ರಶ್​ ಇರುವ ಬಸ್ ಹತ್ತುವ ಮಹಿಳೆಯರೇ ಇವರ ಟಾರ್ಗೆಟ್‌; ಬಸ್‌ನಲ್ಲಿ ಕಳ್ಳತನ ಮಾಡುತ್ತಿದ್ದ ಲೇಡೀಸ್​ ಗ್ಯಾಂಗ್‌ ಸೆರೆ

ಹಾಸನ‌ ಜಿಲ್ಲೆ ಹೊಳೆನರಸೀಪುರ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಸರ ಕಳ್ಳತನವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಹೊಳೆನರಸೀಪುರ ನಗರ ಠಾಣೆ ಪೋಲೀಸರು ತನಿಖೆ ನಡೆಸುವ ವೇಳೆ ಈ ತಂಡ ಸಿಕ್ಕಿಬಿದ್ದಿದೆ.;

Update: 2025-06-09 06:26 GMT

ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಮಹಿಳೆಯರು 

ಜನನಿಬಿಡ ಬಸ್‌ ನಿಲ್ದಾಣಗಳಲ್ಲಿ, ನೂಕುನುಗ್ಗಲಿನ ಲಾಭ ಪಡೆದು ಮಹಿಳೆಯರ ಚಿನ್ನಾಭರಣ ದೋಚುತ್ತಿದ್ದ ಖತರ್ನಾಕ್ ಮಹಿಳಾ ತಂಡವೊಂದನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 6.38 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಗ್ರಾಮದವರಾದ ಶಶಿ (35), ಮಾಧವಿ (40), ಅಖಿಲ (30), ಮತ್ತು ವಿದ್ಯಾ (29) ಬಂಧಿತ ಆರೋಪಿಗಳು. ಹೊಳೆನರಸೀಪುರ ಠಾಣೆ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ಈ ತಂಡ ಸಿಕ್ಕಿಬಿದ್ದಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಳ್ಳತನವಾಗಿತ್ತು. ಈ ಬಗ್ಗೆ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾಗ ಈ ತಂಡದ ಸುಳಿವು ಸಿಕ್ಕಿದೆ.

ಈ ಮಹಿಳಾ ತಂಡವು ಪ್ರಯಾಣಿಕರ ಸೋಗಿನಲ್ಲಿ ಬಸ್ ನಿಲ್ದಾಣಗಳಿಗೆ ಬರುತ್ತಿತ್ತು. ಜನರು ಗಡಿಬಿಡಿಯಲ್ಲಿ ಬಸ್ ಹತ್ತುವ ಕಡೆ ಗಮನ ಹರಿಸಿದಾಗ, ಈ ಕಳ್ಳಿಯರು ಚಿನ್ನದ ಸರ, ಮಾಂಗಲ್ಯ ಸರ, ನೆಕ್ಲೇಸ್ ಸೇರಿದಂತೆ ಚಿನ್ನಾಭರಣಗಳನ್ನು ಕಸಿದು ಪರಾರಿಯಾಗುತ್ತಿದ್ದರು.

ಬಂಧಿತ ಆರೋಪಿಗಳೆಲ್ಲರೂ ಒಂದೇ ಗ್ರಾಮದವರಾಗಿದ್ದು, ಶಶಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಉಳಿದ ಮೂವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಆದರೆ, ಇವರು ಆಗಾಗ ಬೇರೆ ಬೇರೆ ಊರುಗಳಿಗೆ ತೆರಳಿ ಇದೇ ರೀತಿ ಕಳ್ಳತನಗಳನ್ನು ಮಾಡುತ್ತಿದ್ದರು. ಈಗಾಗಲೇ ಶಶಿ ಮತ್ತು ವಿದ್ಯಾ ವಿರುದ್ಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿಯ ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.  

Tags:    

Similar News