ಮಂಡ್ಯ ಸಾಹಿತ್ಯ ಸಮ್ಮೇಳನ | ಕನ್ನಡ ಶಾಲೆ ಕಾಯಕಲ್ಪ ಸೇರಿ ಐದು ನಿರ್ಣಯಗಳ ಮಂಡನೆ

ಎಲ್ಲ ಕನ್ನಡ ಶಾಲೆಗಳಿಗೆ ಕಟ್ಟಡ, ವಾಚನಾಲಯ, ಆಟದ ಮೈದಾನ ಸೇರಿದಂತೆ ಇತರ ಮೂಲಸೌಕರ್ಯಗಳನ್ನು ಒದಗಿಸಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು. ಕನ್ನಡೇತರ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ಕಡ್ಡಾಯವಾಗಿ ನೇಮಕ ಮಾಡಬೇಕು ಎಂಬ ನಿರ್ಣಯ ಮಂಡಿಸಲಾಗಿದೆ.;

Update: 2024-12-22 13:37 GMT

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ನಡೆದ ಬಹಿರಂಗ ಅಧಿವೇಶನದಲ್ಲಿ ಕಸಾಪ ಗೌರವ ಕೋಶಾಧ್ಯಕ್ಷ ಪಟೇಲ್‌ ಪಾಂಡು ಅವರು ಐದು ನಿರ್ಣಯಗಳನ್ನು ಮಂಡಿಸಿದರು.

1. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮವನ್ನು ಕೂಡಲೇ ಅನುಷ್ಠಾನಗೊಳಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರನ್ನು ಅಧಿನಿಯಮದಡಿ 'ರಾಜ್ಯ ಮಟ್ಟದ ಸಮಿತಿಯ ಉಪಾಧ್ಯಕ್ಷರʼ ನ್ನಾಗಿ ನೇಮಕ ಮಾಡಲು ಸೂಕ್ತ ತಿದ್ದುಪಡಿ ತರಬೇಕು.

2. ಎಲ್ಲ ಕನ್ನಡ ಶಾಲೆಗಳಿಗೆ ಕಟ್ಟಡ, ವಾಚನಾಲಯ, ಆಟದ ಮೈದಾನ ಸೇರಿದಂತೆ ಇತರ ಮೂಲಸೌಕರ್ಯಗಳನ್ನು ಒದಗಿಸಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು. ಕನ್ನಡೇತರ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ಕಡ್ಡಾಯವಾಗಿ ನೇಮಕ ಮಾಡಬೇಕು.

3. ಕನ್ನಡ ಅನ್ನದ ಭಾಷೆಯಾಗಲು ಕನ್ನಡಿಗರ ಉದ್ಯೋಗಕ್ಕೆ ತಡೆಯಾಗಿರುವ ಬಾಕಿ ಪ್ರಕರಣಗಳನ್ನು ಸರ್ಕಾರ ನ್ಯಾಯಾಲಯದಲ್ಲಿ ಸಮರ್ಪಕವಾಗಿ ಎದುರಿಸಬೇಕು. ಸರೋಜಿನಿ ಮಹಿಷಿ ವರದಿಯನ್ನು ಶಾಸನಬದ್ಧಗೊಳಿಸಿ ಅನುಷ್ಠಾನಗೊಳಿಸಬೇಕು.

4. ದಾವಣಗೆರೆಯಲ್ಲಿ ನಡೆಯಬೇಕಿರುವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಅತಿ ಶೀಘ್ರದಲ್ಲಿ ನಡೆಸಬೇಕು.

5. ಕರ್ನಾಟಕ ಸರ್ಕಾರವು ರಾಷ್ಟ್ರಕವಿಯನ್ನು ಅತಿ ಶೀಘ್ರವಾಗಿ ಘೋಷಿಸಬೇಕು ಎಂಬ ನಿರ್ಣಯಗಳನ್ನು ಮಂಡಿಸಲಾಯಿತು.

ಎಲ್ಲಾ ನಿರ್ಣಯಗಳಿಗೆ ಅನುಮೋದನೆ ನೀಡುವಂತೆ ಮುಂದಿನ ವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಲು ತೀರ್ಮಾನಿಸಲಾಯಿತು. 

ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈ ಬಾರಿ ಜನಸಾಗರವೇ ಹರಿದುಬಂದಿತ್ತು. ಸಮ್ಮೇಳನದ ಮೊದಲ ದಿನ 2 ಲಕ್ಷ ಜನ ಸೇರಿ ದಾಖಲೆ ಬರೆದಿದ್ದರು. ಎರಡು ಮತ್ತು ಮೂರನೇ ದಿನ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಆಗಮಿಸಿದ್ದರು.

Tags:    

Similar News