ವಿಷ ಹಾಕಿದ ಘಟನೆ | ಮದುಮಲೈನಲ್ಲಿ ತಾಯಿ- ಮರಿ ಹುಲಿ ಸಾವು

ಹುಲಿ ಬೇಟೆಯಾಡಿದ ಪ್ರಾಣಿಯ ಕಳೇಬರಕ್ಕೆ ವಿಷ ಹಾಕಿ ತಾಯಿ ಹುಲಿ ಮತ್ತು ಹುಲಿ ಮರಿಯನ್ನು ಕೊಂದಿರುವ ಘಟನೆ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.

Update: 2024-08-21 12:43 GMT

ಹುಲಿ ಬೇಟೆಯಾಡಿದ ಪ್ರಾಣಿಯ ಕಳೇಬರಕ್ಕೆ ವಿಷ ಹಾಕಿ ತಾಯಿ ಹುಲಿ ಮತ್ತು ಹುಲಿ ಮರಿಯನ್ನು ಕೊಂದಿರುವ ಘಟನೆ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.

ಆಗಸ್ಟ್ 20ರಂದು ಮದುಮಲೈ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯ ಗುಡಲೂರು ಸಸೆಕ್ಸ್ ಟೀ ಎಸ್ಟೇಟ್ನ ಒಳಗೆ 75 ಮೀಟರ್ ಅಂತರದಲ್ಲಿ ಹುಲಿ ಮತ್ತು ಹುಲಿ ಮರಿಯ ಮೃತ ದೇಹಗಳು ಪತ್ತೆಯಾಗಿವೆ ಎಂದು ವನ್ಯಜೀವಿ ಸಂರಕ್ಷಕ ಹಾಗೂ ಹಿರಿಯ ಪತ್ರಕರ್ತ ಜೋಸೆಫ್ ಹೂವರ್ ಹೇಳಿದ್ದಾರೆ.

ಈ ದಾರುಣ ಘಟನೆಯ ಕುರಿತು ತಮ್ಮ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಮುದುಮಲೈ ಹುಲಿ ಸಂರಕ್ಷಿತ ಪ್ರದೇಶ ಮತ್ತು ಅದರ ಬಫರ್‌ ಝೋನ್‌ನಲ್ಲಿ ಹುಲಿಗಳಿಗೆ ಆಗಾಗ್ಗೆ ವಿಷ ಹಾಕಿ ಸಾಯಿಸಲಾಗುತ್ತಿದೆ. ಇದೀಗ, ಆಗಸ್ಟ್ 20 ರಂದು ಗುಡಲೂರಿನ ಸಸೆಕ್ಸ್ ಟೀ ಎಸ್ಟೇಟ್‌ನಲ್ಲಿ ಕೇವಲ 75 ಮೀಟರ್ ಅಂತರದಲ್ಲಿ ಹುಲಿ ಮತ್ತು ಅರೆ ವಯಸ್ಕ ಹುಲಿಮರಿಗಳ ಮೃತದೇಹ ಪತ್ತೆಯಾಗಿವೆ" ಎಂದಿದ್ದಾರೆ.

"ಹುಲಿ, ದೊಡ್ಡ ಕಾಡುಹಂದಿಯನ್ನು ಕೊಂದು ಭಾಗಶಃ ತಿಂದಿತ್ತು. ಹುಲಿ ತಿಂದು ಉಳಿಸಿದ ಹಂದಿಯ ದೇಹದ ಭಾಗಗಳಿಗೆ ಕೆಲ ಕಿಡಿಗೇಡಿಗಳು ವಿಷ ಬೆರೆಸಿದ್ದರು. ವಿಷಪೂರಿತ ಹಂದಿಯ ದೇಹದ ಭಾಗಗಳನ್ನು ತನ್ನ ಮರಿಯೊಂದಿಗೆ ತಿಂದು ಹುಲಿ ಮತ್ತು ಅದರ ಮರಿ ಎರಡೂ ಸಾವನ್ನಪ್ಪಿವೆ" ಎಂದು ಮಾಹಿತಿ ನೀಡಿದ್ದಾರೆ.

"ಕಳೆದ ವರ್ಷ, 2023ರ ಸೆಪ್ಟೆಂಬರ್ ಎರಡನೇ ವಾರದಲ್ಲಿ ಮುದುಮಲೈಗೆ ಹೊಂದಿಕೊಂಡಿರುವ ಅವಲಾಂಚೆ ಅಣೆಕಟ್ಟಿನ ಬಳಿ ಎರಡು ಹುಲಿಗಳನ್ನು ವಿಷ ಹಾಕಿ ಸಾಯಿಸಲಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಆ ಘಟನೆ ಇನ್ನೂ ಹಸಿರಾಗಿರುವಾಗಲೇ ಇದೀಗ ಸೆಸೆಕ್ಸ್‌ ಎಸ್ಟೇಟಿನ ಒಳಗೇ ತಾಯಿ ಹುಲಿ ಮತ್ತು ಮರಿ ಹುಲಿಯನ್ನು ವಿಷವಿಕ್ಕಿ ಸಾಯಿಸಲಾಗಿದೆ" ಎಂದು ಹೂವರ್‌ ಹೇಳಿದ್ದಾರೆ.

ಅಲ್ಲದೆ, ಇತ್ತೀಚಿಗೆ ಎರಡು ಪ್ರತ್ಯೇಕ ಘಟನೆಗಳಲ್ಲಿ ಸೇಗೂರು ವ್ಯಾಪ್ತಿಯಲ್ಲಿ (ಮುದುಮಲೈ ಬಫರ್ ಝೋನ್) ತಾಯಿ ಹುಲಿ ಕಳ್ಳಬೇಟೆಗೆ ಬಲಿಯಾದ ಬಳಿಕ ಆರು‌ ಹುಲಿ ಮರಿಗಳು ಹಸಿವಿನಿಂದ ಸತ್ತಿದ್ದವು.


"ಮುದುಮಲೈನಲ್ಲಿ ಸರಣಿ ಹುಲಿ ಸಾವು ಘಟನೆಗಳು ಸಂಭವಿಸುತ್ತಿರುವುದು ಕ್ಷೇತ್ರ ನಿರ್ದೇಶಕ ವೆಂಕಟೇಶ್ ಅವರ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿಯಾಗಿದೆ" ಎಂದು ಆರೋಪಿಸಿರುವ ಅವರು, "ತಾಯಿ ಹುಲಿ ಮತ್ತು ಅದರ ಮರಿಯನ್ನು ಕೊಂದಿರುವ ದಾರುಣ ಘಟನೆ ಮದುಮಲೈ ವ್ಯಾಪ್ತಿಯಲ್ಲಿ ಹುಲಿಗಳ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ಮೂಡಿಸಿದೆ. ಜೊತೆಗೆ ಸ್ಪಷ್ಟವಾಗಿ, ನೀಲಗಿರಿ ಜೀವ ವಲಯದ ತಮ್ಮದೇ ಆವಾಸಸ್ಥಾನದಲ್ಲಿ ಹುಲಿಗಳು ಸುರಕ್ಷಿತವಾಗಿಲ್ಲ" ಎಂದಿದ್ಧಾರೆ.

ಈ ನಡುವೆ, "ದಕ್ಷಿಣ ವಲಯ ಎನ್‌ಟಿಸಿಎ(ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ) ಮಾಜಿ ಪ್ರತಿನಿಧಿ ಮುರಳಿ ಅವರು ಮುದುಮಲೈನಲ್ಲಿ ಪದೇಪದೆ ಹುಲಿ ಸಾವು ಸಂಭವಿಸಲು ಅವುಗಳ ಸಾಂಧ್ರತೆಯ ಹೆಚ್ಚಳವೇ ಕಾರಣ ಎನ್ನುವ ಮೂಲಕ, ತಮಿಳುನಾಡು ಅರಣ್ಯ ಸಿಬ್ಬಂದಿಗೆ ಕ್ಲೀನ್‌ ಚಿಟ್‌ ನೀಡಿದ್ದಾರೆ. ಜೊತೆಗೆ ಇಲಾಖೆಯ ಹೊಣೆಗಾರಿಕೆಯನ್ನು ನಯವಾಗಿ ತಳ್ಳಿಹಾಕಿದ್ದಾರೆ" ಎಂದು ಹೂವರ್‌ ಆರೋಪಿಸಿದ್ದಾರೆ.

"ಈ ಎರಡು ಹುಲಿಗಳ ಸಾವಿಗೆ ಎಸ್ಟೇಟಿನ ಸಿಬ್ಬಂದಿಯೇ ಕಾರಣವಾಗಿದ್ದರೆ, ಸಸೆಕ್ಸ್ ಟೀ ಎಸ್ಟೇಟ್ ಮಾಲೀಕರನ್ನು ಬಂಧಿಸಿ ವಿಚಾರಣೆ ನಡೆಸಬೇಕು" ಎಂದೂ ಹೇಳಿರುವ ಅವರು, ಇಲಾಖೆ ಹುಲಿಗಳ ಸರಣಿ ಸಾವಿನ ಕುರಿತು ಗಂಭೀರ ಕ್ರಮ ಜರುಗಿಸಬೇಕು ಎಂದಿದ್ದಾರೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಸಿಎ) ಹೆಚ್ಚುವರಿ ಅರಣ್ಯ ಮಹಾನಿರೀಕ್ಷಕ ಹರಿಣಿ ವೇಣುಗೋಪಾಲ್ ಅವರು, “ಮೃತ ಹುಲಿಗಳು ಮತ್ತು ಕಾಡುಹಂದಿಗಳ ಅಂಗಾಂಗಗಳ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯನ್ನು ಎರಡು ದಿನಗಳಲ್ಲಿ ನೀಡುವಂತೆ ಕೋರಲಾಗಿದೆ. ಕ್ಷೇತ್ರದ ಸಿಬ್ಬಂದಿ ಈ ಘಟನೆಯ ಕುರಿತು ಕೆಲವು ಅನುಮಾನ ವ್ಯಕ್ತಪಡಿಸಿದ್ಧಾರೆ. ಘಟನೆ ನಡೆದ ಸ್ಥಳದ ಮಾಹಿತಿ ಕಲೆ ಹಾಕಲು ಮೂರು ತಂಡಗಳನ್ನು ರಚಿಸಿದ್ದೇವೆ. ಆರೋಪಿಗಳ ಬಂಧನಕ್ಕೆ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ" ಎಂದು ಮಾಹಿತಿ ನೀಡಿರುವುದಾಗಿ ಜೋಸೆಫ್‌ ಹೂವರ್‌ ಹೇಳಿದ್ದಾರೆ.

Tags:    

Similar News