ಘಟಪ್ರಭಾ ನದಿ ಪ್ರವಾಹ ಪರಿಹಾರ ಕುರಿತು ಶೀಘ್ರ ಕ್ರಮ: ಸಿಎಂ ಸಿದ್ದರಾಮಯ್ಯ

Update: 2024-08-28 09:07 GMT

ಘಟಪ್ರಭಾ ನದಿಯ ಪ್ರವಾಹದಿಂದಾಗಿ ಪ್ರತಿವರ್ಷ ಉಂಟಾಗುತ್ತಿರುವ ಹಾನಿಯ ಕುರಿತು ಸಂಬಂಧಪಟ್ಟ ಇಲಾಖೆ ಸಚಿವರೊಂದಿಗೆ ಸಭೆ ನಡೆಸಿ ಸೂಕ್ರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬುಧವಾರ ಬೆಂಗಳೂರಿನಲ್ಲಿ ತಮ್ಮನ್ನು ಭೇಟಿಯಾದ ಮುಧೋಳ ತಾಲೂಕಿನ ರೈತರ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದರು. ನೀರಾವರಿ ಸಚಿವರು, ಕಂದಾಯ ಸಚಿವರು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರೊಂದಿಗೆ ಆದಷ್ಟು ಬೇಗನೆ ಸಭೆ ನಡೆಸಿ ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಘಟಪ್ರಭಾ ನದಿಯ ಪ್ರವಾಹದಿಂದಾಗಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು 34639 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 2019 ರಲ್ಲಿ 15088 ಹೆಕ್ಟೇರ್‌, 2021ರಲ್ಲಿ 7051 ಹೆಕ್ಟೇರ್ ಮತ್ತು 2024‌ ರಲ್ಲಿ 12500 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿದೆ. ಇದಕ್ಕೆ ಸೂಕ್ತ ಬೆಳೆ ಪರಿಹಾರ ಹಾಗೂ ಶಾಶ್ವತ ಪರಿಹಾರ ಒದಗಿಸಬೇಕು ಎಂದು ರೈತರ ನಿಯೋಗ ಮನವಿ ಮಾಡಿತು.

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ನೀರಾವರಿ ಕ್ಷೇತ್ರದ ಕಬ್ಬಿನ ಬೆಳೆಗೆ ಪ್ರತಿ ಹೆಕ್ಟೇರಿಗೆ ರೂ. 22,500 ರಂತೆ ಪರಿಹಾರ ಧನ ನಿಗದಿಪಡಿಸಲಾಗಿದ್ದು, ಇತರ ಬೆಳೆಗಳಿಗೆ ರೂ. 17000 ನಿಗದಿಪಡಿಸಲಾಗಿದೆ. ಇದರಿಂದ ರೈತರಿಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ. ಈಗಾಗಲೇ ಕೃಷಿ ವಿಶ್ವವಿದ್ಯಾಲಯ ಕರ್ನಾಟಕದ ಕಬ್ಬು ಬೆಳೆಯಲು ತಗಲುವ ವೆಚ್ಚ ಪ್ರತಿ ಹೆಕ್ಟೇರ್‌ಗೆ 1.50 ಲಕ್ಷ ರೂ. ನಿಗದಿಪಡಿಸಿದ್ದು, ಇದು ಸಹ ಅವೈಜ್ಞಾನಿಕವಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇದು ಕನಿಷ್ಟವಾಗಿದ್ದು, ಪ್ರತಿ ಎಕರೆ ಕಬ್ಬು ಬೆಳೆಗೆ ರೂ. 1 ಲಕ್ಷ ಹಾಗೂ ಇತರ ಬೆಳೆಗಳಿಗೆ ರೂ.50 ಸಾವಿರ ಪರಿಹಾರವನ್ನು ನೀಡಬೇಕು ಎಂದು ರೈತ ನಿಯೋಗ ಮನವಿ ಮಾಡಿತು.

ಎನ್‌.ಡಿ.ಆರ್.ಎಫ್‌ ಮತ್ತು ಎಸ್.ಡಿ.ಆರ್.ಎಫ್‌ ಮಾನದಂಡಗಳನ್ನು ಪರಿಗಣಿಸದೆ ಹಾನಿಗೊಳಗಾದ ಎಲ್ಲಾ ಕ್ಷೇತ್ರಕ್ಕೂ ಪರಿಹಾರ ಧನವನ್ನು ನೀಡಬೇಕು ಎಂದು ರೈತರು ಮನವಿ ಸಲ್ಲಿಸಿದರು. ಅಬಕಾರಿ ಸಚಿವ ಆರ್.‌ ಬಿ.ತಿಮ್ಮಾಪುರ ಮತ್ತಿತರರು ಉಪಸ್ಥಿತರಿದ್ದರು.

Tags:    

Similar News