PMEdrive: ವಿದ್ಯುತ್ ಚಾಲಿತ ವಾಹನಗಳ ಉತ್ತೇಜನಕ್ಕೆ ಕೇಂದ್ರದಿಂದ 4,150 ಕೋಟಿ ರೂ. ಹೂಡಿಕೆ
ದೇಶದ ಉದ್ದಗಲಕ್ಕೂ ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ರೂಪಿಸಲಾಗಿರುವ 4,150 ಕೋಟಿ ರೂ. ಮೊತ್ತದ ಬೃಹತ್ ಹೂಡಿಕೆ ಯೋಜನೆಯಾಗಿದೆ ಎಂದು ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.;
ಕೇಂದ್ರ ಸಚಿವ ಕುಮಾರಸ್ವಾಮಿ.
ದೇಶದ ಉದ್ದಗಲಕ್ಕೂ ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರಧಾನಿ ಅವರ ದೂರದೃಷ್ಟಿಯೊಂದಿಗೆ ರೂಪಿಸಲಾಗಿರುವ 4,150 ಕೋಟಿ ರೂ. ಮೊತ್ತದ ಬೃಹತ್ ಹೂಡಿಕೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.
ಸೋಮವಾರ (ಜೂನ್ 2) ನವದೆಹಲಿಯ ತಮ್ಮ ಸಚಿವಾಲಯದ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಅವರು ವಿವರಿಸಿದರು. ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ನಿಟ್ಟಿನಲ್ಲಿ ರೂಪಿಸಲಾದ ಈ ಯೋಜನೆಯು. ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಉತ್ತೇಜಿಸಲು ಸಹಕಾರಿಯಾಗಿದೆ. ಇದನ್ನು ಭಾರತದಲ್ಲಿ ಎಲೆಕ್ಟ್ರಿಕ್ ಪ್ರಯಾಣಿಕರ ಕಾರುಗಳ ಉತ್ಪಾದನೆಯನ್ನು ಉತ್ತೇಜಿಸುವ ಯೋಜನೆ (SPMECPI) ಎಂದು ಕರೆಯಲಾಗುತ್ತದೆ. ಈ ಉಪಕ್ರಮವು ಭಾರತವನ್ನು ಎಲೆಕ್ಟ್ರಿಕ್ ವಾಹನ (EV) ಉತ್ಪಾದನೆಗೆ ಜಾಗತಿಕ ಕೇಂದ್ರವನ್ನಾಗಿ ಮಾಡಲಿದೆ ಎಂದು ವಿವರಿಸಿದರು.
ಈ ಯೋಜನೆಯು ಜಾಗತಿಕ ಮಟ್ಟದ ಎಲೆಕ್ಟ್ರಿಕ್ ವಾಹನ ತಯಾರಕರನ್ನು ಭಾರತದಲ್ಲಿ ಹೂಡಿಕೆ ಮಾಡಲು ಮತ್ತು ದೇಶೀಯವಾಗಿಯೇ ಕಾರುಗಳನ್ನು ತಯಾರಿಸಲು ಆಕರ್ಷಿಸುವ ಗುರಿ ಹೊಂದಿದೆ. ಮೂರು ವರ್ಷಗಳಲ್ಲಿ 4,150 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ. ವಿದೇಶಿ ಬಂಡವಾಳಕ್ಕೆ ಯೋಜನೆಯು ಪೂರಕವಾಗಿರುತ್ತದೆ. 2024ರ ಮಾರ್ಚ್ 15ರಂದು ಭಾರೀ ಕೈಗಾರಿಕಾ ಸಚಿವಾಲಯವು ಈ ಯೋಜನೆಗಾಗಿ ವಿವರವಾದ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
ಯೋಜನೆಯು ಪ್ರಯಾಣಿಕರ ವಾಹನ ಕ್ಷೇತ್ರದಲ್ಲಿ ವಾಯು ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. 2070ರ ವೇಳೆಗೆ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ಯೋಜನೆಯಿದೆ ಎಂದು ಹೇಳಿದರು.
ವಿದ್ಯುತ್ ಚಾಲಿತ ವಾಹನ ತಯಾರಕರಿಗೆ ಪ್ರೋತ್ಸಾಹ ಮತ್ತು ಷರತ್ತುಗಳು
ವಿದ್ಯುತ್ ಚಾಲಿತ ವಾಹನ ತಯಾರಕರಿಗೆ ಭಾರತೀಯ ಮಾರುಕಟ್ಟೆಯನ್ನು ಹೆಚ್ಚು ಆಕರ್ಷಕವಾಗಿಸಲು ಈ ಯೋಜನೆಯು ಪ್ರೋತ್ಸಾಹವನ್ನು ನೀಡುತ್ತದೆ. ಅನುಮೋದಿಸಲಾದ ಕಂಪನಿಗಳು 29,89,700 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ನಾಲ್ಕು ಚಕ್ರಗಳ ಎಲೆಕ್ಟ್ರಿಕ್ ಬಿಲ್ಟ್ ಯೂನಿಟ್ಗಳನ್ನು (CBUs) ಪ್ರತಿಶತ 15ರಷ್ಟು ಕಡಿಮೆ ಕಸ್ಟಮ್ಸ್ ಸುಂಕದಲ್ಲಿ ಆಮದು ಮಾಡಿಕೊಳ್ಳಬಹುದು. ಈ ರಿಯಾಯಿತಿ ಐದು ವರ್ಷಗಳವರೆಗೆ ಲಭ್ಯವಿರುತ್ತದೆ ಮತ್ತು ಬಳಕೆಯಾಗದ ಕೋಟಾಗಳನ್ನು ಮುಂದಕ್ಕೆ ಹಾಕಲಾಗುವುದು ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
ಯೋಜನೆಯ ಅರ್ಹತೆ ಪಡೆಯಲು ಕಂಪನಿಗಳು ಮೂರು ವರ್ಷಗಳ ಒಳಗೆ ಭಾರತದಲ್ಲಿ ಉತ್ಪಾದನಾ ಕಾರ್ಯಾಚರಣೆಯನ್ನು ಪ್ರಾರಂಭಿಸಬೇಕು ಮತ್ತು ಅದೇ ಅವಧಿಯಲ್ಲಿ ಕನಿಷ್ಠ ಶೇ. 25ರಷ್ಟು ದೇಶೀಯ ಮೌಲ್ಯವರ್ಧನೆ (DVA) ಸಾಧಿಸಬೇಕು. ಇದು ಐದು ವರ್ಷಗಳ ಒಳಗೆ ಕನಿಷ್ಠ ಶೇ. 50ಕ್ಕೆ ಏರಬೇಕು ಎಂದು ಹೇಳಿದರು.
.
"ಮುನ್ನೆಚ್ಚರಿಕೆಯಾಗಿ, ಕಂಪನಿಗಳು 4,150 ಕೋಟಿಗಿಂತ ಹೆಚ್ಚಿನ ಮೊತ್ತ ಅಥವಾ ಯೋಜನೆಯ ಅವಧಿಯಲ್ಲಿ ಅವುಗಳಿಗೆ ವಿನಾಯಿತಿ ನೀಡಲಾದ ಒಟ್ಟು ಸುಂಕಕ್ಕೆ ಸಮಾನವಾದ ಬ್ಯಾಂಕ್ ಗ್ಯಾರಂಟಿಯನ್ನು ಒದಗಿಸಬೇಕು. ಈ ಗ್ಯಾರಂಟಿಯು ಯೋಜನೆಯ ಅವಧಿಯಾದ್ಯಂತ ಮಾನ್ಯವಾಗಿರಬೇಕು ಮತ್ತು ಹೂಡಿಕೆ ಮತ್ತು ಸ್ಥಳೀಕರಣ ಗುರಿಗಳ ಅನುಸರಣೆಯ ಆರ್ಥಿಕ ಭರವಸೆಯಾಗಿ ಕಾರ್ಯನಿರ್ವಹಿಸುತ್ತದೆ." ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಅರ್ಹತೆಗಳು
ಯೋಜನೆಗೆ ಅರ್ಜಿ ಸಲ್ಲಿಸುವ ಪೋರ್ಟಲ್ ಅನ್ನು ಶೀಘ್ರವೇ ತೆರೆಯಲಾಗುವುದು. ಆರಂಭದಲ್ಲಿ 120 ದಿನಗಳವರೆಗೆ ಅದು ತೆರೆದಿರುತ್ತದೆ. ಭವಿಷ್ಯದಲ್ಲಿ ಅಗತ್ಯವಿರುವಂತೆ ಸಚಿವಾಲಯವು ಅದನ್ನು ಪುನಃ ತೆರೆಯಬಹುದು. ಈ ಯೋಜನೆಯು 2026 ಮಾರ್ಚ್ 15ರವರೆಗೆ ಅರ್ಜಿಗಳನ್ನು ಸ್ವೀಕರಿಸುತ್ತದೆ. ಕಂಪನಿಗಳು 5 ಲಕ್ಷ ಮರು ಪಾವತಿಸಲಾಗದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅರ್ಹತೆ ಪಡೆಯಲು, ಅರ್ಜಿದಾರರು ಕನಿಷ್ಠ 10,000 ಕೋಟಿ ರೂ. ವಾರ್ಷಿಕ ಆದಾಯ ಮತ್ತು 3,000 ಕೋಟಿ ರೂ. ಕನಿಷ್ಠ ಜಾಗತಿಕ ಸ್ಥಿರ ಆಸ್ತಿ ಮೂಲವನ್ನು ಹೊಂದಿರುವ ಜಾಗತಿಕ ವಾಹನ ಉತ್ಪಾದನಾ ಸಮೂಹಗಳಾಗಿರಬೇಕು ಎಂದು ಮಾಹಿತಿ ನೀಡಿದರು.
ಈ ಯೋಜನೆಯು ಭಾರತದ ಆಟೋಮೋಟಿವ್ ವಲಯಕ್ಕೆ ಒಂದು ದಿಕ್ಕನ್ನೇ ಬದಲಾಯಿಸುವಂತಿದೆ. ವಿಶೇಷವಾಗಿ ಇದು ವಾಯುಮಾಲಿನ್ಯ ಹೊರಸೂಸುವಿಕೆ ತಡೆಯುವುದು ಮತ್ತು ವಿದ್ಯುತ್ ಚಲನಶೀಲತೆಯ ಕಡೆಗೆ ಜಾಗತಿಕ ಪ್ರವೃತ್ತಿಗಳಿಗೆ ಹೊಂದಿಕೆಯಾಗುವುದರಿಂದ ಬಲವಾದ ಪ್ರೋತ್ಸಾಹ, ಕಟ್ಟುನಿಟ್ಟಾದ ಸ್ಥಳೀಕರಣ ಮಾನದಂಡಗಳು ಮತ್ತು ಮೇಕ್ ಇನ್ ಇಂಡಿಯಾಗೆ ಸ್ಪಷ್ಟ ಬದ್ಧತೆಯೊಂದಿಗೆ, ಈ ಯೋಜನೆಯನ್ನು ಜಗತ್ತಿನ ಕೆಲ ಉನ್ನತ ವಿದ್ಯುತ್ ಚಾಲಿತ ವಾಹನ ತಯಾರಕರು ದೇಶದಲ್ಲಿ ಘಟಕಗಳನ್ನು ಸ್ಥಾಪಿಸಲು ಒಂದು ಕಾರ್ಯತಂತ್ರದ ಆಹ್ವಾನವೆಂದು ಪರಿಗಣಿಸಲಾಗಿದೆ ಎಂದರು.