ಬಾಲರಾಮ ಶಿಲ್ಪಿ ಅರುಣ್, ತತ್ವಪದ ಗಾಯಕ ಇಮಾಮ್ ಸಾಬ್ ಸೇರಿದಂತೆ 69 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ
ಅಯೋಧ್ಯೆ ರಾಮಮಂದಿರದ ಬಾಲ ರಾಮನ ಮೂರ್ತಿ ಶಿಲ್ಪಿ ಅರುಣ್ ಯೋಗಿರಾಜ್, ತತ್ವಪದ ಗಾಯ ಇಮಾಮ್ ಸಾಬ್ ವಲ್ಲೆಪನವರ, ಬಯಲಾಟ ಕಲಾವಿದ ನಾರಾಯಣಪ್ಪ ಶಿಳ್ಳೇಕ್ಯಾತ, ಅಂಧ ಕಲಾವಿದ ನರಸಿಂಹಲು, ಜನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ ಪ್ರಶಸ್ತಿ ಪಡೆದವರಲ್ಲಿ ಪ್ರಮುಖರು. ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಅವರೂ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ರಾಜ್ಯ ಸರ್ಕಾರ 69 ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ರಾಜ್ಯ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಟ್ಟು 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ.
ಪ್ರಮುಖವಾಗಿ ಅಯೋಧ್ಯೆ ರಾಮಮಂದಿರದ ಬಾಲ ರಾಮನ ಮೂರ್ತಿ ಶಿಲ್ಪಿ ಅರುಣ್ ಯೋಗಿರಾಜ್, ತತ್ವಪದ ಗಾಯ ಇಮಾಮ್ ಸಾಬ್ ವಲ್ಲೆಪನವರ, ಬಯಲಾಟ ಕಲಾವಿದ ನಾರಾಯಣಪ್ಪ ಶಿಳ್ಳೇಕ್ಯಾತ, ಅಂಧ ಕಲಾವಿದ ನರಸಿಂಹಲು, ಜನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ ಪ್ರಶಸ್ತಿ ಪಡೆದವರಲ್ಲಿ ಪ್ರಮುಖರು. ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಅವರೂ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ತತ್ವಪದದ ಮೂಲಕ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕೋಮುಸಾಮರಸ್ಯ ಮೂಡಿಸುತ್ತಿರುವ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ನಾಗನೂರು ಗ್ರಾಮದ ಇಮಾಮ್ ಸಾಬ್ ವಲ್ಲೆಪನವರ ಅವರಿಗೆ ಜಾನಪದ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
40 ವರ್ಷಗಳಿಂದ ಬೆಳಗಾವಿ, ಬಾಗಲಕೋಟೆ, ಗದಗ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತತ್ವಪದಗಳ ಮೂಲಕ ಸಾಮರಸ್ಯ, ಜೀವನಾನುಭವ ಮೂಡಿಸುತ್ತಿದ್ದಾರೆ. ತಮ್ಮ ಸಹೋದರ ಹಾಗೂ ತಂಡದ ಸಹ ಕಲಾವಿದರ ಜೊತೆಗೂಡಿ ಊರೂರು ಸುತ್ತುವ ಇಮಾಮ್ ಸಾಬ್ ಅವರು ಜಾತಿ ಸಂಕೋಲೆಗಳಲ್ಲಿ ಸಿಲುಕಿ ವ್ಯಥೆ ಪಡುತ್ತಿರುವ ಸಮಾಜ ಹಾಗೂ ವೈಚಾರಿಕ ಪ್ರಜ್ಷೆ ಜಾಗೃತಿಗೊಳಿಸುವ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದಾರೆ.
ಇದಲ್ಲದೇ ಜಾನಪದ ಕ್ಷೇತ್ರದಲ್ಲಿ ಅಶ್ವರಾಮಣ್ಣ, ಕುಮಾರಯ್ಯ, ವೀರಭದ್ರಯ್ಯ, ಅಂಧ ಕಲಾವಿದ ನರಸಿಂಹಲು, ಬಸವರಾಜ ಸಂಗಪ್ಪ ಹಾರಿವಾಳ, ಎಸ್. ಜಿ. ಲಕ್ಷ್ಮಿದೇವಮ್ಮ,ಪಿಚ್ಚಳ್ಳಿ ಶ್ರೀನಿವಾಸ ಹಾಗೂ ಭೂತಾರಾಧನೆಗಾಗಿ ಲೋಕಯ್ಯ ಶೇರ ಅವರಿಗೂ ಪ್ರಶಸ್ತಿ ದೊರೆತಿದೆ.
ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿರುವ ಶಿಳ್ಳೆಕ್ಯಾತ ಸಮುದಾಯದ ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಗುರುತಿಸಿರುವುದು ಈ ಬಾರಿಯ ವಿಶೇಷ. ವಿಜಯನಗರದ ಬಯಲಾಟ ಕಲಾವಿದರಾದ ನಾರಾಯಣಪ್ಪ ಶಿಳ್ಳೇಕ್ಯಾತ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಅಲ್ಲದೇ ಬಯಲಾಟದಲ್ಲೇ ಮತ್ತೊಬ್ಬ ಸಾಧಕರಾದ ಅಂಧ ಕಲಾವಿದ ಸಿದ್ದಪ್ಪ ಕರಿಯಪ್ಪ ಕುರಿ ಅವರಿಗೂ ಪ್ರಶಸ್ತಿ ಗೌರವ ಸಂದಿದೆ.
ಸಾವಯವ ಕೃಷಿಕನಿಗೆ ಸಂದ ಪ್ರಶಸ್ತಿ
ದೇವನಹಳ್ಳಿಯ ಚಕ್ಕೋತಾ ಹಣ್ಣಿಗೆ ಭೌಗೋಳಿಕ ಗುರುತು(ಜಿಐ) ಸಿಗುವಂತೆ ಮಾಡಲು ಶ್ರಮಿಸಿದ ಸಾವಯವ ಕೃಷಿಕ ಶಿವನಾಪುರ ರಮೇಶ್ ಅವರಿಗೂ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ರಮೇಶ್ ಅವರು ಸಾವಯ ಪದ್ಧತಿಯಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಿ ಮಾರಾಟ ಮಾಡುವ ಜೊತೆಗೆ ಬೆಳೆ ಬೆಳೆಯುವ ವಿಧಾನ ಕುರಿತು ಕೃಷಿಕರಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ.
ಚಕ್ಕೋತಾ ತಳಿಯನ್ನು ಮೂಲ ಸ್ವಾಧದಲ್ಲೇ ಅಭಿವೃದ್ಧಿಗೊಳಿಸಿ ವ್ಯಾಪಕ ಪ್ರಚಾರ ಹಾಗೂ ಬೆಳೆಯ ವಿಸ್ತೀರ್ಣಕ್ಕೆ ಕಾರಣರಾಗಿರುವ ರಮೇಶ್ ಅವರ ಪರಿಶ್ರಮ, ಜಿಕೆವಿಕೆ ಹಾಗೂ ಹೆಸರಘಟ್ಟದ ಕೃಷಿ ವಿಜ್ಞಾನಿಗಳ ಪ್ರೋತ್ಸಾಹದಿಂದಾಗಿ ಇಂದು ಚಿಕ್ಕೋತಾ ಹಣ್ಣಿಗೆ ಭೌಗೋಳಿಕ ಸೂಚ್ಯಂಕ (ಜಿಐ) ದೊರೆತಿದೆ.
ಬೆಂಗಳೂರಿನ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಚಕ್ಕೋತ ಸೇರಿದಂತೆ ವಿವಿಧ ಫಲೋತ್ಪನ್ನಗಳನ್ನು ಪ್ರದರ್ಶಿಸಿ ಆರು ಬಾರಿ ಬಹುಮಾನ ಗಳಿಸಿದ್ದಾರೆ.
ಇದಲ್ಲದೇ ಚಲನಚಿತ್ರ, ಸಂಗೀತ, ನೃತ್ಯ, ಆಡಳಿತ, ವೈದ್ಯಕೀಯ, ಸಮಾಜ ಸೇವೆ, ಸಂಕೀರ್ಣ, ಹೊರನಾಡು, ಪರಿಸರ, ಕೃಷಿ, ಮಾಧ್ಯಮ, ವಿಜ್ಞಾನ-ತಂತ್ರಜ್ಞಾನ, ಸಹಕಾರ, ಯಕ್ಷಗಾನ, ರಂಗಭೂಮಿ, ಸಾಹಿತ್ಯ, ಶಿಕ್ಷಣ, ಕ್ರೀಡೆ, ನ್ಯಾಯಾಂಗ, ಶಿಲ್ಪಕಲೆ, ಚಿತ್ರಕಲೆ ಹಾಗೂ ಕರಕುಶಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಾಜ್ಯೋತ್ಸವ ಪ್ರಶಸ್ತಿಯು ಒಂದು ಲಕ್ಷ ನಗದು ಬಹುಮಾನ ಹಾಗೂ 20 ಗ್ರಾಂ ಚಿನ್ನದ ಪದಕ ಒಳಗೊಂಡಿರಲಿದೆ.
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ 50 ಸದಸ್ಯರ ಆಯ್ಕೆ ಸಲಹಾ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿತ್ತು. ಒಟ್ಟು 1575 ಭೌತಿಕ ಅರ್ಜಿಗಳು ಬಂದಿದ್ದವು. ಇದಲ್ಲದೇ ಸೇವಾ ಸಿಂಧೂ ಮೂಲಕ 1309 ಜನರಿಗಾಗಿ 7,438 ನಾಮನಿರ್ದೇಶನಗಳು ಸಲ್ಲಿಕೆಯಾಗಿದ್ದವು.
ಈ ಬಾರಿ ಪ್ರಶಸ್ತಿಗೆ ಅರ್ಜಿಯನ್ನೇ ಸಲ್ಲಿಸದ 20ಕ್ಕೂ ಹೆಚ್ಚು ಮಂದಿಯನ್ನು ಅವರ ಸಾಧನೆ ಗುರುತಿಸಿ ಆಯ್ಕೆ ಮಾಡಲಾಗಿದೆ. ಅದರಲ್ಲಿ ವಿಜಯನಗರ ಜಿಲ್ಲೆಯ 92 ವರ್ಷದ ನಾರಾಯಣಪ್ಪ ಶಿಳ್ಳೇಕ್ಯಾತ ಅವರೂ ಕೂಡ ಒಬ್ಬರು. ಜಾನಪದ ಕ್ಷೇತ್ರದಲ್ಲಿ ಅಂಧ ಕಲಾವಿದ ನರಸಿಂಹಲು ಸೇರಿದಂತೆ 13 ಮಂದಿ ಮಹಿಳೆಯರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.