ಬೆಂಗಳೂರಿನ ಬೆಳವಣಿಗೆ ಭಾರತದ ಅಭಿವೃದ್ಧಿಯ ಸೂಚ್ಯಂಕ; ಪ್ರಧಾನಿ ಮೋದಿ

ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲುನಿಲ್ದಾಣದಲ್ಲಿ ಬೆಂಗಳೂರಿನಿಂದ ಬೆಳಗಾವಿ ಯ ವಂದೇ ಭಾರತ್‌ ರೈಲಿಗೆ ಚಾಲನೆ ನೀಡಿದರು. ಬಳಿಕ ರಾಗಿಗುಡ್ಡದಲ್ಲಿ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಿದರು.;

Update: 2025-08-10 04:22 GMT

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನಿಂದ ಬೆಳಗಾವಿಗೆ ವಿಸ್ತರಣೆಗೊಂಡಿರುವ ವಂದೇ ಭಾರತ್‌ ರೈಲಿಗೆ ಭಾನುವಾರ ಚಾಲನೆ ನೀಡಿದರು. 

ಇದೇ ವೇಳೆ ಅಮೃತ್‍ಸರ್ ದಿಂದ ಶ್ರೀಮಾತಾ ವೈಷ್ಣೋದೇವಿ ಕತ್ರಾ ಹಾಗೂ ನಾಗ್‍ಪುರ್ (ಅಜ್ನಿ) ಯಿಂದ ಪುಣೆಯವರೆಗೆ ಚಲಿಸಲಿರುವ ವಂದೇ ಭಾರತ್ ಎಕ್ಸ್‌ ಪ್ರೆಸ್ ರೈಲುಗಳಿಗೂ ಸಹ ವರ್ಚುವಲ್ ಮೂಲಕ ಚಾಲನೆ ನೀಡಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಜತೆಯಲ್ಲಿದ್ದರು.

ಮಧ್ಯಾಹ್ನ 12.30 ಕ್ಕೆ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಒಟ್ಟು 19.15 ಕಿ.ಮೀ. ಹಳದಿ ಮಾರ್ಗದ ಮೆಟ್ರೋ ಸಂಚಾರಕ್ಕೆ ಮೋದಿ ಅವರು ರಾಗಿಗುಡ್ಡದಲ್ಲಿ ಚಾಲನೆ ನೀಡಿದರು.ಇದೇ ವೇಳೆ ಮೆಟ್ರೋ ಹಂತ -3 ಶಂಕುಸ್ಥಾಪನೆ ನೆರವೇರಿಸಿ, ಮೆಟ್ರೋದಲ್ಲಿ ಎಲೆಕ್ಟ್ರಾನಿಕ್‌ ಸಿಟಿ ವರೆಗೂ ಪ್ರಯಾಣಿಸಿದರು. 

ಹಸಿರು ಮಾರ್ಗದಲ್ಲಿ ಮೆಟ್ರೋ ಇರಲ್ಲ

ಪ್ರಧಾನಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಬಿಎಂಆರ್ ಸಿಎಲ್ ಹಸಿರು ಮಾರ್ಗದ ಲಾಲ್ ಬಾಗ್ ನಿಂದ ಆರ್.ವಿ.ರಸ್ತೆವರೆಗಿನ ಮೆಟ್ರೋ ಸಂಚಾರವನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. 

ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ನಿಲ್ಲಿಸುವಂತೆ ಬಸವನಗುಡಿ ಪೊಲೀಸ್‌ ಠಾಣೆಯ ಪಿಐ ಕೋರಿಕೆ ಸಲ್ಲಿಸಿದ್ದರು. ಹಾಗಾಗಿ, ಇಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ರವರೆಗೆ ಲಾಲ್‌ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ ಮತ್ತು ಆ‌ರ್.ವಿ. ರಸ್ತೆ ಮೆಟ್ರೊ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು. ಮೆಟ್ರೊ ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆ ಗಮನಿಸಿ ಅದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಯೋಜಿಸಲು ಸೂಚಿಸಲಾಗಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮೂರು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡುವ ಹಿನ್ನೆಲೆಯಲ್ಲಿ ರೈಲು ನಿಲ್ದಾಣದ ಎರಡನೇ ಪ್ರವೇಶ ದ್ವಾರವನ್ನು ಮುಚ್ಚಲಾಗಿದೆ. ಅಲ್ಲದೇ ಕೆಎಸ್‌ಆರ್ ಬೆಂಗಳೂರು - ಅಶೋಕಪುರ-ಕೆಎಸ್‌ಆರ್ ಬೆಂಗಳೂರು, ಕೆಎಸ್‌ಆರ್ ಬೆಂಗಳೂರು -ತುಮಕೂರು-ಕೆಎಸ್‌ಆರ್ ಬೆಂಗಳೂರು, ಕೆಎಸ್‌ಆರ್ ಬೆಂಗಳೂರು - ಚನ್ನಪಟ್ಟಣ-ಕೆಎಸ್‌ಆ‌ರ್ ಬೆಂಗಳೂರು ರೈಲುಗಳನ್ನು ರದ್ದು ಮಾಡಲಾಗಿದೆ.

ಜನದಟ್ಟಣೆ ಕಡಿಮೆ ಮಾಡಲು ಹಲವು ರೈಲುಗಳ ಮಾರ್ಗ ಬದಲಾವಣೆ, ರದ್ದು, ವಿಳಂಬ ಸಂಚಾರಕ್ಕೆ ಕ್ರಮ ಕೈಗೊಂಡಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

Live Updates
2025-08-10 07:39 GMT

ಪ್ರಧಾನಿ ಮೋದಿ ಅವರನ್ನು ನೋಡಲು ಬೆಂಗಳೂರಿನ ರಸ್ತೆಯ ಇಕ್ಕೆಲಗಳಲ್ಲಿ ಜನ ಕಿಕ್ಕಿರಿದು ನಿಂತಿದ್ದು, ಜಯಘೋಷಗಳೊಂದಿಗೆ ಸ್ವಾಗತ ಕೋರಿದರು. ಭದ್ರತೆ ಒದಗಿಸಲು ಸಾವಿರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

2025-08-10 06:58 GMT

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ರಾಗಿಗುಡ್ಡದಲ್ಲಿ ಹಳದಿ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಿದರು. ಇದೇ ವೇಳೆ ಮೆಟ್ರೋ ಹಂತ-ಮೂರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿ ಒಟ್ಟು ೧೧೭ಗಣ್ಯರು ಹಳದಿ ಮೆಟ್ರೋದಲ್ಲಿ ಸಂಚರಿಸಲಿದ್ದಾರೆ.

2025-08-10 06:51 GMT

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲುನಿಲ್ದಾಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನಿಂದ ಬೆಳಗಾವಿ ಯ ವಂದೇ ಭಾರತ್‌ ರೈಲಿಗೆ ಚಾಲನೆ ನೀಡಿದರು. 

ಇದೇ ಸಮಯದಲ್ಲಿ ಅಮೃತ್‍ಸರ್ ದಿಂದ ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಹಾಗೂ ನಾಗ್‍ಪುರ್ (ಅಜ್ನಿ) ಯಿಂದ ಪುಣೆಯ ವರೆಗೆ ಚಲಿಸಲಿರುವ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲುಗಳಿಗೂ ಸಹ ವರ್ಚುವಲ್ ಮೂಲಕ ಚಾಲನೆ ನೀಡಲಾಯಿತು.


2025-08-10 06:09 GMT

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೆಟ್ರೋ ಮಹಿಳಾ ಲೋಕೋ ಪೈಲಟ್ ವಿನುತಾ ಸಾರಥಿ ಆಗಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಸೇರಿ 117 ಜನರು ಪ್ರಯಾಣ ಮಾಡಲಿದ್ದಾರೆ.

2025-08-10 05:55 GMT

ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ. ಮೋದಿ ಅವರು ಸಾಗುವ ಹಾದಿಯುದ್ದಕ್ಕೂ ಬೃಹತ್‌ ಕಟೌಟ್‌ಗಳು ರಾರಾಜಿಸುತ್ತಿವೆ. ಚಾಲುಕ್ಯ ವೃತ್ತದ ಬಳಿ ಪ್ರಧಾನಿ ಅವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು, ಮುಖಂಡರು ನೆರೆದಿದ್ದಾರೆ.

2025-08-10 05:52 GMT

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದಿದ್ದು, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್, ಸುಧಾಕರ್ ರೆಡ್ಡಿ, ಶಾಸಕರಾದ ದೊಡ್ಡನಗೌಡ ಪಾಟೀಲ್, ಡಾ.ಶೈಲೇಂದ್ರ ಬೆಲ್ದಾಳೆ, ಸುರೇಶ್ ಗೌಡ, ಎಂಎಲ್​ಸಿ ಮಾರುತಿರಾವ್ ಮುಳೆ‌ ಸೇರಿದಂತೆ 15 ಜನರು ಸ್ವಾಗತ ಮಾಡಿದ್ದಾರೆ.

2025-08-10 04:56 GMT

ಪ್ರದಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಹೆಸರನ್ನೂ ಸೇರಿಸಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಶೋಕ್ ಕೂಡ ವೇದಿಕೆಯಲ್ಲಿ ಇರುತ್ತಾರೆ. ಅಶೋಕ್ಅವರ ಹೆಸರು ಇಲ್ಲದಿರುವ ಬಗ್ಗೆ ನಾನು ಪ್ರಧಾನಮಂತ್ರಿ ಕಚೇರಿಯ ಗಮನ ಸೆಳೆದಿದ್ದೆ. ನಿನ್ನೆ ಮತ್ತೆ ಮಾತನಾಡಿದ್ದೇನೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಜೊತೆ ಮಾತನಾಡಿದ್ದೆ; ಅವರೂ ಪ್ರಯತ್ನ ಮಾಡಿದ್ದಾರೆ. ಈ ವಿಷಯದಲ್ಲಿ ಆತಂಕ ಪಡಬೇಕಾದ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. 

2025-08-10 04:36 GMT

ಎಹಳದಿ‌ ಮಾರ್ಗದ ಮೆಟ್ರೋ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ.

ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಕೆಂಗೇರಿ ಭಾಗದಿಂದ ಬಂದಿಳಿದ ನೂರಾರು ಬಿಜೆಪಿ ಕಾರ್ಯಕರ್ತರು ಭಿತ್ತಿಪತ್ರ ಹಿಡಿದು ಪ್ರಧಾನಿ ಮೋದಿ ಪರ ಘೋಷಣೆ ಕೂಗಿದರು. ಭದ್ರತಾ ಸಿಬ್ಬಂದಿ ಕೂಡಲೇ ಅವರನ್ನು ಹೊರಕಳುಹಿಸಿದರು.

2025-08-10 04:25 GMT

ನಮ್ಮ‌ ಮೆಟ್ರೋ ಹಳದಿ ಮಾರ್ಗವು ನಮ್ಮ ಯೋಜನೆ, ಇದು  ಕಾಂಗ್ರೆಸ್ ಸರ್ಕಾರದ ಕನಸಿನ ಕೂಸು ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.

ಅಂದಿನ ಎಸ್.ಎಂ ಕೃಷ್ಣ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿ ಮತ್ತು ಬದ್ಧತೆಯಿಂದ ಆರಂಭವಾದ ಈ ಮಹತ್ವಾಕಾಂಕ್ಷಿ ಯೋಜನೆ, ಇಂದು ಉದ್ಘಾಟನೆಯಾಗುತ್ತಿದೆ.

ನಿರಂತರವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ವಾಹನ ದಟ್ಟಣೆಗೆ ಪರಿಣಾಮಕಾರಿ ಪರಿಹಾರ ಒದಗಿಸಿ, ಜನರಿಗೆ ಸುಗಮ ಸಂಚಾರದ ನೂತನ ಯುಗವನ್ನು ಆರಂಭಿಸಿದೆ.

ಬೆಂಗಳೂರು ಮೆಟ್ರೋ ಯೋಜನೆಯ ಪ್ರತಿಯೊಂದು ಹಂತದಲ್ಲೂ, ಕರ್ನಾಟಕ ಸರ್ಕಾರ ಹಣಕಾಸು, ಅಗತ್ಯ ಭೂಮಿ, ಪುನರ್ವಸತಿ ವೆಚ್ಚ ಸೇರಿದಂತೆ ಸಂಪೂರ್ಣ ಸಹಕಾರ ನೀಡಿ, ಯೋಜನೆ ಯಶಸ್ವಿಯಾಗಿ ಪೂರ್ಣಗೊಳ್ಳುವಂತೆ ನೋಡಿಕೊಂಡಿದೆ. ಹಾಗಾಗಿ ಇದು ನಮ್ಮ ಯೋಜನೆ ಎಂದು ಪೋಸ್ಟ್ ಮಾಡಿದೆ.

Tags:    

Similar News