ಎಚ್ಎಂಟಿ ಅರಣ್ಯಭೂಮಿಯಲ್ಲಿ ಲಾಲ್‌ಬಾಗ್‌ ಮಾದರಿಯಲ್ಲೇ ಉದ್ಯಾನ ನಿರ್ಮಾಣ

ಈಗಾಗಲೇ 160 ಎಕರೆ ಅರಣ್ಯ ಭೂಮಿಯನ್ನು ಖಾಸಗಿ ರಿಯಲ್ ಎಸ್ಟೇಟ್ ಕಂಪನಿ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಮಾರಾಟ ಮಾಡಿರುವ ಕೇಂದ್ರ ಸರ್ಕಾರದ ಧೋರಣೆಯ ಬಗ್ಗೆ ಉಸ್ತುವಾರಿ ಬಳಿ ಚರ್ಚಿಸಲಾಗಿದೆ ಎಂದು ಸಚಿವ ಖಂಡ್ರೆ ತಿಳಿಸಿದರು.;

Update: 2025-07-16 12:55 GMT

ಅರಣ್ಯ ಸಚಿವ ಈಶ್ವರ್‌ ಖಂಡ್ರೆ

ಬೆಂಗಳೂರಿನ ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯನ್ನು ಕನ್ನಡಿಗರ ಆಸ್ತಿಯಾಗಿ ಉಳಿಸಲು ಕಾನೂನು ಹೋರಾಟ ನಡೆಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಮಾದರಿಯಲ್ಲೇ ಸುಂದರ ಜೈವಿಕ ಉದ್ಯಾನ ನಿರ್ಮಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಬುಧವಾರ (ಜುಲೈ 16) ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಖಂಡ್ರೆ, ಈಗಾಗಲೇ 160 ಎಕರೆ ಅರಣ್ಯ ಭೂಮಿಯನ್ನು ಖಾಸಗಿ ರಿಯಲ್ ಎಸ್ಟೇಟ್ ಕಂಪನಿ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಮಾರಾಟ ಮಾಡಿರುವ ಕೇಂದ್ರ ಸರ್ಕಾರದ ಧೋರಣೆಯ ಬಗ್ಗೆ ಸುರ್ಜೇವಾಲಾ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು. ಕಳೆದ ಆಗಸ್ಟ್‌ನಲ್ಲಿ ರಾಜ್ಯ ಸರ್ಕಾರ ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯನ್ನು ಹಿಂಪಡೆಯಲು ಮುಂದಾಗದಿದ್ದರೆ, ಇಷ್ಟು ಹೊತ್ತಿಗೆ ಅರಣ್ಯ ಸ್ವರೂಪದಲ್ಲೇ ಇರುವ 280 ಎಕರೆಯೂ ಪರಭಾರೆ ಆಗುತ್ತಿತ್ತು. ಇದು ಉತ್ತರ ಬೆಂಗಳೂರಿಗರಿಗೆ ಮಹತ್ವದ ತಾಣ ಎಂದು ಅವರು ತಿಳಿಸಿದರು.

ರಿಯಲ್ ಎಸ್ಟೇಟ್ ಪಾಲಾಗುತ್ತಿದ್ದ ಎಚ್‌ಎಂಟಿ ಅರಣ್ಯಭೂಮಿಯನ್ನು ಸಂರಕ್ಷಿಸಿ, ಲಾಲ್ ಬಾಗ್ ಮಾದರಿಯಲ್ಲಿ ಮತ್ತೊಂದು ಉದ್ಯಾನ ಮಾಡುವ ಉದ್ದೇಶ ಹೊಂದಿರುವ ಸಚಿವ ಈಶ್ವರ ಖಂಡ್ರೆಯವರ ಪ್ರಯತ್ನವನ್ನು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಶ್ಲಾಘಿಸಿದ್ದಾರೆ.

ಎಚ್‌ಎಂಟಿ ಅರಣ್ಯ ಭೂಮಿಯ ವಿವರ ಪಡೆದ ಸುರ್ಜೇವಾಲಾ, "ಕರ್ನಾಟಕ ಸರ್ಕಾರ ಎಚ್‌ಎಂಟಿ ಪ್ರದೇಶವನ್ನು ಜೈವಿಕ ಉದ್ಯಾನವಾಗಿ ಉಳಿಸಲು ಪ್ರಯತ್ನಿಸುತ್ತಿದೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಇದನ್ನು ರಿಯಲ್ ಎಸ್ಟೇಟ್ ಮಾಡುವ ಹುನ್ನಾರ ನಡೆಸಿದೆ" ಎಂದು ತಮ್ಮ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ತಿಳಿಸಿದ್ದಾರೆ. "ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬೆಂಗಳೂರಿನ ಹೃದಯ ಭಾಗದಲ್ಲಿ ಮತ್ತೊಂದು ಜೈವಿಕ ಉದ್ಯಾನ ನಿರ್ಮಾಣಕ್ಕೆ ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ? ಬೆಂಗಳೂರಿಗೆ ಹಸಿರು ಹೊದಿಕೆ ಹೆಚ್ಚಳಕ್ಕಿಂತ ರಿಯಲ್ ಎಸ್ಟೇಟ್ ವ್ಯವಹಾರವೇ ಬಿಜೆಪಿ ಮತ್ತು ಜೆಡಿಎಸ್‌ಗೆ ಅಪ್ಯಾಯಮಾನವೇ? 1960ರಲ್ಲಿ ಎಚ್‌ಎಂಟಿಗೆ ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ನೀಡಲಾಗಿತ್ತು. ಆದರೆ 15 ವರ್ಷದ ಹಿಂದೆಯೇ ಕಾರ್ಖಾನೆ ಮುಚ್ಚಿಹೋಗಿದೆ. ಭೂಮಿಯನ್ನು ರಾಜ್ಯದ ಜನರ ಹಿತಕ್ಕಾಗಿ ಕೇಂದ್ರ ಸರ್ಕಾರ ಏಕೆ ಹಿಂತಿರುಗಿಸಿಲ್ಲ?" ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ. 

Tags:    

Similar News