ಪೋಕ್ಸೋ ಪ್ರಕರಣ | ಯಡಿಯೂರಪ್ಪಗೆ ಬಿಗ್‌ ರಿಲೀಫ್‌: ಬಂಧನಕ್ಕೆ ಹೈಕೋರ್ಟ್‌ ತಡೆ

ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿ ಎಸ್‌ ಯಡಿಯೂರಪ್ಪ ಅವರಿಗೆ ದೊಡ್ಡ ರಿಲೀಫ್‌ ಸಿಕ್ಕಿದ್ದು, ಅವರ ವಿರುದ್ಧ ಹೊರಡಿಸಿದ್ದ ಬಂಧನ ವಾರಂಟ್‌ಗೆ ತಡೆ ನೀಡಿರುವ ರಾಜ್ಯ ಹೈಕೋರ್ಟ್‌, ಅವರನ್ನು ಬಂಧಿಸದಂತೆ ಪೊಲೀಸರಿಗೆ ಆದೇಶಿಸಿದೆ.

Update: 2024-06-14 11:32 GMT

ಹದಿನೇಳು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಕ್ಕೆ ಸಂಬಂಧಿಸಿದ ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿ ಎಸ್‌ ಯಡಿಯೂರಪ್ಪ ಅವರಿಗೆ ದೊಡ್ಡ ರಿಲೀಫ್‌ ಸಿಕ್ಕಿದ್ದು, ಅವರ ವಿರುದ್ಧ ಹೊರಡಿಸಿದ್ದ ಬಂಧನ ವಾರಂಟ್‌ಗೆ ತಡೆ ನೀಡಿರುವ ರಾಜ್ಯ ಹೈಕೋರ್ಟ್‌, ಅವರನ್ನು ಬಂಧಿಸದಂತೆ ಪೊಲೀಸರಿಗೆ ಆದೇಶಿಸಿದೆ.

ಅಲ್ಲದೆ, ಸಿಐಡಿ ನೀಡಿರುವ ಸೂಚನೆಯಂತೆ ಜೂ.17 ರಂದು ಪ್ರಕರಣದ ವಿಚಾರಣೆಗೆ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು ಎಂದೂ ಕೋರ್ಟ್‌ ಯಡಿಯೂರಪ್ಪ ಅವರಿಗೆ ಸೂಚಿಸಿದೆ. 

ಪ್ರಕರಣ ರದ್ದು ಕೋರಿ ಮತ್ತು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ಶುಕ್ರವಾರ ಈ ಆದೇಶ ನೀಡಿದೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ನ್ಯಾಯ ಕೊಡಿಸುವಂತೆ ನೆರವು ಕೋರಿ ಕಳೆದ ಫೆಬ್ರವರಿಯಲ್ಲಿ ಭೇಟಿಯಾದಾಗ, ಯಡಿಯೂರಪ್ಪ ಅವರು ತಮ್ಮ ಕೋಣೆಯೊಳಗೆ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಬಾಲಕಿಯ ತಾಯಿ ಮಾರ್ಚ್‌ 14 ರಂದು ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ರಾಜ್ಯ ಸರ್ಕಾರ, ಸಿಐಡಿಗೆ ವಹಿಸಿತ್ತು.

ಆದರೆ, ಪ್ರಕರಣ ದಾಖಲಾಗಿ ಮೂರು ತಿಂಗಳು ಸಮೀಪಿಸಿದರೂ ಸಿಐಡಿ ಆರೋಪಿಯ ವಿಚಾರಣೆ ನಡೆಸದೇ ಇರುವುದು, ಘಟನೆ ನಡೆದ ಸ್ಥಳದ ಸಿಸಿಟಿವಿ ವಿಡಿಯೋ ಫೂಟೇಜ್‌ ಸಂಗ್ರಹಿಸದೇ ಇರುವುದು ಸೇರಿದಂತೆ ಹಲವು ಲೋಪಗಳನ್ನು ಪ್ರಶ್ನಿಸಿ, ಆರೋಪಿಯ ಬಂಧನಕ್ಕೆ ಆದೇಶಿಸುವಂತೆ ಕೋರಿ ಸಂತ್ರಸ್ತೆಯ ಸಹೋದರ ಹೈಕೋರ್ಟ್‌ ಮೊರೆ ಹೋಗಿದ್ದರು. ಆ ಬೆಳವಣಿಗೆಯ ಬೆನ್ನಲ್ಲೇ ಆರೋಪಿ ಬಿ ಎಸ್‌ ಯಡಿಯೂರಪ್ಪ ಹೈಕೋರ್ಟಿಗೆ ಅರ್ಜಿ ಸಲ್ಲಿಸಿ ಪ್ರಕರಣ ರದ್ದುಪಡಿಸುವಂತೆ ಕೋರಿದ್ದರು. ಅಲ್ಲದೆ, ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೊಟೀಸ್‌ ಜಾರಿ ಮಾಡಿದ ಬಳಿಕ, ಜಾಮೀನು ಕೋರಿ ಯಡಿಯೂರಪ್ಪ ಮತ್ತೊಂದು ಅರ್ಜಿ ಸಲ್ಲಿಸಿದ್ದರು.

ಈ ನಡುವೆ, ಗುರುವಾರ ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ಪೋಕ್ಸೋ ನ್ಯಾಯಾಲಯ, ಯಡಿಯೂರಪ್ಪ ಬಂಧನಕ್ಕೆ ಜಾಮೀನುರಹಿತ ವಾರಂಟ್‌ ಹೊರಡಿಸಿತ್ತು. ಇದೀಗ ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಸೋಮವಾರ(ಜೂ.17) ರವರೆಗೆ ಯಡಿಯೂರಪ್ಪ ಅವರಿಗೆ ಪ್ರಕರಣದಲ್ಲಿ ಬಿಗ್‌ ರಿಲೀಫ್‌ ಸಿಕ್ಕಿದೆ.

Tags:    

Similar News