ಸಂಪುಟದಿಂದ ರಾಜಣ್ಣ ವಜಾ ; ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲಿಗರ ಸಜ್ಜು
ತುಮಕೂರು ಜಿಲ್ಲೆಯಿಂದ ಸುಮಾರು 80 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಈ ಅರೆಬೆತ್ತಲೆ ಪ್ರತಿಭಟನೆಯಲ್ಲಿ ಭಾಗವಹಿಸಲು ಸಜ್ಜಾಗಿದ್ದು, ಶೀಘ್ರದಲ್ಲೇ ದೆಹಲಿಗೆ ತೆರಳಲು ಸಿದ್ಧತೆ ನಡೆಯುತ್ತಿದೆ.;
ಸಹಕಾರ ಸಚಿವ ಕೆ.ಎನ್. ರಾಜಣ್ಣ
ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವ ಹೈಕಮಾಂಡ್ ನಿರ್ಧಾರ ಖಂಡಿಸಿ ಅಭಿಮಾನಿಗಳು ಹಾಗೂ ಬೆಂಬಲಿಗರು ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ.
ಕೆ.ಎನ್. ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಬೇಕೆಂಬ ಒತ್ತಾಯದೊಂದಿಗೆ ಮಧುಗಿರಿ ಹಾಗೂ ತುಮಕೂರಿನಲ್ಲಿರುವ ಅಭಿಮಾನಿಗಳು, ಹಿಂದುಳಿದ ವರ್ಗಗಳ ಒಕ್ಕೂಟದ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಅರೆಬೆತ್ತಲೆ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ.
ಜಿಲ್ಲೆಯಿಂದ ಸುಮಾರು 80 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಈ ಅರೆಬೆತ್ತಲೆ ಪ್ರತಿಭಟನೆಯಲ್ಲಿ ಭಾಗವಹಿಸಲು ಸಜ್ಜಾಗಿದ್ದು, ಶೀಘ್ರದಲ್ಲೇ ದೆಹಲಿಗೆ ತೆರಳಲು ಸಿದ್ಧತೆ ನಡೆಯುತ್ತಿದೆ. ರಾಜಣ್ಣ ಅವರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಮುಖಂಡ ಧನಿಯಾಕುಮಾರ್ ಹೇಳಿದ್ದಾರೆ.
ಕೆ.ಎನ್. ರಾಜಣ್ಣ ಅಭಿಮಾನಿಗಳ ಆಕ್ರೋಶದಿಂದ ಹೊಸ ಬೆಳವಣಿಗೆಗಳು ನಡೆಯಲಿವೆ ಎಂಬ ಮಾತುಗಳು ಪಕ್ಷದೊಳಗೆಕೇಳಿ ಬರುತ್ತಿವೆ. ಈ ಮಧ್ಯೆ, ಕೆ.ಎನ್. ರಾಜಣ್ಣ ಕೂಡ ಹೈಕಮಾಂಡ್ ಭೇಟಿ ಮಾಡಿ, ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಆ.12 ರಂದು ರಾಜಣ್ಣ ಅಭಿಮಾನಿಗಳು ಮಧುಗಿರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಾಜಣ್ಣ ಅಭಿಮಾನಿಯೊಬ್ಬರು ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆಯೂ ನಡೆದಿತ್ತು.
ಆಗಸ್ಟ್ 11 ರಂದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದರು. ಮುಖ್ಯಮಂತ್ರಿಯವರ ಶಿಫಾರಸ್ಸನ್ನು ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ಅಂಗೀಕರಿಸಿ, ಅಧಿಕೃತ ಆದೇಶ ಹೊರಡಿಸಿದ್ದರು.