ವಿಜಯೇಂದ್ರ- ಯತ್ನಾಳ್‌ ಔತಣಕೂಟ ರಾಜಕೀಯ; ಮಾತಿನಲ್ಲಿ ಖುಷಿ, ಒಳಗೊಳಗೋ ಬಿಸಿ

ಪರಸ್ಪರ ಎಣ್ಣೆ ಸೀಗೇಕಾಯಿಯಂತಿರುವ ಈ ಇಬ್ಬರು ನಾಯಕರು ಖುಷಿಖುಷಿಯಿಂದ ಮಾತನಾಡುತ್ತಿರುವುದನ್ನು ನೋಡಿ ಜನರೇ ಆಶ್ಚರ್ಯಗೊಂಡಿದ್ದಾರೆ. ಆಗಿದ್ದಾದರೂ ಏನು?;

By :  Anil Basur
Update: 2024-12-17 14:53 GMT
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರೆಬೆಲ್ ಶಾಸಕ ಯತ್ನಾಳ್ ಪರಸ್ಪರ ನಗುನಗುತ್ತಾ ಮಾತನಾಡುತ್ತಿರುವುದು

ರಾಜಕೀಯದಲ್ಲಿ ಯಾರೂ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎಂಬ ಜನಪ್ರೀಯ ಮಾತೊಂದಿದೆ. ರಾಜಕೀಯ ಕ್ಷೇತ್ರದಲ್ಲಿ ಯಾವಾಗ ಯಾರು ಶತ್ರುಗಳಾಗುತ್ತಾರೋ? ಯಾವಾಗ ಯಾರು ಮಿತ್ರರಾಗುತ್ತಾರೋ.. ಅಥವಾ ಮತ್ತೆ ಶತ್ರುಗಳಾಗುತ್ತಾರೋ ಎಂಬುದನ್ನು ಊಹಿಸಿಕೊಳ್ಳುವುದೂ ಕಷ್ಟ.

ಇದೀಗ ಅಂಥದ್ದೆ ಒಂದು ಪ್ರಸಂಗ ವಿಧಾನಸಭೆಯಲ್ಲಿ ಕಂಡು ಬಂದಿದೆ. ಜೊತೆಗೆ ಸದನದ ಹೊರಗೆಯೂ ಇಬ್ಬರೂ ನಾಯಕರು ಒಬ್ಬರನ್ನೊಬ್ಬರು ಸಮರ್ಥಿಸಿಕೊಂಡಿದ್ದಾರೆ.

ರಾಜ್ಯಾದ್ಯಂತ ಜನರ ಗಮನ ಸೆಳೆದಿರುವ ಇಬ್ಬರು ನಾಯಕರು ಖುಷಿಖುಷಿಯಿಂದ ಮಾತನಾಡುತ್ತಿರುವುದನ್ನು ನೋಡಿ ಜನರೇ ಆಶ್ಚರ್ಯಗೊಂಡಿದ್ದಾರೆ. ಜೊತೆಗೆ ಇಬ್ಬರೂ ಒಬ್ಬರನ್ನೊಬ್ಬರು ಸಮರ್ಥಿಸಿಕೊಂಡು ಮಾತನಾಡಿದ್ದಾರೆ. ಆ ಇಬ್ಬರು ನಾಯಕರು ಯಾರು? ಆಗಿದ್ದಾದರೂ ಏನು? ಮುಂದಿದೆ ಮಾಹಿತಿ.

ಬಿ.ವೈ. ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾದ ನಂತರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರೆಬೆಲ್ ಆಗಿದ್ದಾರೆ. ಸಮಯ ಸಿಕ್ಕಾಗೆಲ್ಲ ವಿಜಯೇಂದ್ರ ಮೇಲೆ ವಾಗ್ದಾಳಿಯನ್ನು ನಡೆಸುತ್ತಲೇ ಇದ್ದಾರೆ. ವಿಜಯೇಂದ್ರ ಕೂಡ ಯತ್ನಾಳ್ ಮೇಲೆ ಆಗಾಗ ಹರಿಹಾಯುತ್ತಾರೆ. ಆದರೆ ಈ ಇಬ್ಬರು ನಾಯಕರು ವಿಧಾನಸಭೆಯಲ್ಲಿ ಒಬ್ಬರಿಗೊಬ್ಬರು ನಮಸ್ಕರಿಸಿ ನಗುನಗುತ್ತಾ ಮಾನಾಡಿರುವ ಫೋಟೊ ಇದೀಗ ವೈರಲ್ ಆಗಿದೆ.

ಅಷ್ಟಕ್ಕೂ ಇಬ್ಬರೂ ಮಾತನಾಡಿಕೊಂಡಿದ್ದಾದರೂ ಏನು? ಇಬ್ಬರ ಮಧ್ಯದ ಮುನಿಸು ಮುಗಿದು ಹೋಯ್ತಾ ಎಂಬ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಮೂಡಿವೆ. ಹಾಗೆ ಆಗಿದೆಯಾ?

ಊಟಕ್ಕೆ ಯತ್ನಾಳ್ ಆಹ್ವಾನಿಸಿದ ವಿಜಯೇಂದ್ರ

ನಿನ್ನೆ ಸಂಜೆ (ಡಿಸೆಂಬರ್ 16, 2024) ಬಿಜೆಪಿ ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಔತಣಕೂಟ ಏರ್ಪಡಿಸಿದ್ದರು. ವಿಧಾನಸಭೆಯಲ್ಲಿದ್ದಾಗಲೇ ಎಲ್ಲ ಶಾಸಕರು ಸಿಗುತ್ತಾರೆ. ಹೀಗಾಗಿ ವಿಜಯೇಂದ್ರ ಎಲ್ಲರನ್ನು ಆಹ್ವಾನಿಸುತ್ತ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿದ್ದ ಆಸನದ ಬಳಿ ಹೋಗಿ ಮಾತನಾಡಿದ್ದಾರೆ. ಅದಕ್ಕೂ ಮೊದಲು ಬಿಜೆಪಿಯ ಮತ್ತೊಬ್ಬ ಶಾಸಕ ಅರವಿಂದ್ ಬೆಲ್ಲದ್​ರನ್ನೂ ಊಟಕ್ಕೆ ಆಹ್ವಾನಿಸಿದ್ದಾರೆ. ನಂತರ ಯತ್ನಾಳ್ ಬಳಿ ತೆರಳಿ, ಎಲ್ಲ ಶಾಸಕರಿಗೆ ಔತಣಕೂಟವನ್ನು ಏರ್ಪಡಿಸಿದ್ದೇನೆ. ನೀವು ತಪ್ಪದೆ ಬಂದು ಊಟ ಮಾಡಿ ಹೋಗಿ ಎಂದು ಆಹ್ವಾನ ಕೊಟ್ಟಿದ್ದಾರೆ. ಅದಕ್ಕೆ ಯತ್ನಾಳ್ ಕೂಡ ನೋಡೋಣ ಎಂದಿದ್ದಾರೆ. ಆದರೆ ಅವರು ವಿಜಯೇಂದ್ರ ಹಮ್ಮಿಕೊಂಡಿದ್ದ ಔತಣಕೂಟಕಕ್ಕೆ ತೆರಳಿ ಊಟ ಮಾಡಿದ್ದಾರಾ? ಇಲ್ಲ.

ಆದರೆ ವಿಜಯೇಂದ್ರ ಸಮರ್ಥಿಸಿಕೊಂಡ ಯತ್ನಾಳ್

ವಿಜಯೇಂದ್ರ ಬಿಜೆಪಿ ಶಾಸಕರಿಗೆ ಏರ್ಪಡಿಸಿದ್ದ ಔತಣಕೂಟಕ್ಕೆ ಔತಣಕೂಟಕ್ಕೆ ಶಾಸಕ ಯತ್ನಾಳ್ ಹೋಗಿಲ್ಲ. ಆದರೆ ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕ, ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ವಿಜಯೇಂದ್ರರನ್ನು ಸಮರ್ಥಿಸಿಕೊಳ್ಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಸಾಕ್ಷಿ ಸಹಿತ ಕಾಂಗ್ರೆಸ್ ನಾಯಕರ ಗಂಭೀರ ಆರೋಪ 

ವಕ್ಫ್ ವಿರುದ್ಧ ಬಿಜೆಪಿ ನಿರ್ಣಾಯಕ ಹೋರಾಟ ಮಾಡುತ್ತಿದೆ. ಇದೇ ವೇಳೆ ಬಿವೈ ವಿಜಯೇಂದ್ರ ಮೇಲೆ ಬಿಜೆಪಿ ಹಿರಿಯ ನಾಯಕ ಹಾಗೂ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ವಕ್ಫ್ ಆಸ್ತಿ ವಿಚಾರವಾಗಿ ಗಂಭೀರ ಆರೋಪ ಮಾಡಿರುವುದು ಬಹಿರಂಗವಾಗಿದೆ. ವಕ್ಫ್ ವರದಿ ಸಂದರ್ಭದಲ್ಲಿ 150 ಕೋಟಿ ರೂ.ಗಳ ಆಮಿಷ ಒಡ್ಡಿದ್ದರು ಎಂದು ಈ ಹಿಂದೆ ಮಾಣಿಪ್ಪಾಡಿ ಅಂದಿದ್ದ ಮಾತನ್ನು ಕಾಂಗ್ರೆಸ್ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಆದರೆ ಈ ವಿಚಾರದಲ್ಲಿ ವಿಜಯೇಂದ್ರ ಬೆನ್ನಿಗೆ ಯತ್ನಾಳ್ ನಿಂತಿದ್ದಾರೆ. ಜೊತೆಗೆ ವಿಜಯೇಂದ್ರರನ್ನು ಸಮರ್ಥಿಸಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿರುವ ಶಾಸಕ ಯತ್ನಾಳ್, ಮುಖ್ಯಮಂತ್ರಿ ಸಿದ್ದರಾಮಯ್ಯ ವಕ್ಫ್ ಕುರಿತು ಸಿಬಿಐ ತನಿಖೆ ಮಾಡಿಸುವ ಹೇಳಿಕೆ ಕೊಟ್ಟಿದ್ದಾರೆ. ಅವರು ಸಿಬಿಐ ತನಿಖೆ ಮಾಡಿಸಲಿ. ನಾವು ಗಟ್ಟಿಯಾಗಿದ್ದೇವೆ. ಈಗ ಸಿದ್ದರಾಮಯ್ಯಗೆ ಸಿಬಿಐ ಮೇಲೆ ನಂಬಿಕೆ ಬಂದಿದೆ. ಇನ್ನು ವಿಡಿಯೋ ಅಸಲಿಯೋ? ನಕಲಿಯೋ? ಎಂಬುದು ಇನ್ನೂ ದೃಢವಾಗಿಲ್ಲ. ರಾಜ್ಯಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದ ಆಡಿಯೊ, ವಿಧಾನಸೌಧದಲ್ಲಿ ಪಾಕಿಸ್ತಾನ್ ಎಂದು ಕೂಗಿದ್ದ ಆಡಿಯೊ ನಕಲಿ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಆಡಿಯೊ ಅಸಲಿ ಎಂದು ಎಫ್ಎಸ್ಎಲ್ ವರದಿಯಲ್ಲಿ ಬಂತು. ಹೀಗಾಗಿ ಸಿದ್ದರಾಮಯ್ಯ ಬಳಿ ಇರುವ ವಿಡಿಯೊ ನಕಲಿ ಯಾಕಾಗಿರಬಾರದು ಎಂದು ಹೇಳಿಕೆ ಕೊಡುವ ಮೂಲಕ ಬಿ.ವೈ. ವಿಜಯೇಂದ್ರರನ್ನು ಯತ್ನಾಳ್ ಸಮರ್ಥಿಸಿಕೊಂಡಿದ್ದರು.

ಬಿ.ವೈ. ವಿಜಯೇಂದ್ರಗೆ ಶುಭಾಶಯ ಕೋರಿದ್ದ ಯತ್ನಾಳ್

ಇದಕ್ಕೂ ಮುನ್ನ ಡಿಸೆಂಬರ್ 13 ರಂದು ಶುಕ್ರವಾರ ಕೂಡಾ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಶಾಸಕ ಯತ್ನಾಳ್ ಮುಖಾಮುಖಿಯಾಗಿದ್ದರು. ವಿಧಾನಸಭೆ ಸ್ಪೀಕರ್ ನೇತೃತ್ವದಲ್ಲಿ ಕಲಾಪ ಸಲಹಾ ಸಭೆಯಲ್ಲಿ ಯತ್ನಾಳ್ ಹಾಗೂ ವಿಜಯೇಂದ್ರ ಪರಸ್ಪರ ಮುಖಾಮುಖಿಯಾಗಿದ್ದರು. ಇದೇ ವೇಳೆ ವಿಜಯೇಂದ್ರಗೆ ಯತ್ನಾಳ್ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಆದರೆ ಮತ್ತೆ ಬೆಳಗಾವಿಯಲ್ಲಿ ಇಂದು (ಡಿಸೆಂಬರ್ 17, 2024) ವಿಜೆಯೇಂದ್ರ ಮೇಲೆ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ. 

ವಿಧಾನಸಭೆಯಲ್ಲಿ ನನ್ನನ್ನು ಊಟಕ್ಕೆ ಕರೆದಿದ್ದರು. ಹೋಗುವುದು ಬಿಡುವುದು ನನಗೆ ಬಿಟ್ಟ ವಿಚಾರ. ಹೊರಗೆ ನಮಸ್ಕಾರ ಮಾಡುವವರು ಒಳಗೆ ಏನು ಮಾಡುತ್ತಾರೊ ಯಾರಿಗೆ ಗೊತ್ತು? ಮುಂದೆ ನಮಸ್ಕಾರ ಮಾಡುವವರು ಬಹಳ ಡೆಂಜರ್. ಬೆಲ್ಲದ ಮಾತುಗಳನ್ನು ಆಡುವವರು ಬಹಳ ಡೆಂಜರ್ ಇರುತ್ತಾರೆ. ನಮ್ಮವರು ನಮ್ಮವರು ಅಂತಾ ಬೆನ್ನಲ್ಲೇ ಹಾಕುತ್ತಾರೆ ಎಂದು ನಿನ್ನೆ (ಡಿಸೆಂಬರ್ 16, 2024) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಔತಣಕೂಟಕ್ಕೆ ಆಹ್ವಾನಿಸಿದ್ದರ ಕುರಿತು ಬೆಳಗಾವಿಯಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Tags:    

Similar News