ಇದು ರಾಹುಲ್ ಗ್ಯಾರಂಟಿ; ಅಮೆಜಾನ್, ಫ್ಲಿಪ್ಕಾರ್ಟ್ನಂಥ ಕಂಪನಿಗಳ ಕಾರ್ಮಿಕರಿಗೆ ಕಲ್ಯಾಣ ಮಂಡಳಿ
ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ ಗಿಗ್ ಕಾರ್ಮಿಕರ ಕಷ್ಟ ಆಲಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗಿಗ್ ಕಾರ್ಮಿಕರಿಗಾಗಿ ಕಾರ್ಯಕ್ರಮ ರೂಪಿಸುವ ಭರವಸೆ ನೀಡಿದ್ದರು. ಅದರಂತೆ ಕರ್ನಾಟಕ ಸರ್ಕಾರ ಕಲ್ಯಾಣ ಮಂಡಳಿ ಸ್ಥಾಪನೆಗೆ ಮುಂದಾಗಿದೆ.;
ಅಸಂಘಟಿತ ವಲಯದ ಫ್ಲಿಪ್‌ಕಾರ್ಟ್, ಅಮೆಜಾನ್ ಹಾಗೂ ಇತರೆ ಆನ್‌ಲೈನ್ ಸೇವೆಗಳಡಿ ದುಡಿಯುತ್ತಿರುವ ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಕಲ್ಯಾಣ ಮಂಡಳಿ ಸ್ಥಾಪಿಸಲು ನಿರ್ಧರಿಸಿದೆ. ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ ಗಿಗ್ ಕಾರ್ಮಿಕರ ಕಷ್ಟ ಆಲಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗಿಗ್ ಕಾರ್ಮಿಕರಿಗಾಗಿ ಕಾರ್ಯಕ್ರಮ ರೂಪಿಸುವ ಭರವಸೆ ನೀಡಿದ್ದರು.
ಅದರಂತೆ ಗುರುವಾರ ನವದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಹುಲ್ ಗಾಂಧಿ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡು, ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಗೆ ಒಪ್ಪಿಗೆ ನೀಡಿದರು. ಸಭೆಗೆ ಗಿಗ್ ಕಾರ್ಮಿಕರ ವಲಯದ ಪರವಾಗಿ ಕರ್ನಾಟಕದ ರಕ್ಷಿತಾ ದೇವ್, ಹೈದರಾಬಾದ್‌ನ ಶೇಖ್ ಸಲಾಹುದ್ದೀನ್, ನಿಖಿಲ್ ದೇವ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.
ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕ ಇಲಾಖೆ ಸಿದ್ದಪಡಿಸಿದ್ದ ಎಲ್ಲಾ ಎಂಟು ಅಂಶಗಳಿಗೆ ರಾಹುಲ್ ಗಾಂಧಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ಹಂತವಾಗಿ ಸಮಗ್ರ ಅಂಶಗಳನ್ನು ಒಳಗೊಂಡ ಮಸೂದೆಯನ್ನು ಸಂಪುಟದ ಮುಂದೆ ಮಂಡಿಸಲು ತೀರ್ಮಾನಿಸಲಾಯಿತು.
ಕಾರ್ಮಿಕ ಇಲಾಖೆ ಈಗಾಗಲೇ ಕಾರ್ಮಿಕರ ಗ್ರಾಚುಯಿಟಿ, ಸಿನಿಮಾ ಕಾರ್ಮಿಕರ ಬಿಲ್ ಸೇರಿ ಮೂರು ಪ್ರಮುಖ ಮಸೂದೆಗಳನ್ನು ತಂದಿದೆ. ಈಗ ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಕಾಯ್ದೆ ತರಲು ಮುಂದಾಗಿರುವುದಕ್ಕೆ ರಾಜ್ಯದ ಅಸಂಘಟಿತ ಕಾರ್ಮಿಕ ವಲಯ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ.
ಗಿಗ್ ಕಾರ್ಮಿಕರು ಯಾರು?
ಆನ್‌ಲೈನ್ ಪ್ಲಾಟ್‌ಫಾರ್ಮ್,ಗುತ್ತಿಗೆ ಸಂಸ್ಥೆ, ಬೇಡಿಕೆಯ ಆಧಾರದ ಮೇಲೆ ಕಾರ್ಯನಿರ್ವಹಿಸುವವರು, ತಾತ್ಕಾಲಿಕ ಕೆಲಸಗಾರರನ್ನು ಗಿಗ್ ಕಾರ್ಮಿಕರು ಎಂದು ಕರೆಯಲಾಗುತ್ತದೆ. ಗಿಗ್ ಕೆಲಸಗಾರರು ಕಂಪನಿಯ ಸೇವೆಗಳನ್ನು ಗ್ರಾಹಕರಿಗೆ ಒದಗಿಸುವ ಕೆಲಸ ಮಾಡಲಿದ್ದಾರೆ. ಈ ಸಂಬಂಧ ಕಂಪನಿಗಳೊಂದಿಗೆ ಔಪಚಾರಿಕ ಒಪ್ಪಂದ ಮಾಡಿಕೊಂಡಿರುತ್ತಾರೆ. ಇವರಿಗೆ ಸೇವಾ ಭದ್ರತೆ ಇರುವುದಿಲ್ಲ.