ಪ್ರಜ್ವಲ್ ಲೈಂಗಿಕ ಹಗರಣ| ನಾಳೆ ಸಾವಿರಾರು ಮಂದಿಯಿಂದ ʼಹೋರಾಟದ ನಡಿಗೆ ಹಾಸನದ ಕಡೆಗೆʼ!
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಕಾರಣ ಎಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಎರಡೂ ಸರ್ಕಾರಗಳು ಈ ಪ್ರಜ್ವಲ್ ರೇವಣ್ಣ ಹಗರಣದಲ್ಲಿ ಗಂಭೀರವಾಗಿ ವರ್ತಿಸಬೇಕೆಂದು ಒತ್ತಾಯ ಮಾಡಿವೆ. ಸುಮಾರು 10,000ಕ್ಕಿಂತ ಹೆಚ್ಚಿನ ಜನರು ಹಾಸನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಿದ್ದಾರೆ.;
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ನಡೆದಿದೆ ಎನ್ನಲಾದ ಅತ್ಯಾಚಾರ ಮತ್ತು ಲೈಂಗಿಕ ಹಗರಣವನ್ನು ವಿರೋಧಿಸಿ, ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬಲು ನಾಡಿನ ವಿವಿಧ ಜನಪರ ಸಂಘಟನೆಗಳು ಮೇ 30ರ ಗುರುವಾರಂದು 'ಹೋರಾಟದ ನಡಿಗೆ ಹಾಸನದ ಕಡೆಗೆ' ಹೆಸರಿನಲ್ಲಿ ಬೃಹತ್ ಪ್ರತಿಭಟನೆ ಹಾಗೂ ಬಹಿರಂಗ ಸಭೆ ಹಮ್ಮಿಕೊಂಡಿವೆ.
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಕಾರಣ ಎಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಎರಡೂ ಸರ್ಕಾರಗಳು ಈ ಪ್ರಜ್ವಲ್ ರೇವಣ್ಣ ಹಗರಣದಲ್ಲಿ ಗಂಭೀರವಾಗಿ ವರ್ತಿಸಬೇಕೆಂದು ಒತ್ತಾಯ ಮಾಡಿವೆ. ಮಹಿಳಾ, ದಲಿತ, ಕಾರ್ಮಿಕ, ರೈತ, ವಿದ್ಯಾರ್ಥಿ, ಯುವಜನರ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ, ಲಿಂಗತ್ವ ಅಲ್ಪಸಂಖ್ಯಾತರ, ಆದಿವಾಸಿಗಳ ಮತ್ತು ಇನ್ನಿತರ ಹಲವು ಸಂಘಟನೆಗಳ ಪ್ರತಿನಿಧಿಗಳು, ಹಾಗೆಯೇ ರಾಜ್ಯದ ಮತ್ತು ದೇಶದ ಕೆಲವೆಡೆಗಳಿಂದ ಚಿಂತಕರು, ಬರಹಗಾರರು, ಬುದ್ಧಿಜೀವಿಗಳು, ಕಲಾವಿದರು, ನಿವೃತ್ತ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಸೇರಿದಂತೆ ಸುಮಾರು 10,000ಕ್ಕಿಂತ ಹೆಚ್ಚಿನ ಜನರು ಭಾಗವಹಿಸಲಿದ್ದಾರೆ.
ಒಂದು ತಿಂಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಸೋಮವಾರ ಮೇ ೨೭) ರಂದು ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿ ತಾನು ಮೇ ೩೧ಕ್ಕೆ (ಶುಕ್ರವಾರ) ಬೆಂಗಳೂರಿಗೆ ಬಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಂದೆ ಹಾಜರಾಗುತ್ತೇನೆ ಎಂದು ಹೇಳಿಕೆ ನೀಡಿದ್ದಾನೆ. ಸಾವಿರಾರು ಜನ ಪರ ಹೋರಾಟಗಾರರು ಹಾಸನದಲ್ಲಿ ರೇವಣ್ಣ ಬಂಧನ ಆಗ್ರಹಿಸಿ ಬೃಹತ್ ಪ್ರತಿಭಟನಾ ಸಭೆ ನಡೆಸಲು ನಿರ್ಧರಿಸಿದ ಬಳಿಕ ಪ್ರಜ್ವಲ್ ತಾನು ಶರಣಾಗುವ ಹೇಳಿಕೆ ನೀಡಿರುವುದು ಗಮನೀಯ ವಿಷಯ.
ಈ ಬೃಹತ್ ಪ್ರತಿಭಟನೆಯಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ ಹೋರಾಟಗಾರರು ಬರುತ್ತಿದ್ದಾರೆ. ಸುಭಾಸ್ ಚಂದ್ರ ಭೋಸ್ ಅವರ ಭಾರತೀಯ ರಾಷ್ಟ್ರೀಯ ಸೇನೆಯ(ಐಎನ್‌ಎ) ಭಾಗವಾಗಿದ್ದ ಕರ್ನಲ್ ಪ್ರೇಮ್ ಸೆಹಗಲ್ ಮತ್ತು ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಅವರ ಪುತ್ರಿ, ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷೆ ಸುಭಾಷಿಣಿ ಅಲಿ ಅವರು ಸೇರಿದಂತೆ ವಿವಿಧ ರಾಷ್ಟ್ರೀಯ ಹೋರಾಟಗಾರರು ಭಾಗಿಯಾಗಲಿದ್ದಾರೆ. ಇನ್ನು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ, ಸಿಐಟಿಯುನ ರಾಜ್ಯ ಅಧ್ಯಕ್ಷೆ ವರಲಕ್ಷ್ಮಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ, ಲೇಖಕಿ ಹೋರಾಗಾರ್ತಿ ಕೆ. ನೀಲಾ, ಬಂಜಗೆರೆ ಜಯಪ್ರಕಾಶ, ಹಿ.ಶಿ. ರಾಮಚಂದ್ರೇಗೌಡ, ಸಬಿಹಾ ಭೂಮಿಗೌಡ, ಮಾವಳ್ಳಿ ಶಂಕರ ಸೇರಿದಂತೆ ಅನೇಕ ಪ್ರಗತಿಪರರು ಈ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದ ನೇತೃತ್ವದಲ್ಲಿ 18 ಮೇ 2024ರಂದು ರಾಜ್ಯ ಮಟ್ಟದ ಸಮಾಲೋಚನಾ ಸಭೆ ನಡೆಸಿ ಹಲವು ನಿರ್ಧಾರ ಹಾಗೂ ಬೇಡಿಕೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಅದರಂತೆ 'ಹೋರಾಟದ ನಡಿಗೆ ಹಾಸನದ ಕಡೆಗೆ' ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ವಿಕೃತ ಲೈಂಗಿಕ ಅಪರಾಧಕ್ಕೆ ಕಾರಣನಾದ ಸಂಸದ ಪ್ರಜ್ವಲ್ ರೇವಣ್ಣ ಮೇಲೆ ಕಣ್ಣಾವಲು ಹಾಕದೆ, ಆತನನ್ನು ಬಂಧಿಸದೆ ಆತ ವಿದೇಶಕ್ಕೆ ಪರಾರಿಯಾಗಲು ಅನುವು ಮಾಡಿಕೊಟ್ಟಿರುವುದು ಅಕ್ಷಮ್ಯ. ಆನಂತರ ಸರ್ಕಾರವು ವಿಶೇಷ ತನಿಖಾ ತಂಡ ರಚನೆ ಮಾಡಿದೆ. ಈಗಲೂ ವಿಕೃತ ಆರೋಪಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ 'ರೆಡ್ ಕಾರ್ನರ್ ನೋಟಿಸ್' ಹೊರಡಿಸಿಲ್ಲ. ಪ್ರಜ್ವಲ್ ರೇವಣ್ಣಗೆ ನೀಡಿರುವ 'ರಾಜತಾಂತ್ರಿಕ ಪಾಸ್ ಪೋರ್ಟ್' ಮತ್ತು 'ವೀಸಾ'ವನ್ನು ಕೇಂದ್ರ ಸರ್ಕಾರ ರದ್ದುಪಡಿಸಿಲ್ಲ. ಆತನ ಬಂಧನಕ್ಕೆ ನೆರವು ನೀಡುವಂತೆ ಕೋರಿದ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಅಗತ್ಯ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿಲ್ಲ. ಯಾಕೆ ಹೀಗೆ? ಯಾರನ್ನು ರಕ್ಷಿಸುತ್ತಿದ್ದೀರಿ ಎನ್ನುವ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಜನಪರ ಸಂಘಟನೆಗಳು ಹಾಸನ ಚಲೋ ಹಮ್ಮಿಕೊಂಡಿವೆ.
ಈ ಪ್ರತಿಭಟನೆಯ ಉದ್ದೇಶವು, ಪ್ರಜ್ವಲ್ ರೇವಣ್ಣನ ಕ್ರಿಮಿನಲ್ ಲೈಂಗಿಕ ಹಿಂಸಾಚಾರದ ಬಲಿಪಶುಗಳಾದ ಸಾವಿರಾರು ಮಹಿಳೆಯರಿಗೆ ಸ್ಥೈರ್ಯ ತುಂಬಿ ಬಹಿರಂಗವಾಗಿ ಮತ್ತು ಒಗ್ಗಟ್ಟಾಗಿ ಅವರ ಘನತೆಯನ್ನು ಎತ್ತಿಹಿಡಿಯುವುದರ ಜೊತೆಗೆ ಈ ಪ್ರಜ್ವಲ್‌ನನ್ನು ಆದಷ್ಟು ಬೇಗ ಬಂಧಿಸಬೇಕು, ವಿಡಿಯೋ ಹಂಚಿದವರನ್ನೂ ಬಂಧಿಸಿ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯಿಸುವುದೂ ಕೂಡಾ ಆಗಿದೆ.
ಈ ಬಗ್ಗೆ ʻದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ಅವರು, ʻʻಆರೋಪಿಯೊಬ್ಬ ತನಗೆ ಇಷ್ಟ ಬಂದಂತೆ ದೇಶ ಬಿಟ್ಟು ಹೋಗುತ್ತಾನೆ, ತಾನು ಯಾವಾಗ ಬಂಧನ ಆಗಬೇಕು ಎನ್ನುವುದನ್ನು ಆರೋಪಿಯೇ ತೀರ್ಮಾನ ಮಾಡುತ್ತಾನೆ. ಇದು ಯಾವ ರೀತಿಯ ಪ್ರಜಾಪ್ರಭುತ್ವ?, ಆರೋಪಿಯ ತಾತ, ದೇಶದ ಮಾಜಿ ಪ್ರಧಾನಿ ಆತ ಓಡಿ ಹೋಗಿ ಒಂದು ತಿಂಗಳ ಬಳಿಕ ಮೊಮ್ಮಗನಿಗೆ ಮೋಹದ ಪತ್ರ ಬರೆಯುತ್ತಾರೆ. ಅದಕ್ಕೆ ಅಲ್ಲಿಂದ ಆರೋಪಿಯು ತಾನು ಮೇ ೩೧ಕ್ಕೆ ಬರ್ತೀನಿ, ಎಸ್‌ಐಟಿ ಮುಂದೆ ಹಾಜರಾಗುತ್ತೇನೆ ಎಂದು ದಿನಾಂಕ ನಿಗದಿ ಮಾಡುತ್ತಾನೆ. ಇದು ಆಧುನಿಕ ಪಾಳೆಗಾರಿಕೆಯ ಕ್ರೌರ್ಯ ಅಲ್ಲದೇ ಇನ್ನೇನು? ಎಂದು ಕಿಡಿಕಾರಿದರು.
ಇಂತಹ ಕ್ರೌರ್ಯ ಎಸಗಿ ದೇಶ ಬಿಟ್ಟು ಓಡಿಹೋದವನು, ಒಂದು ವಾರದ ಬಳಿಕ ವಾಪಸ್ ದೇಶಕ್ಕೆ ಬರ್ತೀನಿ ಅಂತ ಹೇಳಿದವನು ಬರಲಿಲ್ಲ. ಹಾಗಿದ್ದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ವಹಿಸಿದೇ ಇಲ್ಲಿಯವರೆಗೂ ಸುಮ್ನೆ ಕೂತವು. ಆತನ ಪಾಸ್‌ಪೋರ್ಟ್ ರದ್ದು ಮಾಡಬಹುದಿತ್ತು, ಬ್ಯಾಂಕ್ ಅಕೌಂಟ್‌ಗಳನ್ನು ಸೀಜ್ ಮಾಡಬಹುದಿತ್ತು ಆದ್ರ ಯಾವುದನ್ನೂ ಮಾಡಲಿಲ್ಲ ಯಾಕೆ? ಎಂದು ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು.
.
ʻದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಮತ್ತೋರ್ವ ಹೋರಾಟಗಾರ್ತಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ ಅವರು, ʻʻಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಓಡಿಹೋಗಲು ರಾಜ್ಯ ಸರ್ಕಾರದ ವಿಳಂಬ ನಡೆಯೇ ಕಾರಣವಾಗಿದೆ. ಆ ಬಳಿಕ ಕೇಂದ್ರ ಸರ್ಕಾರ ಆತನ ಪಾಸ್‌ಪೋರ್ಟ್ ರದ್ದು ಮಾಡಬೇಕಿತ್ತು. ಏಕೆಂದರೆ ಇಂತಹ ದೊಡ್ಡ ಮಟ್ಟದ ಲೈಂಗಿಕ ಹಗರಣ ನಡೆಸಿರುವಂತವನು ವಿದೇಶಕ್ಕೆ ಹೋಗಿ ತಲೆಮರೆಸಿಕೊಳ್ಳುತ್ತಾನೆ ಅಂದ್ರೆ ಏನು ಅರ್ಥ? ಇದರಲ್ಲಿ ಎರಡೂ ಸರ್ಕಾರದ ತಪ್ಪುಗಳಿವೆʼʼ ಎಂದು ಆರೋಪ ಮಾಡಿದರು.
ʻʻಆತ ಇಂತಹ ತಾರೀಖಿನಂದು ಬರುತ್ತೇನೆ ಎಂದು ಹೇಳುತ್ತಾನೆ, ಅವನಿಗೆ ಇಲ್ಲಿಂದ ಸಂಪೂರ್ಣ ಮಾಹಿತಿ ನೀಡಲು ಮತ್ತು ಮುಂದೆ ಏನೇನು ಮಾಡಬೇಕು ಎನ್ನುವ ಬಗ್ಗೆ ಸೂಚನೆಗಳನ್ನು ನೀಡುವ ಜಾಲವೇ ಇಲ್ಲಿ ಇದೆ ಎಂದು ನಮಗೆ ಅನಿಸುತ್ತದೆ. ದೇವೇಗೌಡರು ಒಂದು ತಿಂಗಳ ನಂತರ ಒಂದು ಪತ್ರ ಬರೆಯುತ್ತಾರೆ, ಅವರ ಕುಟುಂಬ ಸದಸ್ಯರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಅಸಹ್ಯ ಹುಟ್ಟಿಸುವಂತದ್ದʼʼ ಎಂದು ಕಿಡಿಕಾರಿದರು.