ಜರ್ಮನಿಯಿಂದ ಬೆಂಗಳೂರಿಗೆ ವಿಮಾನ ಟಿಕೆಟ್‌ ಬುಕ್‌ ಮಾಡಲಿರುವ ಪ್ರಜ್ವಲ್‌ ರೇವಣ್ಣ?

ಪ್ರಜ್ವಲ್‌ ರೇವಣ್ಣ ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ವಿಮಾನ ಟಿಕೆಟ್ ಕಾಯ್ದಿರಿಸಿದ್ದು, ಶುಕ್ರವಾರ ಮುಂಜಾನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪುವ ಸಾಧ್ಯತೆಯಿದೆ.;

Update: 2024-05-29 07:37 GMT
ಸಂಸದ ಪ್ರಜ್ವಲ್‌ ರೇವಣ್ಣ
Click the Play button to listen to article

ಲೈಂಗಿಕ ದೌರ್ಜನ್ಯ ವಿಡಿಯೋ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಹಾಸನ ಸಂಸದ ಮತ್ತು ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ಗುರುವಾರ ( ಮೇ 30) ವಿಮಾನ ಟಿಕೆಟ್ ಕಾಯ್ದಿರಿಸಿದ್ದು, ಶುಕ್ರವಾರ ಮುಂಜಾನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪುವ ಸಾಧ್ಯತೆಯಿದೆ ಎನ್ನಲಾಗಿದೆ.

ಪ್ರಜ್ವಲ್‌ ರೇವಣ್ಣ ಈಗಾಗಲೇ ವಿಡಿಯೋ ಸಂದೇಶದ ಮೂಲಕ ಮೇ 31ರಂದು ಬೆಂಗಳೂರಿನಲ್ಲಿ ನಡೆಯುವ ಎಸ್‌ಐಟಿ ತನಿಖೆಗೆ ಹಾಜರಾಗುವುದಾಗಿ ತಿಳಿಸಿದ್ದು, ಅವರು ಬೆಂಗಳೂರಿಗೆ ಬಂದಿಳಿದ ಕೂಡಲೇ ಅವರನ್ನು ಬಂಧಿಸಲು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎಸ್‌ಐಟಿ ನಿಗಾ ಇರಿಸಿದೆ. ಈ ಹಿನ್ನಲೆಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಪೊಲೀಸ್‌ ಸಿಬ್ಬಂಧಿಗಳನ್ನು ಹೆಚ್ಚಿಸಲಾಗಿದೆ ಎಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ.

ಎರಡು ಬಾರಿ ಟಿಕೆಟ್ ರದ್ದು

ಲೈಂಗಿಕ ಕಿರುಕುಳ ಹಗರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್‌ ರೇವಣ್ಣ ಈ ಹಿಂದೆ ಎರಡು ಬಾರಿ ತಮ್ಮ ವಿಮಾನ ಟಿಕೆಟ್‌ ಅನ್ನು ರದ್ದುಗೊಳಿಸಿದ್ದಾರೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಮನೆಯಲ್ಲಿ ಹುಡುಕಾಟ

ಪ್ರಜ್ವಲ್‌ ರೇವಣ್ಣ ಮೇ 31 ರಂದು ಎಸ್‌ಐಟಿ ಮುಂದೆ ಹಾಜರಾಗಿ ವಿಚಾರಣೆಗೆ ಸಹಕರಿಸುವುದಾಗಿ ವಿಡಿಯೋ ಸಂದೇಶವೊಂದನ್ನು ರವಾನಿಸಿದ್ದು, ಹಾಸನ ನಗರದ ಆ‌ರ್.ಸಿ.ರಸ್ತೆಯಲ್ಲಿರುವ ಪ್ರಜ್ವಲ್ ನಿವಾಸದಲ್ಲಿ ಮಂಗಳವಾರ ಮಧ್ಯಾಹ್ನ ಎಸ್ ಐಟಿ ಹಾಗೂ ಎಫ್ ಎಸ್ ಎಲ್ ತಂಡ ಪರಿಶೀಲನೆ ಆರಂಭಿಸಿದೆ. ಸತತ ಹತ್ತು ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದು, ಬುಧವಾರ ಮುಂಜಾವ 4 ಗಂಟೆಗೆ ಸಾಕ್ಷ್ಯ ಸಂಗ್ರಹ ಪರಿಶೀಲನೆ ಮುಕ್ತಾಯಗೊಂಡಿತ್ತು. ಈ ವೇಳೆ ಅವರ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ ಮತ್ತಿತರ ವಸ್ತುಗಳನ್ನು ಎಸ್‌ಐಟಿ ವಶಕ್ಕೆ ಪಡೆದಿದೆ.

ಇಬ್ಬರ ಬಂಧನ

ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪೆನ್ ಡ್ರೈವ್ ಅನ್ನು ಹಂಚಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚೇತನ್ ಗೌಡ ಮತ್ತು ಮತ್ತು ನವೀನ್ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಸ್‌ಐಟಿ ಅಧಿಕಾರಿಗಳು ನವೀನ್ ಗೌಡನಿಗೆ ನೋಟಿಸ್ ಜಾರಿ ಮಾಡಿ, ಮಂಗಳವಾರ ( ಮೇ 28) 11 ಗಂಟೆಗೆ ಎಸ್‌ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಆದರೆ ನವೀನ್ ಗೌಡ ಎಸ್‌ಐಟಿ ಅಧಿಕಾರಿಗಳ ಮುಂದೆ. ಹಾಜರಾಗದೇ ಇದ್ದುದ್ದರಿಂದ ಅವರನ್ನು ವಶಕ್ಕೆ ಪಡೆದಿದ್ದಾರೆ. ಸಚಿವ ಜಮೀ‌ರ್ ಅಹಮ್ಮದ್ ಖಆನ್ ಅವರ ಆಪ್ತನಾಗಿರುವ ನವೀನ್ ಗೌಡ ಏಪ್ರಿಲ್ 8ರಂದು ಪ್ರಜ್ವಲ್ ಅವರ ಹಗರಣದ ವಿಡಿಯೋಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಅಪ್ ಲೋಡ್ ಮಾಡಿದ್ದರು. ಪ್ರಜ್ವಲ್ ಅವರ ಅಶ್ಲೀಲ ವಿಡಿಯೋ ಬಿಡುಗಡೆಗೆ ಕ್ಷಣಗಣನೆ- 8PM ಎಂಬ ಶೀರ್ಷಿಕೆಯಲ್ಲಿ ವಿಚಾರವನ್ನು ಪೋಸ್ಟ್ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರು ಪೊಲೀಸರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಹಾಸನ ಪೊಲೀಸ್ ಠಾಣೆಯಲ್ಲಿ ನವೀನ್ ಗೌಡ ವಿರುದ್ಧ ಐಟಿ ಕಾಯಿದೆ ಸೆಕ್ಷನ್ 67 ಮತ್ತು ಐಪಿಸಿ ಸೆಕ್ಷನ್ 171 ಜಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಹಾಲಿ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಏಪ್ರಿಲ್ 27 ರಂದು ದೇಶವನ್ನು ತೊರೆದಿದ್ದರು. ಬಳಿಕ ಅವರ ಅಶ್ಲೀಲ ವಿಡಿಯೋಗಳ ಪ್ರಕರಣ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಹಲವು ಬಾರಿ ವಿಚಾರಣೆಗೆ ಹಾಜರಾಗಲು ಸಮನ್ಸ್‌ಗಳನ್ನು ನೀಡಿದೆಯಾದರೂ, ಪ್ರಜ್ವಲ್ ರೇವಣ್ಣ ವಿಚಾರಣೆಯಿಂದ ಸತತವಾಗಿ ತಪ್ಪಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವಾಲಯ ಪ್ರಜ್ವಲ್ ಅವರಿಗೆ ಶೋಕಾಸ್ ನೋಟಿಸ್‌ ಅನ್ನು ಜಾರಿಗೊಳಿಸಿದ ಬೆನ್ನಲ್ಲೆ ಅವರು ಈ ವಿಡಿಯೋ ಸಂದೇಶವನ್ನು ರವಾನೆ ಮಾಡಿದ್ದರು. ಹಾಗೆಯೇ ಅವರು ಹೊಂದಿರುವ ರಾಜತಾಂತ್ರಿಕ ಪಾಸ್ ಪೋರ್ಟ್ ಇದೇ ಮೇ 31 ರಂದು ಅಂತ್ಯಗೊಳ್ಳಲಿದೆ.

Tags:    

Similar News