BSY Pocso Case | ​ಯಡಿಯೂರಪ್ಪ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ ಸಿಐಡಿ

ಹದಿನೇಳು ವರ್ಷದ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂಬ ಆರೋಪದ ಮೇಲೆ ಸದಾಶಿವನಗರ ಠಾಣೆಯಲ್ಲಿ ಬಿಎಸ್‍ವೈ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ನೀಡಿತ್ತು.

Update: 2024-06-27 13:52 GMT
ಮಾಜಿ ಸಿಎಂ ಯಡಿಯೂರಪ್ಪ
Click the Play button to listen to article

ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಕೋರ್ಟ್‍ಗೆ 750 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಗುರುವಾರ(ಜೂನ್ 27) ಪೊಲೀಸರು, ಬೆಂಗಳೂರಿನ ಪೋಕ್ಸೋ ವಿಶೇಷ ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸಿದರು.

ಯಡಿಯೂರಪ್ಪ ಸೇರಿದಂತೆ 4 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 73 ಸಾಕ್ಷಿಗಳನ್ನು ಪರಿಗಣಿಸಿ ದೋಷಾರೋಪ ಪಟ್ಟಿ ತಯಾರಿಸಲಾಗಿದೆ. ಯಡಿಯೂರಪ್ಪ, ಅರುಣ್, ರುದ್ರೇಶ್ ಮತ್ತು ಮರಿಸ್ವಾಮಿ ಎಂಬವರ ವಿರುದ್ಧ ಸಿಐಡಿ ಅಧಿಕಾರಿಗಳು 1ನೇ ತ್ವರಿತಗತಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಚಾರ್ಜ್‌ಶೀಟ್‌ನಲ್ಲಿ ಏನಿದೆ?

ಬಾಲಕಿ ದಾಖಲಿಸಿದ್ದ ಹಳೇ ಕೇಸ್ ಬಗ್ಗೆ ವಿಚಾರಿಸುತ್ತಾ ರೂಮಿಗೆ ಕರೆದೊಯ್ದು ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ಆರೋಪಪಟ್ಟಿಯಲ್ಲಿ ಉಲ್ಲೇಖವಾಗಿದೆ. ಬಾಲಕಿ ಪ್ರತಿಭಟಿಸಿದಾಗ ಹಣ ನೀಡಿ ಕಳುಹಿಸಿರುವುದಾಗಿ ಆರೋಪಿಸಲಾಗಿದೆ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ.

ನಂತರ ಬಾಲಕಿಯ ತಾಯಿ ಇದನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಪೋಸ್ಟ್ ಆಗಿದ್ದ ವಿಡಿಯೋ ಡಿಲೀಟ್​ ಮಾಡಿಸಲು ಮೂವರು ಪ್ರಯತ್ನಿಸಿದ್ದಾರೆ. ವೈ.ಎಂ. ಅರುಣ್, ಎಂ.ರುದ್ರೇಶ್, ಜಿ.ಮರಿಸ್ವಾಮಿ ಎನ್ನುವರು ಮಹಿಳೆಯನ್ನು ಕರೆತಂದು ವಿಡಿಯೋ ಪೋಸ್ಟ್ ಡಿಲೀಟ್ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ನಾಲ್ವರ ವಿರುದ್ದವೂ ಸಿಐಡಿ ಪೊಲೀಸರು, ಆರೋಪಪಟ್ಟಿ ದಾಖಲಿಸಿದ್ದಾರೆ.

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂಬ ಆರೋಪದ ಮೇಲೆ ಸದಾಶಿವನಗರ ಠಾಣೆಯಲ್ಲಿ ಬಿಎಸ್‍ವೈ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ನೀಡಿತ್ತು. ತನಿಖೆಗೆ ಹಾಜರಾಗುವಂತೆ ಬಿಎಸ್‍ವೈಗೆ ನೋಟಿಸ್ ಕೊಟ್ಟದ್ದರಿಂದ ಅವರು ಕಾಲಾವಕಾಶ ಕೇಳಿದ್ದರು. ಬಳಿಕ ತನಿಖೆಗೆ ಹಾಜರಾಗಿಲ್ಲ ಎಂದು ಸಿಐಡಿ ಅಧಿಕಾರಿಗಳು, ಅವರ ಬಂಧನಕ್ಕೆ ಅರೆಸ್ಟ್ ವಾರೆಂಟ್ ಪಡೆದಿದ್ದರು.ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಬಂಧನ ಮಾಡದಂತೆ ಹಾಗೂ ಜೂನ್‌ 17ಕ್ಕೆ ತಪ್ಪದೆ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು. ಅದರಂತೆ ಬಿಎಸ್​ವೈ ಜೂನ್ 17ರಂದು ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಮಾರ್ಚ್‌ 14ರ ರಾತ್ರಿ ಬೆಂಗಳೂರಿನ ಸದಾಶಿವನಗರ ಠಾಣೆಗೆ ಆಗಮಿಸಿದ್ದ ಮಹಿಳೆಯೊಬ್ಬರು ದೂರು ನೀಡಿದ್ದರು. ಈ ಹಿಂದೆ, ತಮ್ಮ 17 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ನೀಡಲಾಗಿತ್ತು. ಆದರೆ, ಯಾವುದೇ ಕ್ರಮ ಜರುಗಿರಲಿಲ್ಲ. ಫೆ.2ರಂದು ಬೆಂಗಳೂರಿನ ಡಾಲರ್ಸ್‌ ಕಾಲೋನಿಯಲ್ಲಿರುವ ಯಡಿಯೂರಪ್ಪ ಮನೆಗೆ ತನ್ನ ಮಗಳ ಜತೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿ ಜತೆ ಯಡಿಯೂರಪ್ಪ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ, ಯಡಿಯೂರಪ್ಪನವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.

ಇನ್ನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಪ್ರಾಸಿಕ್ಯೂಷನ್ ಪರವಾಗಿ ವಕಾಲತ್ತು ವಹಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಅಶೋಕ್ ಎನ್.ನಾಯಕ್ ಅವರನ್ನು ನೇಮಿಸಿದೆ.

Tags:    

Similar News