ಸಮಸ್ಯೆ ಬಗೆಹರಿಸದಿದ್ದರೆ ಸಚಿವರು ಯಾಕೆ: ಉಸ್ತುವಾರಿ ರಣದೀಪ್ ಸುರ್ಜೇವಾಲ ಪ್ರಶ್ನೆ
ಶಾಸಕರು ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ಅವರ ಶಿಫಾರಸ್ಸು ಪತ್ರಗಳಿಗೂ ಮಾನ್ಯತೆ ನೀಡುತ್ತಿಲ್ಲ ಎಂದು ಹಲವು ಶಾಸಕರು ದೂರು ನೀಡಿದ್ದಾರೆ ಎಂದು ಉಸ್ತುವಾರಿ ರಣದೀಪ್ ಸುರ್ಜೇವಾಲ ತಿಳಿಸಿದರು.;
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ
ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಹಾಗೂ ಕೆಲವು ಸಚಿವರು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಎಂಬ ಶಾಸಕರ ದೂರಿನ ಹಿನ್ನೆಲೆಯಲ್ಲಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಚಿವರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಸೋಮವಾರ (ಜುಲೈ 14) ಮತ್ತು ಮಂಗಳವಾರ (ಜುಲೈ 15) ನಡೆದ ಈ ಒನ್-ಟು-ಒನ್ ಸಭೆಗಳಲ್ಲಿ ಸುರ್ಜೇವಾಲಾ ಅವರು ಸಚಿವರುಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
ಇತ್ತೀಚೆಗೆ ಶಾಸಕರೊಂದಿಗೆ ಸುರ್ಜೇವಾಲಾ ನಡೆಸಿದ್ದ 'ಒನ್-ಟು-ಒನ್' ಸಭೆಗಳಲ್ಲಿ ಹಲವು ಶಾಸಕರು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅನುದಾನ ವಿತರಣೆಯಲ್ಲಿ ತಾರತಮ್ಯ, ಶಾಸಕರ ಶಿಫಾರಸ್ಸುಗಳಿಗೆ ಮಾನ್ಯತೆ ನೀಡದಿರುವುದು ಮತ್ತು ಸಚಿವರ ಅನುಚಿತ ವರ್ತನೆಗಳ ಬಗ್ಗೆ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ, ಶಾಸಕರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಸೂಚಿಸುವಂತೆ ಸಚಿವರುಗಳಿಗೆ ಸುರ್ಜೇವಾಲಾ ಸೂಚಿಸಿದ್ದಾರೆ.
ಯಾವ ಸಚಿವರೊಂದಿಗೆ ಸಭೆ?
ಮಂಗಳವಾರದಂದು (ಜುಲೈ 15) ಶಿಕ್ಷಣ ಸಚಿವ ಮಧು ಬಂಗಾರಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಣ್ಣ ನೀರಾವರಿ ಸಚಿವ ಭೋಸ್ ರಾಜ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಉನ್ನತ ಶಿಕ್ಷಣ ಸಚಿವ ಡಿ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಸುರ್ಜೇವಾಲಾ ಪ್ರತ್ಯೇಕವಾಗಿ ಚರ್ಚೆ ನಡೆಸಿದರು.
ಸೋಮವಾರದಂದು (ಜುಲೈ 14) ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್, ವಸತಿ ಸಚಿವ ಜಮೀರ್ ಅಹಮ್ಮದ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಮತ್ತು ಪುನಃ ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ಒನ್-ಟು-ಒನ್ ಚರ್ಚೆ ನಡೆಸಿ ಸಲಹೆಗಳನ್ನು ನೀಡಿದ್ದರು.
ಸುರ್ಜೇವಾಲಾ ನೀಡಿದ ಸೂಚನೆಗಳು: "ಸಮಸ್ಯೆ ಪರಿಹರಿಸದಿದ್ದರೆ ಸಚಿವರು ಯಾಕೆ?"
ಸಭೆಗಳಲ್ಲಿ ಸುರ್ಜೇವಾಲಾ ಅವರು ವಿವಿಧ ಇಲಾಖೆಗಳಲ್ಲಿನ ಕಾರ್ಯಕ್ರಮಗಳು ಮತ್ತು ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಶಾಸಕರ ದೂರುಗಳ ಪಟ್ಟಿಯನ್ನು ಸಂಬಂಧಪಟ್ಟ ಸಚಿವರ ಮುಂದಿಟ್ಟು, ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸುವಂತೆ ತಾಕೀತು ಮಾಡಿದರು. "ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಸಚಿವರು ಯಾಕಿರಬೇಕು? ಶಾಸಕರು ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ಅವರ ಶಿಫಾರಸ್ಸು ಪತ್ರಗಳಿಗೂ ಮಾನ್ಯತೆ ನೀಡುತ್ತಿಲ್ಲ ಎಂದು ಹಲವು ಶಾಸಕರು ದೂರು ನೀಡಿದ್ದಾರೆ" ಎಂದು ಸುರ್ಜೇವಾಲಾ ಸಚಿವರ ಗಮನಕ್ಕೆ ತಂದರು.
ಶಾಸಕರ ಅಭಿಪ್ರಾಯ ಸಂಗ್ರಹ
ರಾಜ್ಯ ಸರ್ಕಾರದ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕರೊಂದಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನಡೆಸಿದ್ದ 'ಒನ್ ಟು ಒನ್' ಸಭೆಗಳು ಇತ್ತೀಚೆಗೆ ಮುಕ್ತಾಯವಾಗಿದ್ದವು. ಕಳೆದ ವಾರ ಮೊದಲ ಹಂತದಲ್ಲಿ 42 ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದ ಸುರ್ಜೇವಾಲಾ, ಎರಡನೇ ಹಂತದಲ್ಲಿ ಉಳಿದ ಶಾಸಕರೊಂದಿಗೆ ಸಭೆ ನಡೆಸಿದ್ದು ಬುಧವಾರ (ಜುಲೈ 9) ಅಂತ್ಯವಾಗಿತ್ತು. ಒಟ್ಟು 101 ಶಾಸಕರೊಂದಿಗೆ ಸಭೆ ನಡೆಸಿ ಅಭಿಪ್ರಾಯಗಳನ್ನು ಕಲೆಹಾಕಿದ ಸುರ್ಜೇವಾಲಾ, ನಂತರ ದೆಹಲಿಗೆ ತೆರಳಿ ಹೈಕಮಾಂಡ್‌ಗೆ ಸಂಪೂರ್ಣ ವರದಿ ಸಲ್ಲಿಸಿದ್ದರು.
ಈ ಸಭೆಗಳಲ್ಲಿ ಅನುದಾನದ ವಿತರಣೆ, ಕ್ಷೇತ್ರದ ಅಭಿವೃದ್ಧಿ, ಸಚಿವರ ಕಾರ್ಯವೈಖರಿ ಹಾಗೂ ಸರ್ಕಾರದ ಆಡಳಿತ ವ್ಯವಸ್ಥೆ ಬಗ್ಗೆ ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಕೇಳಿದ್ದರು. ಪ್ರತಿ ಶಾಸಕರ ಅಭಿಪ್ರಾಯವನ್ನು ಆಲಿಸಿದ ಸುರ್ಜೇವಾಲಾ ಅವರು ಈ ವರದಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸಲ್ಲಿಸಿದ್ದಾರೆ.
ಶಾಸಕರ ಅಸಮಾಧಾನವನ್ನು ಕಡಿಮೆ ಮಾಡಿ, ಸರ್ಕಾರ ಮತ್ತು ಪಕ್ಷದ ನಡುವೆ ಉತ್ತಮ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಈ ಸಭೆಗಳು ಮಹತ್ವದ ಪಾತ್ರ ವಹಿಸಿವೆ ಎಂದು ಹೇಳಲಾಗುತ್ತಿದೆ.