ಕೋರ್ಟ್ ಹಾಲ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಪ್ರಜ್ವಲ್ ರೇವಣ್ಣ: ಕನಿಷ್ಠ ಶಿಕ್ಷೆ ನೀಡಿ ಎಂದು ಮನವಿ
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು ನೀಡಿದ್ದ ವಿಶೇಷ ನ್ಯಾಯಾಲಯ ಶುಕ್ರವಾರ ದೋಷಿ ಎಂದು ತೀರ್ಪು ಪ್ರಕಟಿಸಿತ್ತು.;
ಮಾಜಿ ಸಂಸದ ಪ್ರಜ್ವಲ್ ರೇವಣ್ಣ
ಮನೆ ಕೆಲಸದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಶನಿವಾರ ನ್ಯಾಯಾಲಯದಲ್ಲಿ ಬಿಕ್ಕಿ ಬಿಕ್ಕಿ ಅತ್ತು ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ನ್ಯಾಯಾಧೀಶರಲ್ಲಿ ಗೋಗೆರೆದ ಪ್ರಸಂಗ ನಡೆಯಿತು.
ನನ್ನ ಮೇಲೆ ವೃಥಾ ಆರೋಪ ಮಾಡಲಾಗಿದೆ. ಈ ಹೊತ್ತಿನಲ್ಲಿ ನಾನು ಯಾರ ಮೇಲೆ ಆರೋಪ ಮಾಡಲು ಹೋಗುವುದಿಲ್ಲ. ನಾನು ತಪ್ಪು ಮಾಡಿಲ್ಲ, ಅತ್ಯಾಚಾರ ಆರೋಪದಿಂದಾಗಿ ನನ್ನ ತಂದೆ-ತಾಯಿಗೂ ಮುಖ ನೋಡಿಸಲು ಆಗುತ್ತಿಲ್ಲ. ಕನಿಷ್ಠ ಶಿಕ್ಷೆ ನೀಡಿ ಎಂದು ಶನಿವಾರ ಕೋರ್ಟ್ ಹಾಲ್‌ನಲ್ಲಿ ಮನವಿ ಮಾಡಿಕೊಂಡರು.
ವಿಶೇಷ ನ್ಯಾಯಾಲಯದಲ್ಲಿ ಇಂದು (ಶನಿವಾರ) ಮಧ್ಯಾಹ್ನ 2.45ಕ್ಕೆ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ. ಇದಕ್ಕೂ ಮುನ್ನ ಬೆಳಿಗ್ಗೆ ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆಯಿತು. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಅಭಿಯೋಜಕ ಬಿ.ಎನ್. ಜಗದೀಶ್ ಸಮರ್ಥ ವಾದ ಮಂಡಿಸಿದರು. ಈ ವೇಳೆ ನ್ಯಾಯಾಧೀಶರು ಪ್ರಜ್ವಲ್ ರೇವಣ್ಣ ಅವರನ್ನು ಕೆಲ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಪ್ರಜ್ವಲ್ ರೇವಣ್ಣ ಅಳುತ್ತಲೇ ಉತ್ತರಿಸಿದರು.
'ನಾನು ಸಂಸದನಾಗಿದ್ದ ವೇಳೆ ಯಾರೂ ಇಂತಹ ಆರೋಪ ಮಾಡಿರಲಿಲ್ಲ. ನಾನು ಅತ್ಯಾಚಾರ ಮಾಡಿದ್ದರೆ ಅವರು ಯಾರಿಗೂ ಏಕೆ ಹೇಳಿರಲಿಲ್ಲ? ಚುನಾವಣೆ ಸಮಯದಲ್ಲಿಯೇ ಅವರು ಯಾಕೆ ಹಾಗೆ ಮಾಡಿದ್ದಾರೆ? ಪೊಲೀಸರೇ ಈ ಕೆಲಸ ಮಾಡಿದ್ದಾರೆ. ಚುನಾವಣೆ ವೇಳೆ ಈ ರೀತಿ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡರು. ಕಳೆದ 6 ತಿಂಗಳಿಂದ ನಾನು ತಂದೆ ತಾಯಿಯನ್ನು ನೋಡಿಲ್ಲ. ನ್ಯಾಯಾಲಯ ಏನೇ ತೀರ್ಮಾನ ಕೈಗೊಂಡರೂ ಅದನ್ನು ಒಪ್ಪಿಕೊಳ್ಳುತ್ತೇನೆ. ದಯಮಾಡಿ ಕನಿಷ್ಠ ಶಿಕ್ಷೆ ಕೊಡಿ ಎಂದು ಬೇಡಿಕೊಂಡರು.
ಈ ವೇಳೆ ನ್ಯಾಯಾಧೀಶರು ಪ್ರಜ್ವಲ್ ಉದ್ದೇಶಿಸಿ, ನಿಮ್ಮ ಶೈಕ್ಷಣಿಕ ಅರ್ಹತೆ ಏನು ಎಂದು ಕೇಳಿದಾಗ ಬಿಇ ಇನ್ ಮೆಕ್ಯಾನಿಕಲ್ ಎಂದು ಉತ್ತರಿಸಿದರು.