ವಿಷಯುಕ್ತ ಸ್ವೀಟ್ ಬಾಕ್ಸ್ ಪ್ರಕರಣ | ಆರೋಪಿ ಬಂಧನ; ವಿಚಾರಣೆ ವೇಳೆ ಹೊರಬಿತ್ತು ಅಸಲೀ ಕಾರಣ
ಶಿವಮೊಗ್ಗದ ವಿಧಾನಪರಿಷತ್ ಸದಸ್ಯ ಡಾ ಧನಂಜಯ ಸರ್ಜಿ ಅವರ ಹೆಸರಿನಲ್ಲಿ ನಗರದ ಕಾಲೇಜೊಂದರ ಮುಖ್ಯಸ್ಥರು ಮತ್ತು ಮಾನಸಿಕ ಆಸ್ಪತ್ರೆಯ ವೈದ್ಯರಿಬ್ಬರಿಗೆ ವಿಷಯುಕ್ತ ಸಿಹಿ ಕಳಿಸಿದ್ದ ಆರೋಪಿ ಸೌಹಾರ್ದ ಪಟೇಲ್‌ನಲ್ಲಿ ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ;
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೆಸರು ದುರ್ಬಳಕೆ ಮಾಡಿಕೊಂಡು ಮೂವರು ಗಣ್ಯರಿಗೆ ಹೊಸ ವರ್ಷದ ದಿನ ವಿಷ ಬೆರೆಸಿರುವ ಸಿಹಿ ತಿಂಡಿಯನ್ನು ಕೋರಿಯರ್ ಮೂಲಕ ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಕೋಟೆ ಠಾಣೆ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಸೌಹಾರ್ದ ಪಟೇಲ್ ಬಂಧಿತ ಆರೋಪಿ.
ಭದ್ರಾವತಿ ನಿವಾಸಿಯಾಗಿರುವ ಆರೋಪಿ ಸೌಹಾರ್ದ ಪಟೇಲ್ ಧನಂಜಯ್ ಸರ್ಜಿ ಹೆಸರಿನಲ್ಲಿ ಶಿವಮೊಗ್ಗ ನಗರ ನಿವಾಸಿಗಳಾದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್, ವೈದ್ಯರಾದ ಅರವಿಂದ್ ಮತ್ತು ಕೆ ಎಸ್ ಪವಿತ್ರಾ ಅವರಿಗೆ ವಿಷಪೂರಿತ ಸ್ವೀಟ್ ಬಾಕ್ಸ್ ಕಳುಹಿಸಿದ್ದನು. ಮಾನಸಿಕ ರೋಗಿಯಾಗಿರುವ ಸೌಹಾರ್ದ ಪಟೇಲ್ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಸೌಹಾರ್ದ ಪಟೇಲ್ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಸೌಹಾರ್ದ ಪಟೇಲ್ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ ಪದವಿ ಪಡೆದಿದ್ದಾನೆ. ಸೌಹಾರ್ದ ಪಟೇಲ್ ಎಲ್ಎಲ್ಬಿ ಓದುವಾಗ ತನ್ನದೇ ಕಾಲೇಜಿನ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಚಾರ ತಿಳಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಯುವತಿಯನ್ನು ಸೌಹಾರ್ದ ಪಟೇಲ್ನಿಂದ ದೂರ ಮಾಡಿದ್ದರು. ಇದರಿಂದ ಸೌಹಾರ್ದ ಪಟೇಲ್ ಡಿಪ್ರೆಶನ್ಗೆ ಹೋಗಿದ್ದನು. ಹೀಗಾಗಿ, ಆತ ಮಾನಸಿಕ ರೋಗ ತಜ್ಞರಾದ ಅರವಿಂದ್ ಮತ್ತು ಕೆಎಸ್ ಪವಿತ್ರಾ ಬಳಿ ಚಿಕಿತ್ಸೆ ಪಡೆಯುತ್ತಿದ್ದ. ಮಾನಸಿಕ ರೋಗಿಯಾಗಿದ್ದ ಹಿನ್ನೆಲೆ ಸೌಹಾರ್ದ ಪಟೇಲ್ನನ್ನು ತೊರೆದು ಆತನ ತಂದೆ-ತಾಯಿ ಬೇರೆಡೆ ವಾಸಿಸುತ್ತಿದ್ದರು.
ಮಾತ್ರೆಗಳ ಮೇಲೆ ಮಾತ್ರೆಗಳನ್ನು ಕೊಟ್ಟು ತನ್ನನ್ನು ರೋಗಿಯನ್ನಾಗಿಸಿದ ವೈದ್ಯರ ಮೇಲೆ ಸೌಹಾರ್ದ ಪಟೇಲ್ ಸಿಟ್ಟಾಗಿದ್ದ. ಇದೇ ಸಿಟ್ಟಿನಲ್ಲಿ ಮಾತ್ರೆಗಳನ್ನು ಪುಡಿಮಾಡಿ ಸ್ವೀಟ್ನಲ್ಲಿ ಮಿಶ್ರಣ ಮಾಡಿ ಎಂಎಲ್ಸಿ ಧನಂಜಯ ಸರ್ಜಿ ಹೆಸರಿನಲ್ಲಿ ಆ ವೈದ್ಯರಿಗೆ ಮತ್ತು ಕಾಲೇಜಿನ ಕಾರ್ಯದರ್ಶಿಗೆ ಕೋರಿಯರ್ ಮೂಲಕ ಕಳುಹಿಸಿದ್ದನು ಎಂಬ ಕುತೂಹಲಕಾರಿ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.
ಏನಿದು ಘಟನೆ?
ಹೊಸವರ್ಷಕ್ಕೆ ಶುಭಾಶಯ ಕೋರುವ ನೆಪದಲ್ಲಿ ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೆಸರಿನಲ್ಲಿ ನಗರದ ಮೂವರು ಗಣ್ಯ ವ್ಯಕ್ತಿಗಳಿಗೆ ವಿಷಪೂರಿತ ಸ್ವೀಟ್ ಬಾಕ್ಸ್ಗಳನ್ನು ಕೋರಿಯರ್ ಮೂಲಕ ಕಳುಹಿಸಲಾಗಿತ್ತು.
ಎಂಎಲ್ಸಿ ಧನಂಜಯ ಸರ್ಜಿ ಅವರ ಲೇಟರ್ಹೆಡ್ ಜೊತೆ ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಸಂಸ್ಥೆ ಕಾರ್ಯದರ್ಶಿ ನಾಗರಾಜ್ ಅವರಿಗೆ ಡಿಟಿಡಿಸಿ ಕೊರಿಯರ್ ಮೂಲಕ ಹೊಸ ವರ್ಷದ ದಿನ ಸ್ವೀಟ್ ಬಾಕ್ಸ್ ಬಂದಿತ್ತು. ನಾಗರಾಜ್ ಅವರು ಸ್ವೀಟ್ ಬಾಕ್ಸ್ ತೆರದು ನೋಡಿದಾಗ ಅದರಲ್ಲಿ ಮೋತಿಚೂರ್ ಲಾಡು ಇತ್ತು. ಅವರು ಅದನ್ನು ತಿಂದಾಗ ಸ್ವಲ್ಪ ಕಹಿಯಾಗಿರುವುದು ತಿಳಿದು ಬಂದಿದೆ.
ಇದರಿಂದ ನಾಗರಾಜ್ ಅವರು ಧನಂಜಯ ಸರ್ಜಿ ಅವರಿಗೆ ನೇರವಾಗಿ ಫೋನ್ ಮಾಡಿ ಹೊಸ ವರ್ಷದ ಶುಭಾಶಯ ಕೋರಿ ಸ್ವೀಟ್ ಬಾಕ್ಸ್ ಕಳುಹಿಸಿದ್ದಕ್ಕೆ ಧನ್ಯವಾದ ತಿಳಿಸಿ, ನೀವು ಕಳುಹಿಸಿರುವ ಸ್ವೀಟ್ಸ್ ಸ್ವಲ್ಪ ಕಹಿಯಾಗಿರುವುದಾಗಿ ಹೇಳಿದ್ದಾರೆ. ಇದಕ್ಕೆ ಸರ್ಜಿ ಅವರು, ನಾನು ಯಾವುದೇ ಸ್ವೀಟ್ ಬಾಕ್ಸ್ ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಂತರ ಇದೇ ರೀತಿ ತಮ್ಮ ಹೆಸರಿನಲ್ಲಿ ಇನ್ನಿಬ್ಬರಿಗೆ ಸ್ವೀಟ್ಬಾಕ್ಸ್ಗಳು ತಲುಪಿರುವ ಬಗ್ಗೆ ತಿಳಿದ ಧನಂಜಯ ಸರ್ಜಿ ಅವರು, ಈ ಸಂಬಂಧ ತಮ್ಮ ಆಪ್ತ ಸಹಾಯಕನ ಮೂಲಕ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.