ಮೈಸೂರಿನ 'ಆಯಿಷ್' ಸಂಸ್ಥೆಯ ವಜ್ರ ಮಹೋತ್ಸವಕ್ಕಾಗಿ ದ್ರೌಪದಿ ಮುರ್ಮು ಆಗಮನ, ಭರ್ಜರಿ ಸ್ವಾಗತ

ರಾಷ್ಟ್ರಪತಿಯವರು ತೆರಳುವ ರಸ್ತೆಗಳಲ್ಲಿ ಸೂಕ್ತ ಬಂದೋಬಸ್ತ್‌ ಏರ್ಪಡಿಸಲಾಗಿದ್ದು, ಮಧ್ಯಾಹ್ನದ ಬಳಿಕ ಅಂಗಡಿಗಳನ್ನು ಮುಚ್ಚಲಾಗಿದೆ. ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದ್ದು, ಜನರ ಓಡಾಟಕ್ಕೂ ನಿರ್ಬಂಧಿಸಲಾಗಿದೆ.;

Update: 2025-09-01 11:28 GMT

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಹಾಗೂ ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದರು.

ನಗರದ ಹೆಮ್ಮೆಯ ಸಂಸ್ಥೆಯಾದ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ (ಆಯಿಷ್) ಯ ವಜ್ರ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಮಧ್ಯಾಹ್ನ ಮೈಸೂರಿಗೆ ಆಗಮಿಸಿದರು. ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಬಂದಿಳಿದ ರಾಷ್ಟ್ರಪತಿಯವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರವಪೂರ್ವಕವಾಗಿ ಸ್ವಾಗತಿಸಿದರು.

ರಾಷ್ಟ್ರಪತಿಯವರ ಎರಡು ದಿನಗಳ ಮೈಸೂರು ಪ್ರವಾಸದ ಹಿನ್ನೆಲೆಯಲ್ಲಿ, ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅವರು ಸಂಚರಿಸುವ ಮಾರ್ಗಗಳಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಮಧ್ಯಾಹ್ನದ ನಂತರ ಹಲವು ಅಂಗಡಿಗಳನ್ನು ಮುಚ್ಚಲಾಗಿತ್ತು. ಸಾರ್ವಜನಿಕರ ಓಡಾಟಕ್ಕೂ ಕೆಲವು ಕಡೆಗಳಲ್ಲಿ ನಿರ್ಬಂಧ ವಿಧಿಸಲಾಗಿತ್ತು.

'ಆಯಿಷ್' ಸಂಸ್ಥೆಯ ಕಾರ್ಯಕ್ರಮದ ನಂತರ ರಾಷ್ಟ್ರಪತಿಯವರು ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸೋಮವಾರ ರಾತ್ರಿ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಏನಿದು 'ಆಯಿಷ್' ಸಂಸ್ಥೆ?

ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ (All India Institute of Speech and Hearing - AIISH), ದೇಶದ ಪ್ರಮುಖ ಸಂವಹನ ನ್ಯೂನತೆಗಳ ಚಿಕಿತ್ಸಾ ಕೇಂದ್ರವಾಗಿದೆ. 1966ರ ಅಕ್ಟೋಬರ್‌ನಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಇದು ಸ್ಥಾಪನೆಗೊಂಡಿತು. ಮಾತಿನ ತೊಂದರೆ, ಕಿವುಡತನ ಮತ್ತು ಇತರ ಸಂವಹನ ಸಂಬಂಧಿ ನ್ಯೂನತೆಗಳಿಗೆ ಚಿಕಿತ್ಸೆ ನೀಡುವುದು, ಈ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಸಂಶೋಧನೆ ನಡೆಸುವುದು ಈ ಸಂಸ್ಥೆಯ ಪ್ರಮುಖ ಉದ್ದೇಶಗಳಾಗಿವೆ.

ಆರಂಭದಲ್ಲಿ ಝಾನ್ಸಿ ಲಕ್ಷ್ಮೀಬಾಯಿ ರಸ್ತೆಯ ರಾಮಮಂದಿರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಸಂಸ್ಥೆ, 1970ರಲ್ಲಿ ಮಾನಸಗಂಗೋತ್ರಿ ಆವರಣಕ್ಕೆ ಸ್ಥಳಾಂತರಗೊಂಡಿತು. ಅಂದಿನ ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಸಂಸ್ಥೆಗೆ ನೀಡಿದ್ದ 32 ಎಕರೆ ಜಮೀನಿಗೆ ಬದಲಾಗಿ, ಮೈಸೂರು ವಿಶ್ವವಿದ್ಯಾನಿಲಯವು ಮಾನಸಗಂಗೋತ್ರಿಯಲ್ಲಿ 32 ಎಕರೆ ಜಮೀನನ್ನು ನೀಡಿತ್ತು. ಅಂದಿನಿಂದ ಇಲ್ಲೇ ಕಾರ್ಯನಿರ್ವಹಿಸುತ್ತಿರುವ 'ಆಯಿಷ್', ಚಿಕಿತ್ಸೆಯ ಜೊತೆಗೆ ಅಧ್ಯಯನ ಮತ್ತು ಸಂಶೋಧನೆಗೂ ಹೆಚ್ಚಿನ ಒತ್ತು ನೀಡಿದೆ. ಇಲ್ಲಿಯವರೆಗೆ, ಎಂಟುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಕ್-ಶ್ರವಣ ವಿಷಯದಲ್ಲಿ ಪದವಿ ಪಡೆದು, ದೇಶ-ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

Tags:    

Similar News