ಮೈಸೂರು ಅರಮನೆಯ ಆಸ್ತಿಗೆ ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ಪ್ರಮೋದಾದೇವಿ ಅವರು ತಮ್ಮ ಪತ್ರದಲ್ಲಿ ಚಾಮರಾಜನಗರ ಜಿಲ್ಲೆಯ ಐದು ತಾಲೂಕುಗಳಲ್ಲಿ ವ್ಯಾಪಿಸಿರುವ ಈ ಭೂಮಿಯು ಮೈಸೂರು ಮಹಾರಾಜರ ಆಸ್ತಿ ಎಂದು ಹೇಳಿದ್ದಾರೆ.;

Update: 2025-04-07 14:35 GMT

ಪ್ರಮೋದಾ ದೇವಿ ಒಡೆಯರ್ ಅವರು ಚಾಮರಾಜನಗರ ಜಿಲ್ಲಾಧಿಕಾರಿಗೆ ಬರೆದ ಪತ್ರ.

ಚಾಮರಾಜನಗರ ಜಿಲ್ಲೆಯಲ್ಲಿರುವ ಮೈಸೂರು ರಾಜಮನೆತನಕ್ಕೆ ಸೇರಿರುವ 5,119 ಎಕರೆ ಭೂಮಿಯು ತಮ್ಮ ರಾಜಮನೆತನಕ್ಕೆ ಸೇರಿದ್ದು ಎಂದು  ಪ್ರಮೋದಾದೇವಿ ಒಡೆಯರ್ ಅವರು ಹೇಳಿದ್ದು, ಈ ಸಂಬಂಧ ಅವರು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಗೆ ಪತ್ರ ಬರೆದು ಖಾತೆ ಮಾಡಿಕೊಡುವಂತೆ ಕೋರಿದ್ದಾರೆ.

ಪ್ರಮೋದಾದೇವಿ ಅವರು ತಮ್ಮ ಪತ್ರದಲ್ಲಿ ಚಾಮರಾಜನಗರ ಜಿಲ್ಲೆಯ ಐದು ತಾಲೂಕುಗಳಲ್ಲಿ ವ್ಯಾಪಿಸಿರುವ ಈ ಭೂಮಿಯು ಮೈಸೂರು ಮಹಾರಾಜರ ಆಸ್ತಿ ಎಂದು ಹೇಳಿದ್ದಾರೆ. ಈ ಭೂಮಿಯಲ್ಲಿ ಚಾಮರಾಜನಗರ ತಾಲೂಕಿನಲ್ಲಿ 1,800 ಎಕರೆ, ಗುಂಡ್ಲುಪೇಟೆ ತಾಲೂಕಿನಲ್ಲಿ 1,500 ಎಕರೆ, ಕೊಳ್ಳೇಗಾಲ ತಾಲೂಕಿನಲ್ಲಿ 1,200 ಎಕರೆ, ಯಳಂದೂರು ತಾಲೂಕಿನಲ್ಲಿ 419 ಎಕರೆ ಮತ್ತು ಹನೂರು ತಾಲೂಕಿನಲ್ಲಿ 200 ಎಕರೆ ಭೂಮಿ ಸೇರಿದೆ ಎಂದು ಉಲ್ಲೇಖಿಸಲಾಗಿದೆ. ಒಟ್ಟಾರೆ 5,119 ಎಕರೆ ಭೂಮಿಯನ್ನು ರಾಜಮನೆತನದ ಹೆಸರಿಗೆ ವರ್ಗಾಯಿಸುವಂತೆ ಅವರು ಮನವಿ ಮಾಡಿದ್ದಾರೆ.

ಈ ಭೂಮಿಯಲ್ಲಿ ಕೆಲವು ಭಾಗಗಳು ಈಗಾಗಲೇ ಸರ್ಕಾರಿ ಯೋಜನೆಗಳಿಗೆ ಬಳಕೆಯಾಗಿವೆ ಎಂದು ತಿಳಿದುಬಂದಿದೆ. ಉದಾಹರಣೆಗೆ, ಚಾಮರಾಜನಗರ ತಾಲೂಕಿನಲ್ಲಿ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಆಸ್ಪತ್ರೆಗಳ ನಿರ್ಮಾಣಕ್ಕೆ ಈ ಭೂಮಿಯನ್ನು ಬಳಸಲಾಗಿದೆ. ಆದರೆ, ಈ ಭೂಮಿಯ ಮಾಲೀಕತ್ವವು ರಾಜಮನೆತನಕ್ಕೆ ಸೇರಿದ್ದು ಎಂದು ಪ್ರಮೋದಾದೇವಿ ದಾಖಲೆಗಳನ್ನು ನೀಡಿದ್ದಾರೆ.

ಮೈಸೂರು ರಾಜಮನೆತನವು ಐತಿಹಾಸಿಕವಾಗಿ ಬೃಹತ್​ ಪ್ರಮಾಣದ ಜಮೀನು ಹೊಂದಿದ್ದು, ಭಾರತ ಸ್ವಾತಂತ್ರ್ಯ ಪಡೆದ ನಂತರ ಭೂ ಸುಧಾರಣಾ ಕಾಯ್ದೆಗಳ ಅಡಿಯಲ್ಲಿ ಅನೇಕ ಆಸ್ತಿಗಳನ್ನು ಸರ್ಕಾರಕ್ಕೆ ವರ್ಗಾವಣೆಯಾಗಿದೆ. ಆದರೆ, ಕೆಲವು ಭೂಮಿಗಳ ಮಾಲೀಕತ್ವದ ವಿವಾದಗಳು ಇನ್ನೂ ಬಗೆಹರಿಯದೆ ಉಳಿದಿವೆ. ಪ್ರಮೋದಾದೇವಿ ಅವರು ಈ ಭೂಮಿಯನ್ನು ಮರಳಿ ಪಡೆಯಲು ಕಾನೂನು ಹೋರಾಟ ಮುಂದುವರಿಸುತ್ತಿದ್ದಾರೆ. ಈ ಹಿಂದೆಯೂ ಮೈಸೂರಿನ ಕುರುಬರಹಳ್ಳಿ, ಅಲನಹಳ್ಳಿ ಮತ್ತು ಚೋಡನಹಳ್ಳಿಯ ಆಸ್ತಿಗಳಿಗಾಗಿ ಅವರು ಹೈಕೋರ್ಟ್‌ನಲ್ಲಿ ಗೆದ್ದಿದ್ದರು. ಆದರೆ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಭೂಮಿ ರಕ್ಷಿಸುತ್ತೇವೆ ಎಂದ ಪ್ರಮೊದಾದೇವಿ

ಪ್ರಮೋದಾದೇವಿ ಅವರು ತಮ್ಮ ಪತ್ರದಲ್ಲಿ ತಮ್ಮ ದಿವಂಗತ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್​ಗೆ ಸೇರಿದ ಆಸ್ತಿಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ತಾವು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಈ ಭೂಮಿಯ ದಾಖಲೆಗಳನ್ನು ಸರ್ಕಾರದಿಂದ ಪಡೆಯಲು ಮತ್ತು ಅವುಗಳನ್ನು ರಾಜಮನೆತನದ ಹೆಸರಿಗೆ ಖಾತೆ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಪ್ರತಿಕ್ರಿಯೆ

ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಈ ಪತ್ರವನ್ನು ಪಡೆದಿರುವುದನ್ನು ದೃಢಪಡಿಸಿದ್ದಾರೆ. ಆದರೆ, ಈ ವಿಷಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲ ದಾಖಲೆಗಳನ್ನು ಪರಿಶೀಲಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಭೂಮಿಯ ಮಾಲೀಕತ್ವವನ್ನು ದೃಢೀಕರಿಸಲು ಕಂದಾಯ ಇಲಾಖೆಯ ದಾಖಲೆಗಳನ್ನು ಪರಿಶೀಲಿಸುವ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.

Tags:    

Similar News