ಭೂಸೇನಾ ಕಾರ್ಯಾಗಾರದ ನೇಮಕಾತಿಗಳಲ್ಲಿ ಕನ್ನಡಿಗರಿಗೆ ಆದ್ಯತೆ: ಕೇಂದ್ರ ಸಚಿವರಿಗೆ ಡಾ. ಬಿಳಿಮಲೆ ಪತ್ರ

ಕೇಂದ್ರ ರಕ್ಷಣಾ ಇಲಾಖೆ ಬೆಂಗಳೂರಿನ 515 ಭೂಸೇನಾ ಕಾರ್ಯಾಗಾರಕ್ಕೆ ಸಂಬಂಧಿಸಿದಂತೆ ಅಧಿಸೂಚಿಸಿರುವ ಗ್ರೂಪ್ ಸಿ ಮತ್ತು ಡಿ ದರ್ಜೆ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆಯನ್ನು ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ;

Update: 2025-01-13 12:38 GMT

ಕೇಂದ್ರ ರಕ್ಷಣಾ ಇಲಾಖೆ ಬೆಂಗಳೂರಿನ 515 ಭೂಸೇನಾ ಕಾರ್ಯಾಗಾರಕ್ಕೆ ಸಂಬಂಧಿಸಿದಂತೆ ಅಧಿಸೂಚಿಸಿರುವ ಗ್ರೂಪ್ ಸಿ ಮತ್ತು ಡಿ ದರ್ಜೆ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆಯನ್ನು ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತಂತೆ ರಕ್ಷಣಾ ಸಚಿವರಾದ ರಾಜ್ ನಾಥ್ ಸಿಂಗ್ ಅವರಿಗೆ ಪತ್ರ ಬರೆದಿರುವ ಡಾ.ಬಿಳಿಮಲೆ, ಕೇಂದ್ರೋದ್ಯಮಗಳು ಸ್ಥಳೀಯರಿಗೆ ಉದ್ಯೋಗವನ್ನು ಕಲ್ಪಿಸುವುದು ಒಕ್ಕೂಟ ವ್ಯವಸ್ಥೆಯ ಕರ್ತವ್ಯವಾಗಬೇಕಿದ್ದು, ಪದೇ ಪದೇ ಈ ಸಾಂವಿಧಾನಿಕ ಆಶಯವನ್ನು ಉಲ್ಲಂಘಿಸಲಾಗುತ್ತಿದೆ. ಸಹನಶೀಲವಾದ ವ್ಯವಸ್ಥೆ ರೂಪುಗೊಳ್ಳಬೇಕಾದಲ್ಲಿ ಕೇಂದ್ರವು ರಾಜ್ಯ ಸರ್ಕಾರಗಳ ಆಶಯಗಳನ್ನು ಗೌರವಿಸುವುದು ಮುಖ್ಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಕ್ಷಣಾ ಇಲಾಖೆ ನೇಮಕಾತಿ ಅಧಿಸೂಚನೆಗಳನ್ನು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟಿಸಿ ಕನ್ನಡಿಗ ಅಭ್ಯರ್ಥಿಗಳ ಗಮನ ಸೆಳೆಯಬೇಕು. ಅಭ್ಯರ್ಥಿಗಳು ಕನ್ನಡದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ಸಮಸ್ಯೆಗೆ ಪರಿಹಾರ ದೊರಕುವವರೆಗೂ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಬೇಕೆಂದು ಡಾ.ಬಿಳಿಮಲೆ ರಕ್ಷಣಾ ಸಚಿವರನ್ನು ಆಗ್ರಹಿಸಿದ್ದಾರೆ.

ಕನ್ನಡ ಪುಸ್ತಕ ಪ್ರಕಾಶಕರ ಸಂಕಷ್ಟ ನಿವಾರಿಸಿ

ಅಂಚೆ ಇಲಾಖೆ ಸ್ಥಗಿತಗೊಳಿಸಿರುವ ರಿಜಿಸ್ಟರ್ ಪಾರ್ಸಲ್ ಸೇವೆಗಳು ಕನ್ನಡ ಪುಸ್ತಕ ಪ್ರಕಾಶನ ಸಂಸ್ಥೆಗಳಿಗೆ ಮಾರಣಾಂತಿಕವಾಗಿ ಪರಿಣಮಿಸಿದ್ದು, ಈ ಸೇವೆಗಳನ್ನು ಕೂಡಲೇ ಪುನರಾರಂಭಿಸಬೇಕೆಂದು ಡಾ.ಪುರುಷೋತ್ತಮ ಬಿಳಿಮಲೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತಂತೆ ಕೇಂದ್ರ ಸಂವಹನ ಖಾತೆ ಸಚಿವರಾದ ಜ್ಯೋತಿರಾದಿತ್ಯ ಸಿಂಧ್ಯ ಅವರಿಗೆ ಪತ್ರ ಬರೆದಿರುವ ಡಾ. ಬಿಳಿಮಲೆ, ಅಂಚೆ ಇಲಾಖೆ ಮುದ್ರಿತ ಪುಸ್ತಕಗಳನ್ನು ಕಳುಹಿಸಲು ರಿಜಿಸ್ಟರ್ ಪಾರ್ಸಲ್ ಸೇವೆಗಳನ್ನು ಒದಗಿಸುತ್ತಿದ್ದು, ಇದನ್ನು ಏಕಾಏಕಿ ನಿಲ್ಲಿಸಲಾಗಿದೆ. ಈ ಸೇವೆಯಲ್ಲಿ ವಿಧಿಸಲಾಗುತ್ತಿದ್ದ ಕನಿಷ್ಠ ದರದ ಅವಕಾಶವನ್ನು ಬಳಸಿಕೊಂಡು ಕನ್ನಡದ ಬಹುಪಾಲು ಪ್ರಕಾಶಕರು ತಮ್ಮ ಪುಸ್ತಕಗಳನ್ನು ಓದುಗರಿಗೆ ತಲುಪಿಸುವ ಕಾರ್ಯ ನಿರ್ವಹಿಸುತ್ತಿದ್ದರು. ಈ ಸೇವೆ ಈಗ ಸ್ಥಗಿತಗೊಂಡಿರುವುದರಿಂದ ಮೊದಲೇ ಸಂಕಷ್ಟದಲ್ಲಿರುವ ಕನ್ನಡ ಪುಸ್ತಕೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿರುತ್ತದೆ. ಈ ಕುರಿತಂತೆ ಕೇಂದ್ರ ಸರ್ಕಾರವು ಕೂಡಲೇ ಕ್ರಮ ಕೈಗೊಂಡು ಪ್ರಿಂಟೆಡ್ ಬುಕ್ ರಿಜಿಸ್ಟರ್ ಪಾರ್ಸಲ್ ಸೇವೆಗಳನ್ನು ಪುನರಾರಂಭಿಸಲು ಕ್ರಮವಹಿಸಬೇಕೆಂದು ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.

ಅಂಚೆ ಕಚೇರಿಯ ಸ್ಥಳೀಯ ಮುಖ್ಯಸ್ಥರನ್ನು ಈ ನಿಟ್ಟಿನಲ್ಲಿ ಕೂಡಲೇ ಕ್ರಮ ವಹಿಸಲು ಕೋರಲಾಗಿದೆ ಎಂಬ ಅಂಶವನ್ನು ಸಹಾ ಬಿಳಿಮಲೆ ಹೇಳಿದ್ದಾರೆ.

Tags:    

Similar News