ಬಿಜೆಪಿಯೇತರ ಸರ್ಕಾರಗಳ ಹಣಿಯಲು ರಾಜ್ಯಪಾಲರ ಬಳಕೆ: ಪಟ್ಟಿ ನೀಡಿದ ಪ್ರಿಯಾಂಕ್‌ ಖರ್ಗೆ

Update: 2024-08-18 10:33 GMT

ಮೈಸೂರು ಮುಡಾ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ  ಪ್ರಕರಣದಿಂದಾಗಿ ರಾಜ್ಯಪಾಲರ ನಡೆ ಹಾಗೂ ಅವರ ಕಾರ್ಯಗಳ ಮೇಲೆ ಬೆಳಕು ಚೆಲ್ಲಿದಂತಾಗಿದೆ.  ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಹೇಗೆ ತಮ್ಮ ಮಾತು ಕೇಳದ ಸರ್ಕಾರಗಳಿಗೆ ತೊಂದರೆ ಕೊಡಲು ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರೂ ಆಗಿರುವ ಸಚಿವ ಪ್ರಿಯಾಂಕ್‌ ಖರ್ಗೆ ಟೀಕಿಸಿದ್ದಾರೆ.

ಮಾಧ್ಯಮದ ಜತೆ ಮಾತನಾಡಿದ ಅವರು,  ರಾಜ್ಯಪಾಲರ ಕಾರ್ಯಭಾರಗಳ ಮೇಲೆ ಅನೇಕ ಬಾರಿ ಚರ್ಚೆಯಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಆರ್ಟಿಕಲ್ 163 ರ ಪ್ರಕಾರ ಹೀಗೆ ಹೇಳಿದ್ದಾರೆ. ರಾಜ್ಯಪಾಲರು ಮಂತ್ರಿಗಳ ಕೌನ್ಸಿಲ್ ಮೂಲಕ ಸಲಹೆಗಳನ್ನು ಪಡೆಯಬೇಕು. ಆದರೆ, ರಾಜ್ಯಪಾಲರು ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಹೇಗೆ ಹಣಿಯುತ್ತಿದ್ದಾರೆ ಎಂದು ವಿವರಗಳನ್ನು ನೀಡಿದರು.

ವಿ.ಜಿ.ಖೇರ್ ಅವರು ಬಾಂಬೆಯ ಮೊದಲ ರಾಜ್ಯಪಾಲರು. ರಾಜ್ಯಪಾಲರು ತಮಗೆ ಇರುವ ಅಲ್ಪಶಕ್ತಿಯಲ್ಲಿ ಹೆಚ್ಚು ಕೆಲಸ ಮಾಡಬಹುದು. ಜೊತೆಗೆ ದುರಾಡಳಿತ ಮಾಡಬೇಕು ಎಂದು ಸಂವಿಧಾನವನ್ನು ತಿರುಚಿ ಕೆಲಸ ಮಾಡಲು ತೊಡಗಿದರೆ ಅದನ್ನು ಕೂಡ ಮಾಡಬಹುದು ಎಂದು ಹೀಗೆ ಹೇಳಿದ್ದರು. ಇದೇ ರೀತಿಯ ಘಟನೆ ಕರ್ನಾಟಕದಲ್ಲಿ ನಡೆಯುತ್ತಿದೆ ರಾಜ್ಯಪಾಲರು ತಮ್ಮ ಅಧಿಕಾರವನ್ನು ದುರಾಡಳಿತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಾವು ಸುಮ್ಮನೆ ರಾಜ್ಯಪಾಲರ ಮೇಲೆ ಆರೋಪವನ್ನು ಮಾಡುತ್ತಿಲ್ಲ, ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಐಟಿ, ಇಡಿ, ಸಿಬಿಐ ಹಾಗೂ ರಾಜ್ಯಪಾಲರನ್ನು ಬಳಸಿ ತಮ್ಮ ಮಾತು ಕೇಳದ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದೆ  ಎಂದರು.

ಖರ್ಗೆ ನೀಡಿದ ರಾಜ್ಯಪಾಲರ ದುರ್ಬಳಕೆ ಪಟ್ಟಿ

  • 2019ರ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆಯುವುದಿಲ್ಲ. ಆದರೆ ಅಲ್ಲಿನ ರಾಜ್ಯಪಾಲರು ದೇವೇಂದ್ರ ಫಡ್ನವಿಸ್ ಅವರಿಗೆ ಬೆಳಗಿನ ಜಾವ ಐದು ಗಂಟೆಗೆ ಪ್ರಮಾಣವಚನ ಬೋಧಿಸುತ್ತಾರೆ. ಈ ಸರ್ಕಾರ ಕೇವಲ 80 ಗಂಟೆಗಳಲ್ಲಿ ಬಿದ್ದು ಹೋಗುತ್ತದೆ.
  • ಉದ್ದವ್ ಠಾಕ್ರೆ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಅವರನ್ನು ಮೇಲ್ಮನೆಗೆ ಕಳಿಸಬೇಕು ಎಂದು ತೀರ್ಮಾನ ಮಾಡಲಾಗುತ್ತದೆ. ಇದಕ್ಕೆ ರಾಜ್ಯಪಾಲರು ಆರು ತಿಂಗಳ ಕಾಲ ಅನುಮೋದನೆಯನ್ನೇ ನೀಡುವುದಿಲ್ಲ. ಆನಂತರ ಉದ್ದವ್ ಠಾಕ್ರೆ ಅವರು ದೆಹಲಿಗೆ ತೆರಳಿ ರಾಷ್ಟ್ರಪತಿಗಳು ಹಾಗೂ ಪ್ರಧಾನಿಗಳ ಗಮನಕ್ಕೆ ತಂದು ಇದು ಅಸಾಂವಿಧಾನಿಕ ನಡೆ ಎಂದಾಗ ಠಾಕ್ರೆ ಅವರಿಗೆ ಅವಕಾಶ ಸಿಗುತ್ತದೆ.
  • ಪಶ್ಚಿಮ ಬಂಗಾಳ ರಾಜ್ಯಪಾಲರಾಗಿದ್ದ ಜಗದೀಪ್ ಧನಕರ್ ಅವರ ರಾಜಕೀಯ ಹಸ್ತಕ್ಷೇಪದಿಂದ ಕಾನೂನು ಸಂಘರ್ಷ ಉಂಟಾಗಿತ್ತು. ಕೇರಳದ ರಾಜ್ಯಪಾಲರಾಗಿದ್ದ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಸರ್ಕಾರವು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕರಾಳ ಕಾಯ್ದೆಗಳ ವಿರುದ್ಧ ವಿಶೇಷ ಅಧಿವೇಶ ನಡೆಸಲು ಅನುಮತಿ ನೀಡಬೇಕೆಂದು ಪತ್ರ ಬರೆಯುತ್ತದೆ. ಆದರೆ ರಾಜ್ಯಪಾಲರು ಅಧಿವೇಶ ನಡೆಸಲು ಅನುಮತಿಯನ್ನೇ ನೀಡುವುದಿಲ್ಲ.
  • 2018ರಲ್ಲಿ ಕರ್ನಾಟಕದಲ್ಲಿ ರಾಜ್ಯಪಾಲರಾಗಿದ್ದ ವಾಜುಬಾಯಿ ವಾಲಾ ಅವರು ಯಡಿಯೂರಪ್ಪನವರಿಗೆ ಬಹುಮತ ಇಲ್ಲದಿದ್ದರೂ ಸಹ ಪ್ರಮಾಣ ವಚನ ಬೋಧಿಸಿ 15 ದಿನಗಳ ಒಳಗೆ ಬಹುಮತ ಸಾಬೀತು ಪಡಿಸಲು ಅವಕಾಶ ನೀಡಿದ್ದರು. ಆಗ ಕಾಂಗ್ರೆಸ್ ಪಕ್ಷವು ಸುಪ್ರೀಂಕೋರ್ಟ್ ಗೆ ಹೋದಾಗ ನ್ಯಾಯಾಲಯವು 15 ದಿನ ಅಲ್ಲ ಕೇವಲ ಮೂರು ದಿನದಲ್ಲಿ ಸಾಬೀತು ಪಡಿಸುವಂತೆ ಹೇಳಿತು. ಆನಂತರ ಸರ್ಕಾರ ಬಿದ್ದುಹೋಯಿತು.
  • ನವೆಂಬರ್ 2023ರಲ್ಲಿ ಸುಪ್ರೀಂ ಕೋರ್ಟ್ ತಮಿಳುನಾಡಿನ ರಾಜಭವನ ಸೂಕ್ಷ್ಮವಾಗಿ ಪರಿಶೀಲಿಸಿತ್ತು. ಚುನಾಯಿತ ಸರ್ಕಾರ ಚರ್ಚೆ ನಡೆಸಿ ಅನುಮೋದನೆ ಮಾಡಿದ್ದ 10 ಬಿಲ್ ಗಳನ್ನು ರಾಜ್ಯಪಾಲರು ಸಹಿ ಮಾಡದೆ ವಾಪಸ್ ಕಳುಹಿಸಿದ್ದರು.
  • ಜನವರಿ 2023ರಲ್ಲಿ ಇದೆ ತಮಿಳುನಾಡಿನ ರಾಜ್ಯಪಾಲರು ರಾಜ್ಯಪಾಲರ ಭಾಷಣವನ್ನೇ ಧಿಕ್ಕರಿಸಿ ಹೊರ ನಡೆದಿದ್ದರು. ದೆಹಲಿಯಲ್ಲಿ ಕಳೆದ 9 ವರ್ಷಗಳಿಂದ ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಕೇರಳದಲ್ಲಿ ಒಂದೊಂದು ಬಿಲ್ಲನ್ನು ಸುಮಾರು ಎರಡು ವರ್ಷಗಳ ಕಾಲ ಸಹಿ ಮಾಡದೆ ಬಾಕಿ ಇಟ್ಟಿದ್ದರು. ಆನಂತರ ಕೇರಳ ಸರ್ಕಾರ ನ್ಯಾಯಾಲಯದ ಮೊರೆ ಹೋಯಿತು. ಬಿಲ್ ಗಳನ್ನು ಹೀಗೆ ರಾಜ್ಯಪಾಲರು ಇಟ್ಟುಕೊಳ್ಳಬಾರದು ಎಂದು ನ್ಯಾಯಾಲಯದಿಂದ ಆದೇಶ ತಂದರು.

ರಾಜ್ಯ ಸರ್ಕಾರ v/s  ರಾಜ್ಯಪಾಲ

ಕೇರಳ ಪಶ್ಚಿಮ ಬಂಗಾಳ ತಮಿಳುನಾಡು ದೆಹಲಿ ಸೇರಿದಂತೆ ಇತರೆ ರಾಜ್ಯಗಳಲ್ಲಿ ನಡೆಯುತ್ತಿರುವ ಜಟಾಪಟಿಯೇ ಇಂದು ಕರ್ನಾಟಕದಲ್ಲಿ ನಡೆಯುತ್ತಿದೆ. ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶದ ವಿರುದ್ಧ ಒಂದಷ್ಟು ನಿಲುವುಗಳನ್ನು ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರ ಹಾಗೂ ಪಕ್ಷದ ಎಲ್ಲಾ ಪದಾಧಿಕಾರಿಗಳು ಮುಖ್ಯಮಂತ್ರಿಯ ಜೊತೆ ನಿಲ್ಲುತ್ತಾರೆ ಎಂದು ಪ್ರಿಯಾಂಕ್‌ ಖರ್ಗೆ ವಿವರಿಸಿದರು.

ಸಚಿವ ಸಂಪುಟ ಸಲಹೆಯನ್ನ ಆರ್ಟಿಕಲ್ 163 ಅಡಿಯಲ್ಲಿ ತಿರಸ್ಕಾರ ಮಾಡಿರುವುದನ್ನು ಸರ್ಕಾರ ಖಂಡಿಸಿದೆ. ರಾಜ್ಯಪಾಲರು ಒಂದಷ್ಟು ತೀರ್ಪುಗಳನ್ನು ತಮ್ಮ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ ಆದರೆ ಅವರು ಇಡೀ ಆದೇಶವನ್ನೇ ತಿಳಿದುಕೊಳ್ಳದೆ ಅದರಲ್ಲಿ ಕೆಲವೊಂದಷ್ಟು ಮಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಆರ್ಟಿಕಲ್ 17 ಎ ನಿಯಮಗಳನ್ನು ಗಾಳಿಗೆ ತೂರಿ ರಾಜ್ಯಪಾಲರು ನೀಡಿರುವ ಅನುಮತಿಯನ್ನು ಖಂಡಿಸಲಾಗಿದೆ ಎಂದರು.

ರಾಜ್ಯಪಾಲರು ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಆದರೆ ಅವರಿಂದಲೇ ಕಗ್ಗೊಲೆ ನಡೆಯುತ್ತಿದೆ. ಸಂವಿಧಾನವನ್ನು ಮೀರಿ ರಾಜಕೀಯದ ಕೈಗೊಂಬೆಯಾಗಿ ರಾಜ್ಯಪಾಲರು ವರ್ತಿಸುತ್ತಿದ್ದಾರೆ. ಸಚಿವ ಸಂಪುಟದಿಂದ ಕಳುಹಿಸಿದ 70 ಪುಟಗಳ ಸಲಹೆಗೆ ಕೇವಲ ಎರಡು ಪುಟದಲ್ಲಿ ಉತ್ತರಿಸಿದ್ದಾರೆ. ಅದರಲ್ಲಿ ಎಲ್ಲಿಯೂ ಸಹ ಸರ್ಕಾರದ ಸಲಹೆ ಹೀಗೆ ತಪ್ಪಾಗಿದೆ ಎಂದು ಕಿಂಚಿತ್ತು ಉಲ್ಲೇಖಿಸಿಲ್ಲ. ತಮ್ಮ ಪ್ರಾಸಿಕ್ಯೂಷನ್ ವರದಿಯಲ್ಲಿ ಎಲ್ಲಿಯೂ ಸಹ ಕಾನೂನಾತ್ಮಕವಾಗಿ ಉತ್ತರಿಸಿಲ್ಲ. ಕೇವಲ ನೀವೇ ಕದ್ದಿದ್ದೀರಿ ಅಕ್ರಮ ನಡೆದಿದೆ ನೀವೇ ಅದನ್ನು ರಕ್ಷಣೆ ಮಾಡುತ್ತಿದ್ದೀರಿ ಎಂದು ರಾಜಕೀಯವಾಗಿ ಮಾತನಾಡಿದ್ದಾರೆ ಎಂದು ಹೇಳಿದರು.

ಸಚಿವ ಸಂಪುಟ ಸಭೆಯಲ್ಲಿ ಆದ ತೀರ್ಮಾನಗಳನ್ನು ಜಾರಿಗೆ ತರಲು ರಾಜ್ಯಪಾಲರು ಒಪ್ಪಿಗೆ ಸೂಚಿಸಬೇಕು. ಇದಕ್ಕೆ ರಾಜ್ಯಪಾಲರು ಅಡಚಣೆ ಉಂಟುಮಾಡಬಾರದು. ಯಡಿಯೂರಪ್ಪ ಅವರ ಪ್ರಕರಣದಲ್ಲಿ ಸಚಿವ ಸಂಪುಟದ ಸಲಹೆಗಳು ನಿಮಗೆ ಒಪ್ಪಿತವಾಗದಿದ್ದಲ್ಲಿ ಅದಕ್ಕೆ ಕಾರಣಗಳನ್ನು ನೀಡಿ ಎಂದು ರಾಜ್ಯಪಾಲರಿಗೆ ಹೇಳಲಾಗಿತ್ತು. ಪ್ರಾಸಿಕ್ಯೂಷನ್ ಗೆ ನೀಡುವಾಗ ಅಗತ್ಯ ಸಾಕ್ಷಿಗಳು ಹಾಗೂ ದಾಖಲೆಗಳು ಇರಬೇಕು. ಸಿದ್ದರಾಮಯ್ಯನವರ ವಿರುದ್ಧ ಯಾವ ಸಾಕ್ಷಿ ಇದೆ ಎಂದು ರಾಜ್ಯಪಾಲರನ್ನು ನಾವು ಪ್ರಶ್ನಿಸುತ್ತೇವೆ ಎಂದರು.

2016ರ ಅರುಣಾಚಲ ಪ್ರದೇಶ ಪ್ರಕರಣದಲ್ಲಿ ನ್ಯಾಯಾಲಯವು ಹೀಗೆ ಹೇಳಿತ್ತು. ಸರ್ಕಾರ ತನಿಖೆಗೆ ಸಹಕರಿಸುತ್ತಿಲ್ಲ, ತನಿಖೆಗೆ ಆದೇಶ ನೀಡಿಲ್ಲ, ಪುರಾವೆಗಳನ್ನು ನೀಡುತ್ತಿಲ್ಲ, ವರದಿಗಳನ್ನು ಪರಿಶೀಲಿಸಲು ಆಗುತ್ತಿಲ್ಲ, ರಾಜ್ಯಪಾಲರು ಸಮನ್ಸ್ ನೀಡಿದಾಗ ಬರುತ್ತಿಲ್ಲ ಹೀಗಿದ್ದಾಗ ಮಾತ್ರ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬಹುದು ಎಂದು ಹೇಳಲಾಗಿದೆ. ಪ್ರಸ್ತುತ ರಾಜ್ಯಪಾಲರು ಅನುಮತಿ ನೀಡಿರುವುದು ಸಂಪೂರ್ಣ ಕಾನೂನುಬಾಹಿರ. ಇತ್ತೀಚಿಗೆ ಜಸ್ಟಿಸ್ ನಾಗರತ್ನ ಅವರು ರಾಜ್ಯಪಾಲರು ಕೇವಲ ಒಂದು ಪಕ್ಷದ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು ಎಂದು ನೆನಪಿಸಿದರು.

Tags:    

Similar News