ಚಾಮುಂಡಿ ಪ್ರಾಧಿಕಾರದ ಬೇಕೇಬೇಕು: ಸಿಎಂ ಪರ ಪ್ರತಾಪ್ ಸಿಂಹ ಬ್ಯಾಟಿಂಗ್
ಸಿದ್ದರಾಮಯ್ಯನವರು ಪ್ರಾಧಿಕಾರ ರಚನೆ ಮಾಡಿದ್ದಾರೆ. ಖಂಡಿತ ಇದು ಒಳ್ಳೆಯ ಕೆಲಸ ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.;
ಮೈಸೂರಿನ ಚಾಮುಂಡಿ ಬೆಟ್ಟ ಅಭಿವೃದ್ಧಿ ವಿಷಯದಲ್ಲಿ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜಮನೆತನ ಸಮರ ಸಾರಿದೆ.
ಇದೀಗ ಮತ್ತೊಂದು ಬೆಳವಣಿಗೆಯಲ್ಲಿ ಬಿಜೆಪಿ ಮಾಜಿ ಸಂಸದ ಪ್ರತಾಪ ಸಿಂಹ ಅವರು ಪ್ರಾಧಿಕಾರ ರಚನೆ ಆಗಲೇಬೇಕು ಎಂದು ಹೇಳುವ ಮೂಲಕ ತಮ್ಮದೇ ಪಕ್ಷದ ಸಂಸದ ಹಾಗೂ ರಾಜಮನೆತನದ ಯದುವೀರ್ ಒಡೆಯರ್ ವಿರುದ್ಧವೇ ಹೇಳಿಕೆ ನೀಡಿದ್ದಾರೆ.
"ಬೆಟ್ಟದ ಯದ್ವಾತದ್ವಾ ಬೆಳವಣಿಗೆ ನ್ಯೂನತೆಗಳನ್ನು ಸರಿದೂಗಿಸಲು ಪ್ರಾಧಿಕಾರದ ಅವಶ್ಯಕತೆ ಇದೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪೊಲೀಸ್ ಠಾಣೆ ಹಾಗೂ ಆಸ್ಪತ್ರೆ ಬೇಕು. ಇದೆಲ್ಲಾ ಆಗಬೇಕಿದ್ದರೆ ಒಂದು ಪ್ರಾಧಿಕಾರ ಬೇಕೇ ಬೇಕು. ಹಿಂದೆ ಬಿಜೆಪಿ ಸರ್ಕಾರದಲ್ಲೂ ಪ್ರಾಧಿಕಾರ ಬೇಕೆಂದು ಧ್ವನಿ ಎತ್ತಿದ್ದೆವು. ಸಿದ್ದರಾಮಯ್ಯ ಪ್ರಾಧಿಕಾರ ರಚನೆ ಮಾಡಿದ್ದಾರೆ, ಇದು ಒಳ್ಳೆಯ ಕೆಲಸ" ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರ ಪ್ರಾಧಿಕಾರಕ್ಕೆ ಮೈಸೂರು ರಾಜಮನೆತನ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಸಂಸದ ಯದುವೀರ್ ಒಡೆಯರ್ಗೆ ಟಾಂಗ್ ನೀಡಿದ್ದಾರೆ.
ಚಾಮುಂಡಿ ಬೆಟ್ಟದ ಪ್ರಾಧಿಕಾರ ಸ್ಥಾಪನೆಗೆ ರಾಜಮನೆತನ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಇತ್ತೀಚೆಗೆ, ಪ್ರಮೋದಾ ದೇವಿ ಅವರು ಚಾಮುಂಡಿ ಬೆಟ್ಟ ನಮ್ಮ ಮನೆತನದ ಸ್ವತ್ತು ಎಂದು ಹೇಳಿದ್ದರು. ಅದರ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯನವರು ಮೈಸೂರಿಗೆ ಭೇಟಿ ನೀಡಿ ಚಾಮುಂಡಿಬೆಟ್ಟ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಇದನ್ನು, ಹಾಲಿ ಸಂಸದ ಯದುವೀರ್ ವಿರೋಧಿಸಿದ್ದರು.
ಈ ಬಗ್ಗೆ ಬುಧವಾರ ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದು, "ಚಾಮುಂಡಿಬೆಟ್ಟದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ, ಕಾಡು ನಾಶ, ಪರಿಸರ ಮಾಲಿನ್ಯ ಇತ್ಯಾದಿಗಳನ್ನು ತಡೆಯಲು ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು. ಚಾಮುಂಡಿಬೆಟ್ಟಕ್ಕೆ ಪೋಲಿಸ್ ಠಾಣೆ ಹಾಗೂ ಆಸ್ಪತ್ರೆ ಬೇಕು. ಇದೆಲ್ಲಾ ಆಗಲು ಒಂದು ಪ್ರಾಧಿಕಾರದ ಅಗತ್ಯವಿದೆ'' ಎಂದು ಹೇಳಿದ್ದಾರೆ.
ಬಿಜೆಪಿಗರಾದರೂ ಈಗಿನ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸುತ್ತಿರುವುದನ್ನು ಸಹ ಅವರು ಸಮರ್ಥಿಸಿಕೊಂಡಿದ್ದಾರೆ. “ನಾನು ಸಿದ್ದರಾಮಯ್ಯರನ್ನು ಕೆಲವು ಸೈದ್ಧಾಂತಿಕ ವಿಚಾರದಲ್ಲಿ ಮಾತ್ರ ವಿರೋಧಿಸುತ್ತೇನೆ. ಅಭಿವೃದ್ಧಿ ವಿಷಯಗಳಲ್ಲಲ್ಲ’’ ಎಂದು ಹೇಳಿದ್ದಾರೆ.