ರಾಜಣ್ಣ ವಜಾ ಪಕ್ಷದ ಆಂತರಿಕ ವಿಚಾರ, ಪ್ರತಿಪಕ್ಷಕ್ಕೆ ಉತ್ತರಿಸಬೇಕಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
"ಸಚಿವ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವ ಬಗ್ಗೆ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಸಭಾನಾಯಕರು ಭರವಸೆ ನೀಡಿದ್ದರು. ಅದರಂತೆ ಸಿಎಂ ಈಗ ವಜಾಕ್ಕೆ ಕಾರಣಗಳನ್ನು ಸದನಕ್ಕೆ ತಿಳಿಸಬೇಕು," ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದರು.;
ಮುಖ್ಯಮಂತ್ರಿ ಸಿದ್ದರಾಮಯ್ಯ
ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿರುವುದು ಸಂಪೂರ್ಣವಾಗಿ ನಮ್ಮ ಪಕ್ಷದ ಆಂತರಿಕ ವಿಷಯವಾಗಿದ್ದು, ಈ ಬಗ್ಗೆ ಪ್ರತಿಪಕ್ಷಗಳಿಗೆ ಉತ್ತರ ನೀಡಬೇಕಾದ ಯಾವುದೇ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಾಖಂಡಿತವಾಗಿ ಹೇಳಿದ್ದಾರೆ.
ಗುರುವಾರ ವಿಧಾನ ಪರಿಷತ್ನಲ್ಲಿ ಶೂನ್ಯವೇಳೆ ಮುಗಿದ ನಂತರ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿ ಮುಖ್ಯ ಸಚೇತಕ ಎನ್. ರವಿ ಕುಮಾರ್ ಅವರು, "ಸಚಿವ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವ ಬಗ್ಗೆ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಸಭಾನಾಯಕರು ಭರವಸೆ ನೀಡಿದ್ದರು. ಅದರಂತೆ ಮುಖ್ಯಮಂತ್ರಿಗಳು ಈಗ ವಜಾಕ್ಕೆ ಕಾರಣಗಳನ್ನು ಸದನಕ್ಕೆ ತಿಳಿಸಬೇಕು," ಎಂದು ಪಟ್ಟು ಹಿಡಿದರು. ಈ ವೇಳೆ ಬಿಜೆಪಿಯ ಇತರೆ ಸದಸ್ಯರು ಸಹ ಎದ್ದು ನಿಂತು ಮುಖ್ಯಮಂತ್ರಿಗಳ ಉತ್ತರಕ್ಕಾಗಿ ಆಗ್ರಹಿಸಿದರು.
ಬಿಜೆಪಿ ಸದಸ್ಯರ ಆಗ್ರಹಕ್ಕೆ ಪ್ರತಿಕ್ರಿಯಿಸದೆ ಮುಖ್ಯಮಂತ್ರಿಗಳು ಸದನದಿಂದ ಹೊರನಡೆಯಲು ಮುಂದಾದಾಗ, ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, "ಮುಖ್ಯಮಂತ್ರಿಗಳು ಹೀಗೆ ಪಲಾಯನವಾದ ಮಾಡಬಾರದು," ಎಂದು ಆಕ್ಷೇಪ ವ್ಯಕ್ತಪಡಿಸಿದರು. ತಕ್ಷಣ ತಮ್ಮ ಆಸನಕ್ಕೆ ಹಿಂತಿರುಗಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಈ ವಿಷಯದ ಬಗ್ಗೆ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಈಗಾಗಲೇ ಸಭಾನಾಯಕರು ಉತ್ತರ ನೀಡಿದ್ದಾರೆ. ಇದು ನಮ್ಮ ಪಕ್ಷದ ಆಂತರಿಕ ವಿಷಯವಾಗಿರುವುದರಿಂದ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ನನಗಿಲ್ಲ," ಎಂದು ಸ್ಪಷ್ಟಪಡಿಸಿದರು.