ಪ್ರಜ್ವಲ್ ರೇವಣ್ಣ ಪ್ರಕರಣ | ಆರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕಾರ

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪಿಗಳಾದ ಆರು ಜನರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.;

Update: 2024-06-12 08:53 GMT
ಪ್ರಜ್ವಲ್‌ ರೇವಣ್ಣ

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪಿಗಳಾದ ಆರು ಜನರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯ ಅಪಹರಣಕ್ಕೆ ಸಂಚು ರೂಪಿಸಿದ ಆರೋಪಿಗಳಾದ ಸತೀಶ್ ಬಾಬಣ್ಣ, ಎಚ್ ಕೆ ಸುಜಯ್, ಎಚ್ ಎನ್ ಮಧು, ಎಚ್ ಡಿ ಮನುಗೌಡ, ಎಸ್ ಟಿ ಕೀರ್ತಿ ಮತ್ತು ಕೆ ಎ ರಾಜಗೋಪಾಲ್ ಅವರ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

ಏಪ್ರಿಲ್ 26 ರ ಲೋಕಸಭಾ ಚುನಾವಣೆಗೆ ಮುನ್ನ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿದ್ದ ಅಶ್ಲೀಲ್‌ ವಿಡಿಯೋಗಳು ಬಹಳಷ್ಟು ವೈರಲ್‌ ಆಗಿದ್ದವು. ಈ ವೇಳೆ ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಾಯಿ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು. ವೈರಲ್ ಆಗಿರುವ ಪ್ರಜ್ವಲ್ ರೇವಣ್ಣರ ಅಶ್ಲೀಲ ವಿಡಿಯೋದಲ್ಲಿ ನನ್ನ ತಾಯಿ ಫೋಟೋ ಸಹ ಇದೆ. ಇದಾದ ಬಳಿಕ ಅವರು ಕಣ್ಮರೆಯಾಗಿದ್ದಾರೆ ಎಂದು ಮೈಸೂರಿನ ಕೆ ಆರ್ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸಿ ಮಹಿಳೆಯನ್ನು ಪತ್ತೆ ಹಚ್ಚಿದ್ದರು. ಕೆಲವು ವರ್ಷಗಳ ಹಿಂದೆ ರೇವಣ್ಣನವರ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದ ಮಹಿಳೆ ಹೇಳಿಕೆ ಆಧಾರದ ಮೇಲೆ ಎಸ್‌ಐಟಿ, ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿತ್ತು.

ಭವಾನಿ ರೇವಣ್ಣ ಅವರು ಬಂಧಿತ ಸತೀಶ್ ಬಾಬಣ್ಣ (ಅವರ ಸೋದರಳಿಯ) ಮತ್ತು ಇನ್ನೊಬ್ಬ ಆರೋಪಿ ರಾಜಗೋಪಾಲ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಮತ್ತು ಸಂತ್ರಸ್ತೆ ಅಪಹರಣದ ನಂತರ ಸಂತ್ರಸ್ತೆಯನ್ನು ತಮ್ಮ ಮನೆಯಲ್ಲಿ ಬಂಧಿಸಿಟ್ಟಿದ್ದಾರೆ ಎಂಬುದಕ್ಕೆ ಪುರಾವೆಗಳಿವೆ ಎಂದು ಎಸ್‌ಐಟಿ ನ್ಯಾಯಾಲಯದಲ್ಲಿ ವಾದಿಸಿತ್ತು.

ಏಪ್ರಿಲ್ 26 ರಂದು ಹಾಸನದಲ್ಲಿ ನಡೆದ ಲೋಕಸಭಾ ಚುನಾವಣೆಯ ಸುಮಾರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ ಕಾಣಿಸಿಕೊಂಡಿದ್ದವು. ಈ ಪ್ರಕರಣ ಬೆಳಕಿಗೆ ಬಂದ ಕೂಡಲೇ ಪ್ರಜ್ವಲ್‌ ರೇವಣ್ಣ ದೇಶ ತೊರೆದು ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು. ಪ್ರಜ್ವಲ್ ರೇವಣ್ಣ ಮೇ 31 ರಂದು ಭಾರತಕ್ಕೆ ಮರಳಿದ್ದು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್‌ಐಟಿ ಅವರನ್ನು ಬಂಧಿಸಲಾಗಿತ್ತು.

Tags:    

Similar News