ಹಾಸನದಲ್ಲಿ ಹತ್ಯೆ | ಎಸ್‌ಪಿ ಕಚೇರಿ ಆವರಣದಲ್ಲೇ ಪತ್ನಿ ಕೊಲೆಗೈದ ಪೊಲೀಸ್‌ ಪೇದೆ

Update: 2024-07-01 13:41 GMT

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ (ಎಸ್‌ಪಿ)ಗೆ ದೂರು ನೀಡಲು ಬಂದ ಪತ್ನಿಯನ್ನು ಪೊಲೀಸ್​ ಪೇದೆ ಎಸ್‌ಪಿ ಕಚೇರಿಯ ಆವರಣದಲ್ಲಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹಾಸನ ಎಸ್‌ಪಿ ಕಚೇರಿ ಆವರಣದಲ್ಲಿ ನಡೆದಿದೆ.

ಪೊಲೀಸ್​ ಪೇದೆ ​ಲೋಕನಾಥ್​ ಕೊಲೆಗೈದ ಆರೋಪಿ. ಮಮತಾ ಮೃತ ದುರ್ದೈವಿ. ಆರೋಪಿ ಲೋಕನಾಥ್‌ನನ್ನು ಬಂಧಿಸಲಾಗಿದೆ. ಹಾಸನ ನಗರ ಠಾಣೆಯ ಪೊಲೀಸ್​ ಪೇದೆ ಲೋಕನಾಥ್ ಮತ್ತು ಮಮತಾ ದಂಪತಿ 17 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಲೋಕನಾಥ್ ಮತ್ತು ಮಮತಾ ದಂಪತಿ ಕಳೆದ ನಾಲ್ಕೈದು ದಿನಗಳಿಂದ ನಿತ್ಯವೂ ಜಗಳವಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪತಿ ಲೋಕನಾಥ್ ವಿರುದ್ಧ ದೂರು ನೀಡಲು ಪತ್ನಿ ಮಮತಾ ಎಸ್‌ಪಿ ಕಚೇರಿಗೆ ಬಂದಿದ್ದರು.

ಈ ವೇಳೆ ಪೊಲೀಸ್​ ಪೇದೆ ಮಮತಾಳ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ, ಸ್ಥಳದಲ್ಲಿದ್ದ ಪೊಲೀಸರು ಆತನನ್ನು ತಡೆದು, ಬಂಧಿಸಿದ್ದಾರೆ. ಘಟನೆ ನಡೆದ ತಕ್ಷಣವೇ ಮಮತಾ ಅವರನ್ನು ಪೊಲೀಸರು ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಮತಾ ಮೃತಪಟ್ಟಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಮೃತ ಮಮತಾ ತಂದೆ ಶಾಮಣ್ಣ, ʻʻಮದುವೆಯಾದ ಆರಂಭದ ದಿನದಿಂದಲೂ ಲೋಕನಾಥ್​​ ನನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದನು. ಆಸ್ತಿ, ಸೈಟ್ ಹಾಗೂ ಹಣಕ್ಕಾಗಿ ಪೀಡಿಸುತ್ತಿದ್ದನು. ಈ ಹಿಂದೆ ಕೂಡ ಆರೋಪಿ ಲೋಕನಾಥ್ ದೈಹಿಕವಾಗಿ ಹಲ್ಲೆಗೈದಿದ್ದಾನೆ. ಸಾಕಷ್ಟು ಕಿರುಕುಳ ಕೊಟ್ಟರೂ ನನ್ನ ಮಗಳು ಸಹಿಸಿಕೊಂಡು ಸುಮ್ಮನಿದ್ದಳು. ಪೊಲೀಸರಿಗೆ ದೂರು ಕೊಡು ಎಂದು ನಾವು ಹೇಳಿದರೂ ಮಮತಾ ಸುಮ್ಮನಾಗಿದ್ದಳು. ಈಗ ನನ್ನ ಮಗಳು ಮಮತಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಆರೋಪಿ ಲೋಕನಾಥ್‌ನ​ ಪೋಷಕರು ಕೂಡ ಕಿರುಕುಳ ನೀಡಿದ್ದಾರೆ. ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕುʼʼ ಎಂದು ಆಗ್ರಹಿಸಿದ್ದಾರೆ.

ಇನ್ನು ಈ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹಾಸನ ಎಸ್​​​ಪಿ ಸುಜಿತಾ ಮೊಹಮ್ಮದ್‌, ʻʻಕೌಟುಂಬಿಕ ಸಮಸ್ಯೆಯಿಂದ ಹತ್ಯೆಯಾಗಿದೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಇಂದು (ಜು.01) ಬೆಳಗ್ಗೆ ಇಬ್ಬರ ನಡುವೆ ಗಲಾಟೆಯಾಗಿದೆ. ಬಳಿಕ ಪೊಲೀಸರಿಗೆ ದೂರು ಕೊಡುವುದಾಗಿ ಹೇಳಿ ಪತ್ನಿ ಬಂದಿದ್ದರು. ಈ ವೇಳೆ ಪೊಲೀಸ್​ ಪೇದೆ ಲೋಕನಾಥ್​ ಕೂಡ ಬಂದಿದ್ದು, ಇಬ್ಬರು ಕಚೇರಿ ಹೊರಗೆ ನಿಂತು ಮಾತನಾಡಿದ್ದಾರೆ. ಈ ವೇಳೆ ಲೋಕನಾಥ್​​ ಚಾಕುವಿನಿಂದ ದಾಳಿ ಮಾಡಿದಾಗ ಮಮತಾ ರಕ್ಷಣೆಗಾಗಿ ಎಸ್‌ಪಿ ಕಚೇರಿಯತ್ತ ಓಡಿ ಬಂದಿದ್ದಾರೆ. ನಮ್ಮ ಕಚೇರಿ ಆವರಣದ ಒಳಗೆ ಓಡಿ ಬಂದ ವೇಳೆ, ಸ್ಥಳದಲ್ಲಿ ಇದ್ದ ನಮ್ಮ ಪೊಲೀಸರು ಮಮತಾರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದರುʼʼ ಎಂದು ಹೇಳಿದ್ದಾರೆ.

Tags:    

Similar News