Public Exam Issue | ವಿದ್ಯಾರ್ಥಿಗಳಿಗೆ ಯಾಕೆ ಕಿರುಕುಳ ನೀಡುತ್ತಿದ್ದೀರಿ: ಮತ್ತೆ ಚಾಟಿ ಬೀಸಿದ ಸುಪ್ರೀಂಕೋರ್ಟ್‌

ನಿಮಗೆ ನಿಜವಾಗಿಯೂ ವಿದ್ಯಾರ್ಥಿಗಳ ಹಿತದ ಬಗ್ಗೆ ಕಾಳಜಿ ಇದ್ದರೆ ದಯವಿಟ್ಟು ಒಳ್ಳೆಯ ಶಾಲೆಗಳನ್ನು ತೆರೆಯಿರಿ. ಮಕ್ಕಳಿಗೆ ಈ ರೀತಿ ಕಿರುಕುಳ ನೀಡಬೇಡಿ ಎಂದು ಸುಪ್ರೀಂಕೋರ್ಟ್‌ ಮತ್ತೊಮ್ಮೆ ಚಾಟಿ ಬೀಸಿದೆ;

Update: 2024-10-21 08:54 GMT
ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು 8-10 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ನಡೆಸಬಾರದು ಎಂದು ನಿರ್ದೇಶಿಸಿದೆ.
Click the Play button to listen to article

ಮುಂದಿನ ಆದೇಶದವರೆಗೆ ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ 8, 9 ಮತ್ತು 10ನೇ ತರಗತಿಗಳ ಬೋರ್ಡ್(ಪಬ್ಲಿಕ್)‌ ಅರ್ಧವಾರ್ಷಿಕ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಬಾರದು ಎಂದು ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ (ಕೆಎಸ್‌ಇಎಬಿ) ಸಂಯೋಜಿತವಾಗಿರುವ ಶಾಲೆಗಳಲ್ಲಿ 5, 8, 9 ಮತ್ತು 11 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಕರ್ನಾಟಕ ಸರ್ಕಾರದ ನಿರ್ಧಾರದ ವಿರುದ್ಧದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಎಸ್‌ಸಿ ಶರ್ಮಾ ಅವರ ದ್ವಿಸದಸ್ಯ ಪೀಠವು ಮುಂದಿನ ಆದೇಶದವರೆಗೆ 8, 9 ಮತ್ತು 10 ನೇ ತರಗತಿಗಳ ಅರ್ಧವಾರ್ಷಿಕ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸದಂತೆ ನಿರ್ಬಂಧಿಸಿದೆ. 

“ವಿದ್ಯಾರ್ಥಿಗಳಿಗೆ ಯಾಕೆ ಇಷ್ಟೊಂದು ಕಿರುಕುಳ ನೀಡುತ್ತಿದ್ದೀರಿ? ನಿಮ್ಮದೇ ರಾಜ್ಯ, ನಿಮ್ಮದೇ ಮಕ್ಕಳು. ನೀವು ಈ ರೀತಿಯಾಗಿ ವರ್ತಿಸಬಾರದು. ಇದು ರಾಜ್ಯದ ಅಹಂ ಸಮಸ್ಯೆ ಎಂದು ವ್ಯಾಖ್ಯಾನಿಸಿದ ಪೀಠ, ನಿಮಗೆ ನಿಜವಾಗಿಯೂ ವಿದ್ಯಾರ್ಥಿಗಳ ಹಿತದ ಬಗ್ಗೆ ಕಾಳಜಿ ಇದ್ದರೆ ದಯವಿಟ್ಟು ಒಳ್ಳೆಯ ಶಾಲೆಗಳನ್ನು ತೆರೆಯಿರಿ. ಮಕ್ಕಳಿಗೆ ಈ ರೀತಿ ಕಿರುಕುಳ ನೀಡಬೇಡಿ ಎಂದು ಕರ್ನಾಟಕ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ ಕಾಮತ್ ಅವರಿಗೆ ಪೀಠ ಹೇಳಿದೆ. ಕರ್ನಾಟಕ ಸರ್ಕಾರ ಅನುಸರಿಸುತ್ತಿರುವ ಶಿಕ್ಷಣದ ಮಾದರಿಯನ್ನು ಬೇರೆ ಯಾವುದೇ ರಾಜ್ಯಗಳು ಅನುಸರಿಸುತ್ತಿಲ್ಲ ಎಂದೂ ಪೀಠ ಹೇಳಿದೆ. 

ರಾಜ್ಯದ ಏಳು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 5, 8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಸುತ್ತೋಲೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಇತರ 24 ಜಿಲ್ಲೆಗಳಲ್ಲಿ‌ ಈಗಾಗಲೇ ಪರೀಕ್ಷೆ ನಡೆಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ.

ವಿದ್ಯಾರ್ಥಿಗಳ ಅಂಕಗಳ ಕುಸಿತದಿಂದ ಪರೀಕ್ಷೆಗಳನ್ನು ಆರಂಭಿಸಲಾಗಿದೆ ಎಂದು ಅಫಿಡವಿಟ್ ಸಲ್ಲಿಸುವುದಾಗಿ ಕರ್ನಾಟಕ ಸರ್ಕಾರದ ವಕೀಲರು ತಿಳಿಸಿದ್ದಾರೆ. ಅಫಿಡವಿಟ್ ಸಲ್ಲಿಸಲು ಕರ್ನಾಟಕ ಸರ್ಕಾರಕ್ಕೆ ನ್ಯಾಯಾಲಯ ಕಾಲಾವಕಾಶ ನೀಡಿತು. ಆದರೆ ಈ ಮಧ್ಯೆ 8, 9 ಮತ್ತು 10 ನೇ ತರಗತಿಗಳ ಅರ್ಧವಾರ್ಷಿಕ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಮುಂದಿನ ಆದೇಶದವರೆಗೆ ಯಾವುದೇ ಜಿಲ್ಲೆಯಲ್ಲಿ ಪ್ರಕಟಿಸಬಾರದು ಎಂದು ಆದೇಶಿಸಿದೆ.

ನಾಲ್ಕು ವಾರಗಳಲ್ಲಿ ಪರೀಕ್ಷೆಯ ನಿಖರವಾದ ವಿವರಗಳನ್ನು ನೀಡುವ ಅಫಿಡವಿಟ್ ಸಲ್ಲಿಸಲು ರಾಜ್ಯ ಸುಪ್ರೀಂ ಕೋರ್ಟ್‌ ಸರ್ಕಾರವನ್ನು ಕೇಳಿದೆ. ಮಾರ್ಚ್ 22 ರಂದು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಸ್ಥೆ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ಏಕ ನ್ಯಾಯಾಧೀಶರ ಪೀಠದ ಮಾರ್ಚ್ 6 ರ ಆದೇಶವನ್ನು ತಳ್ಳಿಹಾಕಿ 2023-24ನೇ ಶೈಕ್ಷಣಿಕ ವರ್ಷಕ್ಕೆ ವಿವಿಧ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಹೈಕೋರ್ಟ್‌ನ ವಿಭಾಗೀಯ ಪೀಠವು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿತ್ತು. ಆದರೆ, ಆ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಬಳಿಕ ಕಳೆದ ಏಪ್ರಿಲ್‌ನಲ್ಲಿ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ, ಪಬ್ಲಿಕ್‌ ಪರೀಕ್ಷೆಯ ಫಲಿತಾಂಶ ಪ್ರಕಟಿಸದಂತೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ನೀಡಿತ್ತು. ಅಲ್ಲದೆ, ಪ್ರಕರಣದ ತೀರ್ಪು ಬರುವವರೆಗೆ ಯಾವುದೇ ಕಾರಣಕ್ಕೂ ಪಬ್ಲಿಕ್‌ ಅಥವಾ ಬೋರ್ಡ್‌ ಪರೀಕ್ಷೆ ನಡೆಸದಂತೆ ಸೂಚನೆ ನೀಡಿತ್ತು.

Tags:    

Similar News