
ಅತ್ಯಾಚಾರ ಪ್ರಕರಣ| ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ; ಮಹತ್ವದ ತೀರ್ಪು ಪ್ರಕಟಿಸಿದ ವಿಶೇಷ ನ್ಯಾಯಾಲಯ
ಪ್ರಕರಣದ ವಾದ-ವಿವಾದ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಈ ತೀರ್ಪು ಪ್ರಕಟಿಸಿದರು. ಶಿಕ್ಷೆಯ ಪ್ರಮಾಣವನ್ನು ಶನಿವಾರ ಪ್ರಕಟಿಸಲಿದ್ದಾರೆ.
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ನಾಲ್ಕು ಲೈಂಗಿಕ ದೌರ್ಜನ್ಯ ಪ್ರಕರಣಗಳ ಪೈಕಿ ಒಂದರ ತೀರ್ಪನ್ನು ಶುಕ್ರವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕಟಿಸಿದೆ. ಮನೆಕೆಲಸದಾಕೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ದೋಷಿ ತೀರ್ಪು ನೀಡಿದೆ.
ಪ್ರಕರಣದ ವಾದ-ವಿವಾದ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಈ ತೀರ್ಪು ಪ್ರಕಟಿಸಿದರು. ಶಿಕ್ಷೆಯ ಪ್ರಮಾಣವನ್ನು ಶನಿವಾರ ಪ್ರಕಟಿಸಲಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದ ತೀರ್ಪು ಹೊರಬೀಳುತ್ತಿದ್ದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕಣ್ಣೀರು ಒರೆಸಿಕೊಳ್ಳುತ್ತಾ ನ್ಯಾಯಾಲಯದ ಸಭಾಂಗಣದಿಂದ ಹೊರನಡೆದರು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರು, ಎರಡೂ ಕಡೆಯ ವಕೀಲರಿಂದ ಕೆಲವು ಸ್ಪಷ್ಟೀಕರಣ ಕೇಳಿದ್ಧರು. ಗೂಗಲ್ ಮ್ಯಾಪ್ ಅನ್ನು ಸಾಕ್ಷಿಯಾಗಿ ಪರಿಗಣಿಸಿಸಬಹುದೇ?, ಸ್ಯಾಮ್ಸಂಗ್ ಜೆ-4 ಮೊಬೈಲ್ ಸೀಜ್ ಮಾಡಿರುವ ಬಗ್ಗೆಯೂ ಮಾಹಿತಿ ಕೇಳಿ, ಸ್ಪಷ್ಟೀಕರಣ ಅಗತ್ಯವಿರುವುದರಿಂದ ತೀರ್ಪು ಪ್ರಕಟಿಸಲು ಸಾಧ್ಯವಿಲ್ಲ ಎಂದು ಈಚೆಗೆ ತೀರ್ಪನ್ನು ಮುಂದೂಡಿದ್ದರು.
ಏನಿದು ಪ್ರಕರಣ ?
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲೆ ತಮ್ಮ ತೋಟದ ಮನೆಯಲ್ಲಿ 47 ವರ್ಷದ ಮನೆಕೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪವಿತ್ತು. ಈ ಸಂಬಂಧ ಸಂತ್ರಸ್ತೆ ೨೦೨೪ರ ಏಪ್ರಿಲ್ 28, 2024ರಂದು ಹಾಸನದ ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮನೆ ಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜುಲೈ 24ರಂದು ಎರಡನೇ ಬಾರಿಯೂ ಜಾಮೀನು ಅರ್ಜಿ ವಜಾಗೊಳಿಸಿ ಆದೇಶಿಸಿತ್ತು. ಆರೋಪಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ ಜಾಮೀನು ಅರ್ಜಿ ಕುರಿತು ವಾದ - ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ. ಸಂತೋಷ್ ಗಜಾನನ ಭಟ್ ಜುಲೈ24 ರಂದು ಆದೇಶ ಪ್ರಕಟಿಸಿದ್ದರು.
ಇದಕ್ಕೂ ಮೊದಲು ಪ್ರಕರಣದ ಎ1 ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜನಪ್ರತಿನಿಧಿಗಳ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಎಲ್ಲೆಡೆ ಅರ್ಜಿ ವಜಾಗೊಂಡಿತ್ತು. ನಂತರ ಜೂನ್‌ನಲ್ಲಿ ಜಾಮೀನು ಕೋರಿ ಹೈಕೋರ್ಟ್‌ಗೆ ಎರಡನೇ ಬಾರಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿತ್ತು.
ಹೈಕೋರ್ಟ್ ಸಲಹೆ ಮೇರೆಗೆ ಎರಡನೇ ಬಾರಿ ವಿಚಾರಣಾ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಎರಡನೇ ಬಾರಿಯೂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತ್ತು. ಇದೀಗ ಕೋರ್ಟ್ ತೀರ್ಪು ಪ್ರಕಟಿಸಿದೆ.
ಪ್ರಜ್ವಲ್ ಕರ್ಮಕಾಂಡ ಬಯಲು
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಹಾಗೂ ಲೈಂಗಿಕ ಕಿರುಕುಳ ನೀಡಿ ಚಿತ್ರೀಕರಣ ನಡೆಸಿರುವ ಆರೋಪದ ಬಗ್ಗೆ ಸಿಐಡಿ ವಿಶೇಷ ತನಿಖಾ ತಂಡ (ಎಸ್ಐಟಿ) ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಪ್ರಜ್ವಲ್ ಜತೆಗೆ ಆತನ ತಂದೆ, ಹಾಲಿ ಶಾಸಕ ಎಚ್.ಡಿ. ರೇವಣ್ಣ ಕೂಡ ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿರುವುದನ್ನು ದೋಷಾರೋಪ ಪಟ್ಟಿಯಲ್ಲಿ ಸಿಐಡಿ ಉಲ್ಲೇಖಿಸಿತ್ತು.
ಸಿಐಡಿ ಎಸ್ಐಟಿ ತನಿಖಾಧಿಕಾರಿ ಬಿ.ಸುಮಾರಾಣಿ ಅವರು ಪ್ರಕರಣ ಸಂಬಂಧ ಅಪ್ಪ-ಮಗನ ಮೇಲಿರುವ ಆರೋಪದ ಮೇಲೆ ತನಿಖೆ ನಡೆಸಿ ಒಟ್ಟು 2,144 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದರು. 123 ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು.
'ಪ್ರಜ್ವಲ್ ಲೈಂಗಿಕ ದೌರ್ಜನ್ಯ ಎಸಗಿ, ಸಂತ್ರಸ್ತೆಯ ವಿಡಿಯೋ ಚಿತ್ರೀಕರಣ ಮಾಡಿದ್ದಲ್ಲದೆ ಅದನ್ನು ಸಾಮಾಜಿಕ ಜಾಲತಾಣ ಹಾಗೂ ದೃಶ್ಯ ಮಾಧ್ಯಮದಲ್ಲಿ ಹರಿದಾಡಲು ಕಾರಣಕರ್ತನಾಗಿದ್ದ ಎಂದೂ ಉಲ್ಲೇಖಿಸಲಾಗಿತ್ತು.
ಬಸವನಗುಡಿ ಮನೆಯಲ್ಲೂ ಲೈಂಗಿಕ ದೌರ್ಜನ್ಯ
'ಬೆಂಗಳೂರಿನ ಬಸವನಗುಡಿ ಮನೆಯ ಸ್ವಚ್ಛತೆಗಾಗಿ ಭವಾನಿ ರೇವಣ್ಣ ಅವರು ಅದೇ ಸಂತ್ರಸ್ತೆಯನ್ನು ಒಮ್ಮೆ ಕರೆ ತಂದಿದ್ದರು. ಭವಾನಿ ಅವರು ಖರೀದಿಗೆಂದು ಹೊರ ಹೋದಾಗ ಪ್ರಜ್ವಲ್ ಏಕಾಏಕಿ ಮೊಬೈಲ್ ಹಿಡಿದು ಕೊಠಡಿಯ ಒಳ ಪ್ರವೇಶಿಸಿದ್ದರು. ಬಿಟ್ಟುಬಿಡಿ ಎಂದು ಗೋಗೆರೆದರೂ ಆಕೆಯ ಸೀರೆ ಹರಿದು ಅತ್ಯಾಚಾರ ಎಸಗಿ ಅದನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದ. ವಿಷಯ ಬಹಿರಂಗಪಡಿಸಿದರೆ ನಿನ್ನ ಪತಿಯನ್ನು ಜೈಲು ಪಾಲು ಮಾಡುತ್ತೇನೆ. ನಿನ್ನ ಪುತ್ರಿಗೂ ಇದೇ ಗತಿ ಮಾಡುತ್ತೇನೆ. ಏನೇ ಕೆಲಸ ಮಾಡಿದರೂ ಪ್ರಕರಣ ಮುಚ್ಚಿ ಹಾಕಲು ನನಗೆ ಗೊತ್ತಿದೆ. ನಾನು ಸಂಸದನಾಗಿದ್ದು, ಯಾರೂ ಏನೂ ಮಾಡಲು ಆಗುವುದಿಲ್ಲ. ಬಾಯಿ ಬಿಟ್ಟರೆ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಅಲ್ಲದೆ ಸಂತ್ರಸ್ತೆಯ ಪುತ್ರಿಗೂ ವಾಟ್ಸಾಪ್ ವಿಡಿಯೋ ಕರೆ ಮಾಡಿ ಬಟ್ಟೆ ಬಿಚ್ಚುವಂತೆ ಹೇಳಿ ಸ್ಕ್ರೀನ್ ಶಾಟ್ ತೆಗೆದುಕೊಂಡು ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ. ಲ್ಲೇಖಿಸಲಾಗಿದೆ ಎನ್ನಲಾಗಿದೆ.
ವಿದೇಶಕ್ಕೆ ಪರಾರಿಯಾಗಿದ್ದ ಪ್ರಜ್ವಲ್
ಪೊಲೀಸ್ ಪ್ರಕರಣ ದಾಖಲಾದ ಬಳಿಕ ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪಲಾಯನ ಮಾಡಿದ್ದ. ಅಲ್ಲದೇ ಮೊಬೈಲ್ ಚಿತ್ರೀಕರಣದ ಸಾಕ್ಷ್ಯ ನಾಶ ಮಾಡುವ ಕಾರಣಕ್ಕೆ ಆ ಮೊಬೈಲ್ ನಾಶ ಮಾಡಿದ್ದ ಎಂಬುದು ತನಿಖೆ ವೇಳೆ ಸಾಬೀತಾಗಿತ್ತು.
ಎಚ್.ಡಿ.ರೇವಣ್ಣ ಕೂಡ ಸಂತ್ರಸ್ತ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಕೈಹಿಡಿದು ಎಳೆದು, ಅವರ ಮೈ-ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿರುವುದು ಸಾಬೀತಾಗಿತ್ತು. ಹೊಳೆನರಸೀಪುರದಲ್ಲಿ ರೇವಣ್ಣ ಅವರಿಗೆ ಸೇರಿದ ಮನೆಯಿದ್ದು, ಅವರ ಪತ್ನಿ ಭವಾನಿ ರೇವಣ್ಣ ಅವರ ಅನುಮತಿ ಮೇರೆಗೆ ಹಾಸ್ಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ಭವಾನಿ ಅವರು ಮನೆಯಲ್ಲಿ ಇಲ್ಲದಿರುವಾಗ ಸಂತ್ರಸ್ತೆಯನ್ನು ಕೊಠಡಿಗೆ ಬಾ, ಏಕೆ ಕೆಳಗೆ ಹೋಗುತ್ತೀಯಾ, ನಾನೇನು ಮಾಡಲ್ಲ' ಎಂದು ಆಗಾಗ್ಗೆ ಕರೆಯುತ್ತಿದ್ದರು. ಅವರ ಮನೆಯ ಮೊದಲ ಮಹಡಿಯಲ್ಲಿದ್ದ ವಸ್ತುಗಳನ್ನು ಇಡುವ ಕೊಠಡಿಗೆ ಎಲ್ಲ ಕಾರ್ಮಿಕರನ್ನು ಕರೆಸಿಕೊಂಡು ಎಲ್ಲರಿಗೂ ಹಣ್ಣು ವಿತರಣೆ ಮಾಡುತ್ತಿದ್ದರು. ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಕೊನೆಯಲ್ಲಿ ಹಣ್ಣು ಕೊಡಲು ಕೊಠಡಿಯಲ್ಲೇ ಇರಿಸಿಕೊಳ್ಳುತ್ತಿದ್ದರು. ಇತರೆ ಕೆಲಸಗಾರರು ಹಣ್ಣು ಪಡೆದು ತೆರಳಿದ ನಂತರ ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿದ್ದರು' ಎಂದು ದೋಷಾರೋಪ ಪಟ್ಟಿಯಲ್ಲಿ ಸಿಐಡಿ ಉಲ್ಲೇಖಿಸಿತ್ತು.