ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ಸಾವು | ಕರ್ತವ್ಯಕ್ಕೆ ಹಾಜರಾಗಲು ಹೊರಟ ದಿನವೇ ಅಪಘಾತಕ್ಕೆ ಬಲಿ

ಕರ್ನಾಟಕ ಕೇಡರ್ ಅಧಿಕಾರಿಯಾಗಿದ್ದ ಹರ್ಷವರ್ಧನ್ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ ಹಾಸನ ಜಿಲ್ಲೆಯ ಹೊಳೆನರಸೀಪುರ ವಿಭಾಗದ ಪ್ರೊಬೇಷನರಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ವರದಿ ಮಾಡಿಕೊಳ್ಳಲು ತೆರಳುತ್ತಿದ್ದರು.

Update: 2024-12-02 08:20 GMT

ಹಾಸನ ತಾಲೂಕಿನ ಕಿತ್ತಾನೆ ಬಳಿ ಭಾನುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್ (26) ಮೃತಪಟ್ಟಿದ್ದಾರೆ. ಮೂಲತಃ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ದೋಸಾರ್ ಗ್ರಾಮದ ಹರ್ಷವರ್ಧನ್ 2023 ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದರು.

ಕರ್ನಾಟಕ ಕೇಡರ್ ಅಧಿಕಾರಿಯಾಗಿದ್ದ ಹರ್ಷವರ್ಧನ್ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ ಹಾಸನ ಜಿಲ್ಲೆಯ ಹೊಳೆನರಸೀಪುರ ವಿಭಾಗದ ಪ್ರೊಬೇಷನರಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. 

ಕಿತ್ತಾನೆ ಸಮೀಪ ಹರ್ಷವರ್ಧನ್ ತೆರಳುತ್ತಿದ್ದ ಪೊಲೀಸ್ ಜೀಪ್ ಟೈರ್ ಸ್ಫೋಟಗೊಂಡು ರಸ್ತೆಯ ಎಡಭಾಗದ ತಡೆಕಂಬಗಳಿಗೆ ಡಿಕ್ಕಿ ಹೊಡೆದು ನಂತರ ತೆಂಗಿನ ಮರಕ್ಕೆ ಡಿಕ್ಕಿಯಾಗಿ ಮನೆಗೆ ತಾಕಿದೆ. ತೀವ್ರ ಗಾಯಗೊಂಡಿದ್ದ ಹರ್ಷವರ್ಧನ್ ಅವರನ್ನು ಆಂಬುಲೆನ್ಸ್ ಮೂಲಕ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಝೀರೋ ಟ್ರಾಫಿಕ್ನಲ್ಲಿ ಬೆಂಗಳೂರಿಗೆ ಕರೆದೊಯ್ಯಲು ಸಿದ್ಧತೆ ನಡೆಸಲಾಗುತ್ತಿತ್ತು. ಅಷ್ಟರಲ್ಲಿ ಹರ್ಷವರ್ಧನ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಪ್ರಕಟಿಸಿದರು.

ಘಟನೆಯಲ್ಲಿ ಜೀಪ್ ಚಾಲಕನಾದ ಹಾಸನ ಡಿಎಆರ್ ಕಾನ್ಸ್ಟೆಬಲ್ ಮಂಜೇಗೌಡಗೆ ಸಣ್ಣಪುಟ್ಟ ಗಾಯಗಳಾಗಿವೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರೊಬೇಷನರಿ ಐಪಿಎಸ್ ಅಧಿಕಾರಿ ಸಾವಿಗೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿಪರಮೇಶ್ವರ್, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮೊಹಮದ್ ಸುಜೀತಾ ಸಂತಾಪ ಸೂಚಿಸಿದ್ದಾರೆ.

ಮಧ್ಯಪ್ರದೇಶದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಅವರ ಪುತ್ರನಾದ ಹರ್ಷವರ್ಧನ್, ಎಂಜಿನಿಯರಿಂಗ್ ಪದವೀಧರರಾಗಿದ್ದರು. ಮೈಸೂರಿನಲ್ಲಿ ನಾಲ್ಕು ವಾರಗಳ ತರಬೇತಿ ಮುಗಿಸಿ, ಹಾಸನದಲ್ಲಿ ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದರು. ಮುಂದಿನ ಆರು ತಿಂಗಳ ಕಾಲ ಹಾಸನದಲ್ಲಿ ಪ್ರೊಬೇಷನರಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಬೇಕಾಗಿತ್ತು.

Tags:    

Similar News