ರಾಜ್ಯಕ್ಕೆ ವಿದೇಶಿ ಹೂಡಿಕೆ ಆಕರ್ಷಣೆಗೆ ಪ್ರಧಾನಿ ಮೋದಿ ಅಡ್ಡಗಾಲು: ಪ್ರಿಯಾಂಕ್ ಖರ್ಗೆ ಆರೋಪ

Update: 2024-06-25 11:35 GMT

ರಾಜ್ಯಕ್ಕೆ ವಿದೇಶಿ ಹೂಡಿಕೆ ಆಕರ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಆರೋಪ ಮಾಡಿದ್ದಾರೆ.

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಉನ್ನತ ಮಟ್ಟದ ನಿಯೋಗವು ಹೂಡಿಕೆ ಆಕರ್ಷಣೆಗಾಗಿ ಅಮೆರಿಕ ಮತ್ತು ಬ್ರಿಟನ್ ಪ್ರವಾಸ ಕೈಗೊಂಡಿದ್ದ ಕುರಿತು ಮಾಹಿತಿ ನೀಡಲು ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಅವರು, ʻʻಬಂಡವಾಳ ಹೂಡಿಕೆಯ ವಿಚಾರದಲ್ಲಿ ಪ್ರಧಾನಿ ಮೋದಿ ಕೆಲ ಕಂಪನಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ನಾವು ಕರೆದುಕೊಂಡು ಬರುವ ಹೂಡಿಕೆದಾರರನ್ನು ಸಂಪರ್ಕಿಸಿ ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಹೂಡಿಕೆ ಮಾಡುವಂತೆ ಒತ್ತಡ ಹೇರಿ, ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಆ ಕಂಪನಿಗಳು ಯಾವುವು ಅಂಬುದು ಗೊತ್ತಿದೆ, ಆದರೆ, ಹೆಸರು ಉಲ್ಲೇಖಿಸಲ್ಲʼʼ ಎಂದು ಹೇಳಿದ್ದಾರೆ.

“ನಾವು ವಿದೇಶ ಸುತ್ತಿ ಹೂಡಿಕೆದಾರರನ್ನು ಕರೆದುಕೊಂಡು ಬರುತ್ತೇವೆ. ಅಷ್ಟರೊಳಗೆ ಪ್ರಧಾನಿ ಮತ್ತು ಅವರ ಸಚಿವಾಲಯದ ಅಧಿಕಾರಿಗಳು ಹೂಡಿಕೆದಾರರನ್ನು ಸಂಪರ್ಕಿಸಿ ಗುಜರಾತ್ ಅಥವಾ ಉತ್ತರ ಪ್ರದೇಶಕ್ಕೆ ಹೋಗುವಂತೆ ಒತ್ತಡ ಹೇರುತ್ತಾರೆ. ತೆಲಂಗಾಣಕ್ಕೆ ಬಂದ ಹೂಡಿಕೆದಾರರಿಗೂ ಒತ್ತಡ ಹೇರಿರುವ ಉದಾಹರಣೆಗಳಿವೆ. ಮುಂದೆ ಎಲ್ಲವನ್ನೂ ಬಹಿರಂಗಪಡಿಸುತ್ತೇವೆʼʼ ಎಂದರು.

ʻʻನಮ್ಮ ರಾಜ್ಯದ ಮಾನವ ಸಂಪನ್ಮೂಲಕ್ಕೆ ಬಹಳ ಬೇಡಿಕೆ ಇದೆ. ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯಕ್ಕೆ ಬೇಡಿಕೆ ಹೆಚ್ಚಿದೆ. ಚೀನಾ, ಯುರೋಪಿಯನ್ ದೇಶಗಳು, ಅಮೆರಿಕ ಕಂಪನಿಗಳ ಜೊತೆಗೆ ನಮ್ಮ ಸ್ಪರ್ಧೆ ಇದೆ. ನವೋದ್ಯಮದಲ್ಲಿ, ನಾವು 9ನೇ ಸ್ಥಾನದಲ್ಲಿದ್ದೇವೆ. ಮುಂದಿನ 4 ವರ್ಷಗಳ ಒಳಗೆ ಟಾಪ್‌-4ನೇ ಸ್ಥಾನಕ್ಕೆ ತಲುಪುವ ಗುರಿ ಹೊಂದಲಾಗಿದೆʼʼ ಎಂದು ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಹೂಡಿಕೆ ಮಾಡುವವರಿಗೆ ನೀಡುವಂತಹ ಉತ್ತೇಜನಗಳನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡುವವರಿಗೂ ನೀಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಮಾಡಿ ಒತ್ತಾಯ ಮಾಡಲಾಗುವುದು ಎಂದು ಪ್ರಿಯಾಂಕ್ ತಿಳಿಸಿದರು.

ಇದೇ ವೇಳೆ ಕಿಯೋನಿಕ್ಸ್ ಅಧ್ಯಕ್ಷ ಶರತ್‌ ಬಚ್ಚೇಗೌಡ ಮಾತನಾಡಿ, ʻʻರಾಜ್ಯಕ್ಕೆ ಬಂಡವಾಳ ಹೂಡಿಕೆ ಬಗ್ಗೆ, ವಿವಿಧ ಕಂಪನಿಗಳ ಜೊತೆ ಚರ್ಚೆ ಮಾಡಲಾಗಿದೆ. ಲಂಡನ್ ಮತ್ತು ಅಮೇರಿಕ ದೇಶಗಳ ಪ್ರವಾಸ ಮಾಡಿ ವಾಪಸ್ ಬಂದಿದ್ದೇವೆ. ಉದ್ಯೋಗ ಸೃಷ್ಟಿ, ಬಂಡವಾಳ ಹರಿದುಬರುವ ವಿಚಾರಗಳು ಹಾಗೂ ಕೌಶಲ್ಯ ಅಭಿವೃದ್ಧಿ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಇದರ ಪರಿಣಾಮವಾಗಿ ರಾಜ್ಯಕ್ಕೆ 51,000 ಕೋಟಿ ಹೂಡಿಕೆ ಹರಿದುಬರುವ ನಿರೀಕ್ಷೆ ಇದೆ. ಅಂತರರಾಷ್ಟ್ರೀಯ ಮಟ್ಟದ ಹಲವು ಸಂಶೋಧನಾ ಕೇಂದ್ರಗಳು ರಾಜ್ಯಕ್ಕೆ ಬರಲಿವೆ. ಮೈಕ್ರೋ ಸಾಫ್ಟ್ ಜೊತೆ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇವೆ. ಇದರೊಂದಿಗೆ ಮೆಡಿಕಲ್ ಮತ್ತು ಸೆಮಿಕಂಡಕ್ಟರ್ ತಂತ್ರಜ್ಞಾನವನ್ನು ಕರ್ನಾಟಕಕ್ಕೆ ತರುವ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಕರ್ನಾಟಕ ಬಂಡವಾಳ ಹೂಡಿಕೆಗೆ ಪೂರಕವಾದ ರಾಜ್ಯ ಎಂದು ಉದ್ದಿಮೆದಾರರೂ ಒಪ್ಪಿದ್ದಾರೆ. ಹಲವಾರು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆʼʼ ಎಂದು ವಿವರಿಸಿದರು.

Tags:    

Similar News