ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮಾರಾಮಾರಿ: ಬಾತ್ ರೂಮ್ ಟೈಲ್ಸ್‌ನಿಂದ ಹಲ್ಲೆ
ಕೈದಿಗಳಿಬ್ಬರು ಪರಸ್ಪರ ಬಾತ್ ರೂಂನ ಟೈಲ್ಸ್‌ನಿಂದ ಹೊಡೆದಾಡಿಕೊಂಡಿದ್ದು, ಈ ಹಲ್ಲೆಯಿಂದ ಕೈದಿಯೊಬ್ಬನ ತಲೆಗೆ ಗಂಭೀರ ಗಾಯವಾಗಿದೆ. ಆತನನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.;
ಪರಪ್ಪನ ಅಗ್ರಹಾರ
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳ ನಡುವೆ ಬಾತ್‌ರೂಂ ಟೈಲ್ಸ್ ಬಳಸಿ ಮಾರಾಮಾರಿ ನಡೆದಿದ್ದು, ಕೈದಿಯೊಬ್ಬನ ತಲೆಗೆ ಗಂಭೀರ ಗಾಯಗಳಾಗಿವೆ. ಬುಧವಾರ ಮಧ್ಯಾಹ್ನ ಊಟದ ಸಮಯದಲ್ಲಿ ಈ ಘಟನೆ ನಡೆದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕೈದಿ ಆನಂದ್‌ನನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಕೈದಿ, ಹಲ್ಲೆ ನಡೆಸಿದ ಆರೋಪಿಯಾಗಿರುವ ಸೂರ್ಯಪ್ರಕಾಶ್‌ಗೆ ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗಿದೆ.
ಈ ಸಂಬಂಧ ಜೈಲಿನ ಉಪ ಅಧೀಕ್ಷಕ ಇಮಾಮ್‌ಸಾಬ್ ಮ್ಯಾಗೇರಿ ಅವರು ದೂರು ದಾಖಲಿಸಿದ್ದು, ವಿಚಾರಣಾಧೀನ ಕೈದಿ ಸೂರ್ಯಪ್ರಕಾಶ್ (24) ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೂರ್ಯಪ್ರಕಾಶ್ ತನ್ನ ಗೆಳತಿಯ ತಂದೆಯನ್ನು ಟಿಂಬರ್ ಯಾರ್ಡ್‌ನಲ್ಲಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್ ಪೊಲೀಸರಿಂದ ಬಂಧಿತನಾಗಿ ಜೈಲಿನ 1ನೇ ಬ್ಯಾರಕ್‌ನ 2ನೇ ಕೊಠಡಿಯಲ್ಲಿ ಇದ್ದ. ಬುಧವಾರ ಮಧ್ಯಾಹ್ನ ಊಟದ ವೇಳೆ ಸೂರ್ಯಪ್ರಕಾಶ್ ಹಾಗೂ ಸಹ ಕೈದಿ ಆನಂದ್ ನಡುವೆ ಜಗಳ ಪ್ರಾರಂಭವಾಗಿದೆ. ಜಗಳ ತೀವ್ರ ಸ್ವರೂಪ ಪಡೆದಾಗ ಸೂರ್ಯಪ್ರಕಾಶ್ ಬಾತ್‌ರೂಂಗೆ ಅಳವಡಿಸಲಾಗಿದ್ದ ಟೈಲ್ಸ್ ಒಂದನ್ನು ಕಿತ್ತುಕೊಂಡು ಆನಂದ್‌ನ ತಲೆಗೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.