ರಾಜಭವನ ಚಲೋ | NDA ನಾಯಕರ ಮೇಲೂ ಪ್ರಾಸಿಕ್ಯೂಷನ್ ಅನುಮತಿಗೆ ಕಾಂಗ್ರೆಸ್ ಆಗ್ರಹ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆಗೆ ಪೂರ್ವಾನುಮತಿ ಕೊಟ್ಟಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ತೀವ್ರಗೊಂಡಿದೆ.
ಆ ಸಂಘರ್ಷದ ಮುಂದುವರಿದ ಭಾಗವಾಗಿ, ಕಾಂಗ್ರೆಸ್ ನಾಯಕರು ಶನಿವಾರ(ಆ.31), ಸಿಎಂ ಸಿದ್ದರಾಮಯ್ಯ ಪ್ರಕರಣದಂತೆಯೇ ಬಿಜೆಪಿ, ಜೆಡಿಎಸ್ ನಾಯಕರ ಮೇಲಿನ ಪ್ರಕರಣಗಳ ಸಂಬಂಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಒತ್ತಾಯಿಸಿ ರಾಜಭವನ ಚಲೋ ಪ್ರತಿಭಟನೆ ನಡೆಸಿದರು.
ಎನ್‌ಡಿಎ ನಾಯಕರಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ ಹಾಗೂ ಶಶಿಕಲಾ ಜೊಲ್ಲೆ ವಿರುದ್ಧದ ಪ್ರಕರಣಗಳಲ್ಲಿ ಪ್ರಕರಣಗಳ ತನಿಖೆ ನಡೆಸಿದ ತನಿಖಾ ಸಂಸ್ಥೆಗಳೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿದ್ದರೂ ರಾಜ್ಯಪಾಲರು ಅನುಮತಿ ನೀಡಿಲ್ಲ. ಮೇಲಿನ ಪ್ರಕರಣಗಳಲ್ಲೂ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ನಾಯಕರು ವಿಧಾನಸೌಧ ಗಾಂಧಿ ಪ್ರತಿಮೆಯ ಎದುರಿನಿಂದ ಪ್ರತಿಭಟನೆ ಆರಂಭಿಸಿ, ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರು, ಶಾಸಕರು, ಸಂಸದರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿದ ಕೈ ನಾಯಕರು ಎನ್‌ಡಿಎ ನಾಯಕರ ಮೇಲೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಒತ್ತಾಯಿಸಿದರು.
ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದರೂ ಎಚ್.ಡಿ. ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ಪ್ರಕರಣಗಳ ವಿರುದ್ಧ ತನಿಖೆಗೆ ಅನುಮತಿ ಕೊಟ್ಟಿಲ್ಲ. ಕೂಡಲೇ ಈ ಪ್ರಕರಣಗಳ ಬಗ್ಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ನೀಡಿದ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಒಂದು ವೇಳೆ, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡದೇ ಹೋದರೆ ರಾಷ್ಟ್ರಪತಿಗಳ ಎದುರು ಸಂಸದರು, ಶಾಸಕರು ಪರೇಡ್ ನಡೆಸಲು ಕಾಂಗ್ರೆಸ್ ಚಿಂತನೆ ನಡೆಸಿದೆ.
ʻʻರಾಜ್ಯಪಾಲರು ಕೇಂದ್ರದ ಒತ್ತಡದಿಂದ ಸಿಎಂ ವಿರುದ್ಧ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಆದರೆ, ಲೋಕಾಯುಕ್ತರು ತನಿಖೆ ಮಾಡಿ ಚಾರ್ಜ್ ಶೀಟ್ ಹಾಕಿದ್ದರೂ ಎಚ್.ಡಿ. ಕುಮಾರಸ್ವಾಮಿ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿಲ್ಲ. ಜೊತೆಗೆ ನಿರಾಣಿ, ಜನಾರ್ದನ್ ರೆಡ್ಡಿ, ಜೊಲ್ಲೆಯವರ ಮೇಲಿನ ಪ್ರಕರಣಗಳ ಸಂಬಂಧ ಕೂಡ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲ. ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿಯಂತೆ ನಡೆದುಕೊಳ್ಳುತ್ತಿಲ್ಲ. ಅವರು ಕೇಂದ್ರದ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆʼʼ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.