ಬಿಜೆಪಿಗೆ ತಿರುಗೇಟು | ಬಿಜೆಪಿ ಹಗರಣಗಳಿಗೆ ತಾರ್ಕಿಕ ಅಂತ್ಯ ಖಚಿತ: ಸಚಿವ ಡಾ. ಜಿ. ಪರಮೇಶ್ವರ್‌

ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿಯ ಮೊದಲ ಸಭೆಯಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಎಚ್.ಕೆ ಪಾಟೀಲ್ ಸೇರಿದಂತೆ ಸಮಿತಿಯ ಎಲ್ಲ ಸದಸ್ಯರೂ ಹಾಜರಿದ್ದರು.

Update: 2024-09-14 11:03 GMT
ಡಾ.ಜಿ ಪರಮೇಶ್ವರ್‌
Click the Play button to listen to article

ಬಿಜೆಪಿ ಅಧಿಕಾರಾವಧಿಯ ಎಲ್ಲಾ ಹಗರಣಗಳ ತನಿಖಾ ವರದಿ ಆದಷ್ಟು ಬೇಗ ಸರ್ಕಾರದ ಕೈಸೇರುವಂತೆ ಕ್ರಮವಹಿಸುವುದು. ಜೊತೆಗೆ ಇದುವರೆಗೆ ತನಿಖೆಗೆ ವಹಿಸದೇ ಇರುವ ಇನ್ನೂ ಕೆಲವು ಪ್ರಕರಣಗಳನ್ನು ತನಿಖೆಗೆ ವಹಿಸುವುದು ಸೇರಿದಂತೆ ಬಿಜೆಪಿ ಅವಧಿಯ ಪ್ರತಿಯೊಂದು ಹಗರಣಗಳ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಗೃಹ ಸಚಿವ ಡಾ. ಜಿ.ಪರಮೇಶ್ವರ್ ನೇತೃತ್ವದ ಶುಕ್ರವಾರ ನಡೆದ ಸಚಿವ ಸಂಪುಟ ಉಪ ಸಮಿತಿಯ ಮೊದಲ ಸಭೆಯಲ್ಲಿ ನಿರ್ಧರಿಸಲಾಗಿದೆ.

ವಿಧಾನಸೌಧದಲ್ಲಿ ನಡೆದ ಮೊದಲ ಸಭೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯ ಸದಸ್ಯರಾದ ಎಚ್‌ ಕೆ ಪಾಟೀಲ್‌, ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಸಂತೋಷ್‌ ಲಾಡ್‌ ಸೇರಿದಂತೆ ಎಲ್ಲ ಸದಸ್ಯರೂ ಹಾಜರಿದ್ದರು. 

ಈಗಾಗಲೇ ತನಿಖಾ ಹಂತದಲ್ಲಿರುವ ಪ್ರಕರಣಗಳಲ್ಲಿ ಆದಷ್ಟು ಬೇಗ ತನಿಖಾ ವರದಿ ಸರ್ಕಾರದ ಕೈ ಸೇರುವಂತೆ ಕ್ರಮ ವಹಿಸುವುದು. ಇದುವರೆಗೆ ತನಿಖೆಗೆ ವಹಿಸದೇ ಇರುವ ಇತರೆ ಪ್ರಕರಣಗಳನ್ನೂ ಪರಿಶೀಲಿಸಿ ಅಗತ್ಯವಿರುವ ಪ್ರಕರಣಗಳನ್ನು ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ. ಈಗಾಗಲೇ ತನಿಖಾ ಹಂತದಲ್ಲಿರುವ ಕೋವಿಡ್ ಹಗರಣ, 40 ಪರ್ಸೆಂಟ್ ಕಮಿಷನ್ ಆರೋಪ, ಪಿಎಸ್‌ಐ ನೇಮಕಾತಿ, ಅಕ್ರಮ ಆಸ್ತಿ ಗಳಿಕೆ ಹಗರಣ ಸೇರಿದಂತೆ 21 ಪ್ರಕರಣಗಳ ತನಿಖೆ ಯಾವ ಹಂತದಲ್ಲಿದೆ? ತನಿಖೆ ಪೂರ್ಣಗೊಳಿಸಲು ಇನ್ನೆಷ್ಟು ಕಾಲಾವಕಾಶಬೇಕು ಎಂದು ಪೊಲೀಸ್ ಇಲಾಖೆ, ಲೋಕಾಯುಕ್ತ ಹಾಗೂ ಸಿಐಡಿಯ ಸಂಬಂಧಿಸಿದ ತನಿಖಾ ಅಧಿಕಾರಿಗಳಿಂದ ಸಮಿತಿ ಮಾಹಿತಿ ಪಡೆಯಿತು.

ಜೊತೆಗೆ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ಇರುವ, ಮುಕ್ತಾಯಗೊಂಡಿರುವ ಹಾಗೂ ಬಿಜೆಪಿ ನಾಯಕರು ಜಾಮೀನು ಪಡೆದಿರುವ ಪ್ರಕರಣಗಳು ಹಾಗೂ ಕಾನೂನು ತೊಡಕಿರುವ ಪ್ರಕರಣಗಳಲ್ಲಿ ಮುಂದೇನು ಮಾಡಬೇಕು, ಮರು ತನಿಖೆಗೆ ಯಾವ ಪ್ರಕರಣಗಳನ್ನು ವಹಿಸಬಹುದು ಎಂಬ ಬಗ್ಗೆ ಕಾನೂನು ಪರಿಣತರಿಂದ ಸಲಹೆ ಪಡೆದುಕೊಂಡಿತು. ಇವುಗಳ ಜೊತೆಗೆ, ತನಿಖೆಗೆ ವಹಿಸದೇ ಇರುವ ಯಾವ್ಯಾವ ಪ್ರಕರಣಗಳಿವೆ, ಅವುಗಳಲ್ಲಿ ಯಾವ ಪ್ರಕರಣಗಳನ್ನು ತನಿಖೆಗೆ ವಹಿಸಬಹುದು ಎಂಬ ಬಗ್ಗೆಯೂ ಸಮಿತಿ ಚರ್ಚೆ ನಡೆಸಿತು ಎಂದು ಹೇಳಲಾಗಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪರಮೇಶ್ವರ್, ನಾವು ಬಿಜೆಪಿ ಅವಧಿಯ ಹಗರಣಗಳನ್ನು ಸುಮ್ಮನೆ ಬಿಡುವುದಿಲ್ಲ. ಪ್ರತಿಯೊಂದನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಇಂದಿನ ಸಭೆಯಲ್ಲಿ ತನಿಖಾ ಹಂತದಲ್ಲಿರುವ ವಿವಿಧ ಪ್ರಕರಣಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ತನಿಖೆ ಈಗ ಯಾವ ಹಂತದಲ್ಲಿದೆ, ಯಾವ್ಯಾವ ಪ್ರಕರಣಗಳಲ್ಲಿ ತನಿಖೆ ಪೂರ್ಣಗೊಳಿಸಲು ಇನ್ನೂ ಎಷ್ಟು ಕಾಲಾವಕಾಶ ಬೇಕು ಎಂಬ ಮಾಹಿತಿ ಪಡೆದಿದ್ದೇವೆ. ಜೊತೆಗೆ ಹೊಸದಾಗಿ ಮೂರು -ನಾಲ್ಕು ಪ್ರಕರಣಗಳನ್ನು ತನಿಖೆಗೆ ವಹಿಸುವ ಬಗ್ಗೆಯೂ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.

ಬಿಜೆಪಿ ಹಗರಣ ತನಿಖೆ ಉಸ್ತುವಾರಿಗೆ ಸಮಿತಿ

ಬಿಜೆಪಿ ಅವಧಿಯ ಅಕ್ರಮ ಆರೋಪಗಳ ತನಿಖೆಗೆ ವೇಗ ನೀಡಲು ಸಿಎಂ ಸಿದ್ದರಾಮಯ್ಯ ಅವರು ಮೂರು ದಿನಗಳ ಹಿಂದೆ ಐವರು ಸಚಿವರನ್ನೊಳಗೊಂಡ ಸಚಿವ ಸಂಪುಟ ಉಪ ಸಮಿತಿ ರಚಿಸಿದ್ದರು. ಗೃಹ ಸಚಿವ ಜಿ.ಪರಮೇಶ್ವರ್ ನೇತೃತ್ವದ ರಚಿಸಿರುವ ಸಮಿತಿಯಲ್ಲಿ ಸಚಿವರಾದ ಎಚ್.ಕೆ. ಪಾಟೀಲ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಹಾಗೂ ಸಂತೋಷ್ ಲಾಡ್ ಇದ್ದಾರೆ.

ಸರ್ಕಾರದ ಹಾಗೂ ತನಿಖಾ ಸಂಸ್ಥೆಗಳ ಹಂತದಲ್ಲಿರುವ ವಿವಿಧ ಹಗರಣಗಳ ತನಿಖಾ ಪ್ರಗತಿ, ಸಮನ್ವಯ ಮುಂತಾದ ಕಾರ್ಯಗಳಿಗೆ ಸಂಬಂಧಿಸಿದಂತೆ ಈ ಸಮಿತಿ ಕ್ರಮವಹಿಸಲಿದೆ. ಮುಂದಿನ ಎರಡು ತಿಂಗಳಲ್ಲಿ ತಮಗೆ ವಹಿಸಿರುವ ಜವಾಬ್ದಾರಿಯನ್ನು ಪೂರ್ಣಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಸಮಿತಿಗೆ ಸೂಚಿಸಿದ್ದಾರೆ.

ಇದರೊಂದಿಗೆ ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಸಂಬಂಧ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಪ್ರತಿಪಕ್ಷ ಬಿಜೆಪಿಗೆ ಕೌಂಟರ್​ ನೀಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಬಿಜೆಪಿ ಅವಧಿಯಲ್ಲಿನ 21 ಹಗರಣಗಳ ಆರೋಪಗಳ ಬಗ್ಗೆ ವಿವಿಧ ಹಂತಗಳಲ್ಲಿ ತನಿಖೆ ನಡೆಯುತ್ತಿದೆ.‌

Tags:    

Similar News