ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ತಗ್ಗಿದ ಮಳೆ ಅಬ್ಬರ

ಬೆಳಗಾವಿಯಲ್ಲಿ ಪ್ರವಾಹದಿಂದ ಸುಮಾರು 46 ಹಳ್ಳಿಗಳು ಜಲಾವೃತವಾಗಿದ್ದು, 10,000 ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿತ್ತು. ಜಿಲ್ಲಾಡಳಿತವು 54 ಪರಿಹಾರ ಕೇಂದ್ರಗಳನ್ನು ತೆರೆದಿತ್ತು.

Update: 2024-08-07 06:16 GMT
ಬೆಳಗಾವಿ ಪ್ರವಾಹ
Click the Play button to listen to article


Heading

Content Area

ರಾಜ್ಯದಲ್ಲಿ ಜೂನ್‌ 1ರಿಂದ ಬಹುತೇಕ ಒಂದು ತಿಂಗಳ ಕಾಲ ನಿರಂತರವಾಗಿ ಸುರಿದ ಮಳೆಯ ಅಬ್ಬರ ಇದೀಗ ತುಸು ತಗ್ಗಿದೆ.

ಭಾರೀ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ನೂರಾರು ಕೋಟಿ ಮೌಲ್ಯದ ಬೆಳೆ ಮತ್ತು ವೈಯಕ್ತಿಕ ಆಸ್ತಿಪಾಸ್ತಿ ನಷ್ಟ ಸಂಭವಿಸಿದ್ದು, ಅಧಿಕೃತ ಅಂಕಿಅಂಶಗಳ ಪ್ರಕಾರ ಸೋಮವಾರದವರೆಗೆ ರಾಜ್ಯಾದ್ಯಂತ 17 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಒಟ್ಟು 512.83 ಕೋಟಿ ರೂ. ಪರಿಹಾರ ವಿತರಿಸಲಾಗಿದೆ.

ಅಂಕಿಅಂಶಗಳ ಪ್ರಕಾರ, ಜೂನ್ 1 ರಿಂದ ಈವರೆಗೆ, ರಾಜ್ಯದ 21 ಜಿಲ್ಲೆಗಳ 98 ತಾಲ್ಲೂಕುಗಳಲ್ಲಿ ಅಧಿಕ ಮಳೆಯಾಗಿದ್ದರೆ, 10 ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಿದೆ. ತುಮಕೂರು, ಚಾಮರಾಜನಗರ, ಮಂಡ್ಯ, ಹಾಸನ, ಬೆಳಗಾವಿ, ಮೈಸೂರಿನಲ್ಲಿ ವಾಡಿಕೆಗಿಂತ ಶೇ.50ಕ್ಕಿಂತ ಹೆಚ್ಚು ಮಳೆಯಾಗಿದೆ.

ಬೆಳಗಾವಿಯಲ್ಲಿ ಸುರಿದ ಭಾರೀ ಮಳೆಗೆ ಸುಮಾರು 46 ಹಳ್ಳಿಗಳು ಜಲಾವೃತವಾಗಿದ್ದು, 10,000 ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿತ್ತು. ಜಿಲ್ಲಾಡಳಿತವು 54 ಪರಿಹಾರ ಕೇಂದ್ರಗಳನ್ನು ತೆರೆದಿತ್ತು, ಆದರೆ ಪ್ರವಾಹ ನೀರು ಇಳಿಮುಖವಾದ ನಂತರ ಈಗ ಪರಿಸ್ಥಿತಿ ಸುಧಾರಿಸಿದೆ.

ಬೆಳೆ ಸಮೀಕ್ಷೆ ನಂತರ ಪರಿಹಾರ 

ಬೆಳಗಾವಿಯ ಕಾಗವಾಡ ತಾಲೂಕಿನ ಅತಿವೃಷ್ಟಿ ಪೀಡಿತ ಗ್ರಾಮಗಳಿಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲಿಸಿದರು.

ವರ್ಷದಿಂದ ವರ್ಷಕ್ಕೆ ಮುಳುಗಡೆಯಾಗುವ ಗ್ರಾಮಗಳ ಶಾಶ್ವತ ಸ್ಥಳಾಂತರ ಕುರಿತು ಚರ್ಚಿಸಲು ಜಿಲ್ಲೆಯ ಎಲ್ಲಾ ಶಾಸಕರ ಸಭೆಯನ್ನು ಸರ್ಕಾರ ಕರೆಯಲಿದೆ. ಶಹಾಪುರ, ಗಂಗಾವತಿ, ಜೂಗುಳ ಗ್ರಾಮಗಳ ಸುಮಾರು 3 ಸಾವಿರ ಕುಟುಂಬಗಳು ಪ್ರತಿ ಮಳೆಗಾಲದಲ್ಲಿ ಪ್ರವಾಹಕ್ಕೆ ತುತ್ತಾಗುತ್ತಿದ್ದು, ಶಾಶ್ವತ ಪರಿಹಾರಕ್ಕೆ ಬೇಡಿಕೆ ಇದೆ. ಸುಮಾರು 41,706 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 372 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಈಗಾಗಲೇ ಬೆಳೆ ಹಾನಿ ಸಮೀಕ್ಷೆಗೆ ಆದೇಶ ನೀಡಲಾಗಿದ್ದು, ಪೂರ್ಣಗೊಂಡ ಬಳಿಕ ಪರಿಹಾರ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಜಿಲ್ಲೆಯಲ್ಲಿ 48 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 950 ಮನೆಗಳು ಭಾಗಶಃ ಹಾನಿಯಾಗಿವೆ. ಭಾಗಶಃ ಹಾನಿಗೊಳಗಾದ ಮನೆಗಳಿಗೆ 6,500 ರೂಪಾಯಿ ನೀಡಬೇಕು ಎಂದು ಎನ್‌ಡಿಆರ್‌ಎಫ್ ನಿಯಮಗಳು ಹೇಳಿದರೆ, ರಾಜ್ಯ ಸರ್ಕಾರವು ಭಾಗಶಃ ಹಾನಿಗೊಳಗಾದ ಪ್ರತಿ ಮನೆಗೆ ಒಟ್ಟು 50,000 ರೂಪಾಯಿ ನೀಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಬೆಳಗಾವಿಯಲ್ಲಿ  27% ಹೆಚ್ಚು ಮಳೆ 

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಅಂಕಿಅಂಶಗಳ ಪ್ರಕಾರ, ಮಾನ್ಸೂನ್ ಪ್ರಾರಂಭವಾದಾಗಿನಿಂದ ಬೆಳಗಾವಿ ಜಿಲ್ಲೆಯಲ್ಲಿ ವಾಡಿಕೆಗಿಂತ 34% ಹೆಚ್ಚು ಮಳೆಯಾಗಿದೆ. ಜುಲೈನಲ್ಲಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಸುಮಾರು 88% ಹೆಚ್ಚು ಮತ್ತು ಆಗಸ್ಟ್ 6 ರವರೆಗೆ ಆಗಸ್ಟ್ ಮೊದಲ ವಾರದಲ್ಲಿ ವಾಡಿಕೆಗಿಂತ ಸುಮಾರು 27% ಹೆಚ್ಚು ಮಳೆಯಾಗಿದೆ.

ಬಾಗಲಕೋಟೆ ಜಿಲ್ಲೆಗೂ ಪ್ರವಾಹ ಭೀತಿ

ಬಾಗಲಕೋಟೆಯಲ್ಲಿ ಭಾರೀ ಮಳೆಯಾಗದಿದ್ದರೂ, ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆ ಜೋರಾದಾಗ ಆ ರಾಜ್ಯ ಹೆಚ್ಚುವರಿ ನೀರನ್ನು ನದಿಗೆ ಹರಿಸುವುದರಿಂದ ಜಿಲ್ಲೆಯ ಕೆಲವು ಭಾಗಗಳು ಜಲಾವೃತವಾಗುತ್ತವೆ. ಇದು ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳಲ್ಲಿ ಹೆಚ್ಚಿನ ಒಳಹರಿವಿಗೆ ಕಾರಣವಾಗುತ್ತದೆ. ಅಣೆಕಟ್ಟುಗಳಿಂದ ನೀರನ್ನು ಹೊರಬಿಡಲಾಗಿದ್ದು, ಜಿಲ್ಲೆಯ ಕೆಲವು ಭಾಗಗಳಲ್ಲಿ ಪ್ರವಾಹ ಉಂಟಾಗಿದೆ. ಬಾಗಲಕೋಟೆಯ ಸುಮಾರು 20 ಹಳ್ಳಿಗಳು ಜಲಾವೃತಗೊಂಡಾಗ ಜಿಲ್ಲಾಡಳಿತ 23 ಪರಿಹಾರ ಕೇಂದ್ರಗಳನ್ನು ತೆರೆದಿತ್ತು, ಆದರೆ ಪ್ರಸ್ತುತ 12 ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಜಮಖಂಡಿ ತಾಲೂಕಿನಲ್ಲಿ 1,350 ಜನರಿಗೆ ಆಶ್ರಯ ನೀಡಿವೆ. 

ರಾಜ್ಯದಲ್ಲಿ ಸದ್ಯ ಮಳೆ ಇಳಿಮುಖಗೊಂಡಿದ್ದು, ಉತ್ತರಕನ್ನಡ, ಚಿಕ್ಕಮಗಳೂರು, ಕೊಡಗು, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗುಲ್ಬರ್ಗ, ಯಾದಗಿರಿ, ಕಲಬುರಗಿ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಧಾರವಾಡ ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Tags:    

Similar News