ಅವರ ಕೊಡುಗೆಗಳನ್ನು ಶ್ಲಾಘಿಸಿದ್ದರು. ಅಲ್ಲದೆ, ರಾಜ್‌ಕುಮಾರ್ ಕುಟುಂಬದೊಂದಿಗಿನ ತಮ್ಮ ಒಡನಾಟವನ್ನೂ ನೆನಪಿಸಿಕೊಂಡಿದ್ದರು. ನಟ ಶಿವರಾಜ್‌ಕುಮಾರ್ ಸಹ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅವರ ಎದುರೇ ಕನ್ನಡವನ್ನು ತಮಿಳಿನೊಂದಿಗೆ ಹೋಲಿಸಿರುವುದು ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ಮಣಿರತ್ನಂ ನಿರ್ದೇಶನದ ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ಜೂನ್ 5 ರಂದು ತೆರೆಕಾಣುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯಕ್ಕಾಗಿ ಕಮಲ್ ಹಾಸನ್ ಮತ್ತು ಚಿತ್ರತಂಡ ಮಂಗಳವಾರ ಬೆಂಗಳೂರಿಗೆ ಬಂದಿತ್ತು. ಇದರ ಬೆನ್ನಲ್ಲೇ, ಶನಿವಾರ ನೀಡಿದ ಹೇಳಿಕೆಯ ವಿಡಿಯೋ ಈಗ ವೈರಲ್ ಆಗಿ ವಿವಾದ ಸೃಷ್ಟಿಸಿದೆ.