ಸಿದ್ದರಾಮಯ್ಯ ಕೇಂದ್ರಕ್ಕೆ ಹೋಗುವುದು ಗ್ಯಾರಂಟಿ: ಆರ್.ಅಶೋಕ್
ಸಿದ್ದರಾಮಯ್ಯ ಅವರನ್ನು ಅತಂತ್ರ ಮಾಡಲು ಕುತಂತ್ರ ನಡೆದಿದೆ. ಅವರಿಗೆ ಗೇಟ್‌ಪಾಸ್ ನೀಡುವುದು ಗ್ಯಾರಂಟಿಯಾಗಿದೆ. ನಾನು ಹೇಳಿದ್ದ ಜ್ಯೋತಿಷ್ಯ ನಿಜವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.;
ಮುಖ್ಯಮಂತ್ರಿ ಹುದ್ದೆಗೆ ಎರಡೂವರೆ ವರ್ಷಗಳ ಒಪ್ಪಂದ ನಡೆದಿದ್ದು, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಕ್ಕಿಳಿಸಲು ಸಿದ್ಧತೆ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆಗೆ ಒಪ್ಪಂದ ನಡೆದಿರುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಒಪ್ಪಿಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ನಾನು ಇದನ್ನೇ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಅವರನ್ನು ಅತಂತ್ರ ಮಾಡಲು ಕುತಂತ್ರ ನಡೆದಿದೆ. ಅವರಿಗೆ ಗೇಟ್‌ಪಾಸ್ ನೀಡುವುದು ಗ್ಯಾರಂಟಿಯಾಗಿದೆ. ನಾನು ಹೇಳಿದ್ದ ಜ್ಯೋತಿಷ್ಯ ನಿಜವಾಗಿದೆ. ಕಾಂಗ್ರೆಸ್‌ನ ಶಾಸಕರು ರಾಜಾರೋಷವಾಗಿ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಸಿದ್ದರಾಮಯ್ಯ ಅವರಿಗೆ ಬೋರ್ಡಿಂಗ್ ಪಾಸ್ ಇದ್ದಂತೆ ಎಂದರು.
ಸರ್ಕಾರ ಎರಡೂವರೆ ವರ್ಷಗಳಲ್ಲಿ ಟೇಕಾಫ್ ಆಗಿಲ್ಲ. ಶಾಸಕರೆಲ್ಲರೂ ತಿರುಗುಬಿದ್ದಿದ್ದಾರೆ. ಶಾಸಕರು ಸಿದ್ದರಾಮಯ್ಯನವರ ಪರವಾಗಿ ಇಲ್ಲ ಎಂಬುದು ಸುರ್ಜೇವಾಲಾ ಅವರ ಸಭೆಯಿಂದ ಗೊತ್ತಾಗಿದೆ. ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೇಂದ್ರಕ್ಕೆ ಹೋಗುವುದು ಗ್ಯಾರಂಟಿಯಾಗಿದೆ. ಇನ್ನೆರಡು ವರ್ಷವೂ ಇದೇ ರೀತಿ ಅತಂತ್ರದಲ್ಲೇ ಸರ್ಕಾರ ನಡೆಯಲಿದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಹಲವಾರು ಬಾರಿ ತಪ್ಪಿದೆ. ಆದರೆ ಈಗ ಅವರಿಗೂ ಅವಕಾಶ ಬರಬಹುದು ಎಂದರು.
ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಪಾಪರ್ ಸರ್ಕಾರ ಎಂದು ಒಪ್ಪಿಕೊಂಡಿದ್ದಾರೆ. ಈ ಸರ್ಕಾರದಿಂದ ಜನರ ಕೈಗೆ ಚಿಪ್ಪು ಸಿಗಲಿದೆ. ಸಿಎಂ ಬದಲಾವಣೆಯ ಗಲಾಟೆಯ ನಡುವೆ ಸಚಿವರು ಸ್ಥಾನ ಕಳೆದುಕೊಂಡು ತಿರುಗಿ ಬೀಳಲಿದ್ದಾರೆ. ಸಚಿವ ರಾಜಣ್ಣ ಹೇಳಿದಂತೆಯೇ, ಅಧಿಕಾರದ ಪ್ರಳಯ ಆಗಲಿದೆ ಎಂದು ಹೇಳಿದರು.
ಹಾಸನದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆಗಳಿಗೆ ಭೇಟಿ ನೀಡಿಲ್ಲ. ಕೋವಿಡ್ ಲಸಿಕೆ ಇದಕ್ಕೆ ಕಾರಣವಲ್ಲ ಎಂದು ತಜ್ಞರು ಹೇಳಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಬೇಕಿದೆ. ಅಲ್ಲದೆ ಹಾಸನದಲ್ಲಿ ಕಾಫಿ ಬೆಳೆಗೆ ಹಾನಿಯಾಗಿದೆ. ಇದಕ್ಕಾಗಿ ಹಾಸನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.