ಗುತ್ತಿಗೆದಾರ ಆತ್ಮಹತ್ಯೆ | ರಾಜೀನಾಮೆ ಬೇಡಿಕೆಗೆ ಸಚಿವ ಪ್ರಿಯಾಂಕ್ ತಿರುಗೇಟು; ಸಚಿನ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ
ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವಂತೆ ಪ್ರತಿಪಕ್ಷಗಳು ಒತ್ತಾಯಿಸಿವೆ. ಅಪ್ಪನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಗನ ರಾಜೀನಾಮೆ ಪಡೆಯಲಿ ಎಂದು ಪ್ರಿಯಾಂಕ್ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಬೀದರ್‌ನಲ್ಲಿ ಯುವ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ಸಂಬಂಧ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರ ತಾರಕಕ್ಕೇರಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ ಹಾಗೂ ಅವರ ತಂಡದ ಕಿರುಕುಳದಿಂದ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಪ್ರತಿಪಕ್ಷಗಳು ಒತ್ತಾಯಿಸಿವೆ. ಇದಕ್ಕೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಆಪ್ತನಿಗೆ ಸಂಬಂಧಿಸಿದ ಪ್ರಕರಣದಲ್ಲಿ ನನ್ನ ರಾಜೀನಾಮೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷ ನಾಯಕರ ತಲೆ, ಮಿದುಳು ಸರಿಯಿಲ್ಲ ಎಂದಿದ್ದಾರೆ. ಈ ಮಧ್ಯೆ ಬೀದರ್‌ನ ಭಾಲ್ಕಿ ತಾಲೂಕಿನ ಕಟ್ಟಿತೂಂಗಾವ್ ಗ್ರಾಮದ ಸಚಿನ್ ನಿವಾಸಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸಚಿನ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಅಧಿಕಾರ ದುರ್ಬಳಕೆ ಎಂದ ಜೆಡಿಎಸ್
ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಆಪ್ತನ ರಕ್ಷಣೆಗೆ ನಿಂತಿರುವ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಬಯಲಾಗಿದೆ. ಪ್ರಿಯಾಂಕ್ ಖರ್ಗೆ ಆಪ್ತನ ರಕ್ಷಣೆಗೆ ಇಡೀ ಸರ್ಕಾರ ನಿಂತಿದೆ ಎಂದು ಕಿಡಿಕಾರಿದೆ.
ಪ್ರಿಯಾಂಕ್ ಖರ್ಗೆ ಆಪ್ತನಾದ ರಾಜು ಕಪನೂರ ₹15 ಲಕ್ಷ ಲಂಚ ಪಡೆದು, ಕೊಲೆ ಬೆದರಿಕೆ ಹಾಕಿರುವ ಕುರಿತು ಗುತ್ತಿಗೆದಾರ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಸಿದ್ದರಾಮಯ್ಯ ನೇತೃತ್ವದ ಕ್ಲೀನ್ ಚೀಟ್ ಸರ್ಕಾರ ಸಚಿವರ ಆಪ್ತನನ್ನು ಬಂಧಿಸದೇ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಹೆಡ್ ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಿದೆ. ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವರ ಪಾತ್ರದ ಬಗ್ಗೆ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.
ಪ್ರಕರಣದ ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬಂಟನಾದ ರಾಜು ಕಪನೂರ ಕಿರುಕುಳದಿಂದ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಬಿಜೆಪಿ ಆಗ್ರಹಿಸಿದೆ.
ಗುತ್ತಿಗೆದಾರ ಸಚಿನ್ ಪಾಂಚಾಳ್ ಡೆತ್ ನೋಟ್ ನಲ್ಲಿ ಬಿಜೆಪಿ ಪಕ್ಷದ ಶಾಸಕ ಬಸವರಾಜ್ ಮತ್ತಿಮಡು, ಮುಖಂಡರಾದ ಚಂದು ಪಾಟೀಲ್, ಮಣಿಕಂಠ ರಾಥೋಡ್ ಹಾಗೂ ಆಂದೋಲ ಸ್ವಾಮೀಜಿ ಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಾದ ರಾಜು ಕಪನೂರ ಸುಪಾರಿ ನೀಡಿರುವ ವಿಷಯ ಉಲ್ಲೇಖವಾಗಿದೆ. ಇದು ಆತಂಕಕಾರಿ. ಕಾಂಗ್ರೆಸ್ ಸರ್ಕಾರವು ವಿರೋಧ ಪಕ್ಷದ ಶಾಸಕರನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ʼಎಕ್ಸ್ʼ ನಲ್ಲಿ ಪೋಸ್ಟ್ ಮಾಡಿ ಆಗ್ರಹಿಸಿದ್ದಾರೆ.
ಪ್ರತಿಪಕ್ಷ ನಾಯಕರಿಗೆ ಪ್ರಿಯಾಂಕ್ ತಿರುಗೇಟು
ಯುವ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸೇರಿದಂತೆ ಪ್ರತಿಪಕ್ಷಗಳ ನಾಯಕರ ಹೇಳಿಕೆಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, 'ಪ್ರಜಾಪ್ರಭುತ್ವದ ದೇಗುಲದಲ್ಲಿ ನಿಂತು ಮಹಿಳಾ ಸಮುದಾಯವನ್ನು ಅವಮಾನಿಸಿದವರ ಬಾಯಲ್ಲಿ ಸರ್ವಜ್ಞನ ವಚನ ಕೇಳುವುದು, ಭೂತದ ಬಾಯಲ್ಲಿ ಭಾಗವದ್ಗೀತೆ ಕೇಳಿದಂತೆಯೇ ಸರಿ' ಎಂದು ಸಿ.ಟಿ. ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ಸಿ.ಟಿ.ರವಿ ಅವರೇ, ಪೆಟ್ಟಾಗಿದ್ದು ನಿಮ್ಮ ತಲೆಗಲ್ಲ, ಮಿದುಳಿಗೆ. ಮಿದುಳಿಗಾದ ಪೆಟ್ಟಿಗೆ ಬ್ಯಾಂಡೇಜ್ ಪರಿಹಾರವಲ್ಲ, ಮಾನಸಿಕ ಚಿಕಿತ್ಸೆಯೇ ಪರಿಹಾರ. ನನ್ನ ರಾಜೀನಾಮೆ ಕೇಳುವುದು ಬಿಜೆಪಿಗರ ನಿತ್ಯಮಂತ್ರವಾಗಿದೆ. ನಿದ್ದೆಯ ಕನವರಿಕೆಯಲ್ಲೂ 'ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಬೇಕು' ಎಂದು ಕೂಗುತ್ತಿರುತ್ತಾರೋ ಏನೋ!' ಎಂದು ವ್ಯಂಗ್ಯವಾಡಿದ್ದಾರೆ.
ಆಪ್ತನಿಗೆ ಸಂಬಂಧಿಸಿದ ಪ್ರಕರಣದಲ್ಲಿ ನನ್ನ ರಾಜೀನಾಮೆ ಕೇಳುವ ಬಿಜೆಪಿಯವರೇ, ಅಪ್ಪನಿಂದಾದ ಲೈಂಗಿಕ ದೌರ್ಜನ್ಯಕ್ಕೆ ವಿಜಯೇಂದ್ರ ರಾಜೀನಾಮೆ ಕೊಡಬೇಕು ಎಂದು ಕೇಳುತ್ತಿಲ್ಲವೇಕೆ?, ದಲಿತರನ್ನು ನಿಂದಿಸಿ, ಒಕ್ಕಲಿಗ ಮಹಿಳೆಯರನ್ನು ಮಂಚಕ್ಕೆ ಕರೆದ ಮುನಿರತ್ನ ಕೃತ್ಯಕ್ಕೆ ಸಾಕ್ಷಿ ದೊರಕಿದ್ದರೂ ಕ್ರಮ ಕೈಗೊಳ್ಳಲಿಲ್ಲ ಏಕೆ ಎಂದು ತಿರುಗೇಟು ನೀಡಿದ್ದಾರೆ.
ಸಚಿನ್ ಕುಟುಂಬಕ್ಕೆ 10ಲಕ್ಷ ರೂ. ಪರಿಹಾರ
ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ನಿವಾಸಕ್ಕೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಭಾನುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮೃತ ಸಚಿನ್ ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿನ್ ಆತ್ಮಹತ್ಯೆ ಒಂದು ನೋವಿನ ಸಂಗತಿ. ನಾನು ಹಾಗೂ ನಮ್ಮ ಸರ್ಕಾರ ಸಚಿನ್ ಕುಟುಂಬದ ಜೊತೆ ಇರಲಿದ್ದೇವೆ. ಸಚಿನ್ ಆತ್ಮಹತ್ಯೆಗೂ ಮುನ್ನ ಕುಟುಂಬದವರು ನೀಡಿದ ದೂರು ಸ್ವೀಕರಿಸದ ಪೊಲೀಸರು ಮೇಲೆ ಕ್ರಮ ಜರುಗಿಸಲಾಗಿದೆ. ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿದೆ. ಪ್ರಕರಣದಲ್ಲಿ ಯಾರೇ ಇರಲಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.
ಗುರುವಾರ ಘಟನೆಯಾದ ದಿನವೇ ನಾನು ಬರಬೇಕಾಗಿತ್ತು. ಆದರೆ, ಬೆಳಗಾವಿ ಅಧಿವೇಶನದ ಶತಮಾನೋತ್ಸವ, ಮಾಜಿ ಪ್ರಧಾನಿ ಮನಮೋಹನಸಿಂಗ್ ನಿಧನದ ಕಾರಣ ಬರಲಾಗಲಿಲ್ಲ. ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಿಯಾಂಕ್ ಖರ್ಗೆ ಅವರೇ ತನಿಖೆ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ಸಚಿನ್ ಬರೆದಿರುವ ಡೆತ್‌ನೋಟ್ ಅನ್ನು ಎಫ್ ಎಸ್ ಎಲ್ ಗೆ ಕಳುಹಿಸುತ್ತೇವೆ ಎಂದು ತಿಳಿಸಿದರು.