ಕೃತಜ್ಞತಾ ಸಮಾವೇಶದ ಮನವಿ ಪತ್ರ ಕಸದ ಬುಟ್ಟಿಯಲ್ಲಿ | ಸಿಎಂ ವಿರುದ್ಧ ಆಕ್ರೋಶ; ಇದು ಕೃತಘ್ನ ಸರ್ಕಾರ ಎಂದ ಜೆಡಿಎಸ್‌

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರು, ಸಾರ್ವಜನಿಕರಿಂದ ಸ್ವೀಕರಿಸಿದ್ದ ಮನವಿ ಪತ್ರಗಳು ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಕಸದ ರಾಶಿಯಲ್ಲಿ ಪತ್ತೆಯಾಗಿವೆ. ಮುಖ್ಯಮಂತ್ರಿಗಳ ನಿರ್ಲಕ್ಷ್ಯ ಮತ್ತು ಕಾಟಾಚಾರದ ಜನಸ್ಪಂದನಾ ಕಾರ್ಯಕ್ರಮದ ವಿರುದ್ಧ ರೈತರು ವಿಡಿಯೋ ಹಂಚಿಕೊಂಡಿದ್ದಾರೆ.

Update: 2024-07-13 08:27 GMT

ಜು.10ರಂದು ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ರೈತರು, ಆಕ್ಸಿಜನ್ ದುರಂತದ ಸಂತ್ರಸ್ತರು ಸೇರಿ ನೂರಾರು ಮಂದಿ ಸಿಎಂಗೆ ಅಹವಾಲು ಪತ್ರಗಳನ್ನು ನೀಡಿದ್ದರು. ವಿವಿಧ ಬೇಡಿಕೆಗಳ ಈಡೇರಿಕೆ ಮತ್ತು ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಮನವಿ ಸಲ್ಲಿಸಿದ್ದರು. ಆದರೆ ಸಿಎಂಗೆ ಸಲ್ಲಿಸಿದ್ದ ಮನವಿ ಪತ್ರಗಳು ಇದೀಗ ಕಸದ ರಾಶಿಯಲ್ಲಿ ಪತ್ತೆಯಾಗಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರು, ಸಾರ್ವಜನಿಕರಿಂದ ಸ್ವೀಕರಿಸಿದ್ದ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆಯಾಗಿವೆ. ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮನವಿ ಪತ್ರಗಳು ಬಿದ್ದಿವೆ. ಜನ ಸಾಮಾನ್ಯರು ಗಂಟೆಗಟ್ಟಲೆ ಕಾದು ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆಯಾಗಿವೆ. ಇದರಿಂದ ರೈತ ಸಂಘಟನೆಗಳು ಆಕ್ರೋಶಗೊಂಡಿದ್ದು, ಮುಖ್ಯಮಂತ್ರಿಗಳ ನಿರ್ಲಕ್ಷ್ಯ ಧೊರಣೆ ಮತ್ತು ಕಾಟಾಚಾರದ ಜನಸ್ಪಂದನಾ ಕಾರ್ಯಕ್ರಮಗಳ ವಿರುದ್ಧ ವಿಡಿಯೋ ಹಂಚಿಕೊಂಡಿದ್ದಾರೆ.

ರೈತರು ಹಂಚಿಕೊಂಡಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಜೆಡಿಎಸ್‌ ಪಕ್ಷ ಪೋಸ್ಟ್‌ ಮಾಡಿದ್ದು, ʻʻರೈತರ ಮನವಿ ಪತ್ರಗಳನ್ನು ಕಸದ ಬುಟ್ಟಿಗೆ ಎಸೆದ ಕೃತಜ್ಞತೆಯೇ ಇಲ್ಲದ ಸಿದ್ದರಾಮಯ್ಯ ಅವರ ಸರ್ಕಾರ! ಇದು ಕೃತಘ್ನ ಸರಕಾರʼʼ ಎಂದು ಕಿಡಿಕಾರಿದೆ.‌

ʻʻಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ನಾಡಿನ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಚಾಮರಾಜನಗರದಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ರೈತ ಮುಖಂಡರು ಮುಖ್ಯಮಂತ್ರಿಗಳಿಗೆ ಕೊಟ್ಟಿದ್ದ ಮನವಿ ಪತ್ರಗಳು ಕಸದ ಬುಟ್ಟಿಯಲ್ಲಿ ಸಿಕ್ಕಿದ್ದು, ಅನ್ನದಾತರಿಗೆ ಮಾಡಿದ ಅಪಮಾನ. ಮುಖ್ಯಮಂತ್ರಿಗಳು ಕೂಡಲೇ ಕ್ಷಮೆ ಯಾಚಿಸಬೇಕುʼʼ ಎಂದು ಆಗ್ರಹಿಸಿದೆ.

ʻʻನಾಡಿನ ರೈತರು, ಬಡವರ ಪರ ಕೃತಜ್ಞತೆ ಇಲ್ಲದ ನೀವು, ನಿಮ್ಮ ಕಾಂಗ್ರೆಸ್‌ ಪಕ್ಷ ಮತ್ತೆ ಯಾವ ಪುರುಷಾರ್ಥಕ್ಕೆ, ಚಾಮರಾಜನಗರದಲ್ಲಿ ಕೃತಜ್ಞತಾ ಸಮಾವೇಶ ನಡೆಸಿದ್ದು? ಅಧಿಕಾರಕ್ಕೆ ಏರಲು, ನೀವು ಕೊಟ್ಟ ಪೊಳ್ಳು ಭರವಸೆಗಳನ್ನು ನಂಬಿ ಕೆಟ್ಟ ರೈತರು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ರೈತರ ಸಮಸ್ಯೆಗಳನ್ನು ಕಾಲ ಕಸದಂತೆ ಕಾಣುವ ನಿಮ್ಮ ದುರಹಂಕಾರಕ್ಕೆ ನಾಡಿನ ಅನ್ನದಾತರು ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಹಿಂದೆ ಹಲವಾರು ಬಾರಿ ಪಾಠ ಕಲಿಸಿದ್ದರೂ ನಿಮಗೆ ಬುದ್ಧಿ ಬಂದಿಲ್ಲʼʼ ಎಂದು ಆಕ್ರೋಶ ವ್ಯಕ್ತಪಡಿಸಿ ರೈತರ ವಿಡಿಯೋ ಪೋಸ್ಟ್‌ ಮಾಡಿದ್ದಾರೆ.

ವಿಡಿಯೋದಲ್ಲಿ ರೈತರು ಹೇಳಿದ್ದೇನು?

ʻʻಇದು ದುರಹಂಕಾರದ ಪರಮಾವಧಿ, ಸಿದ್ದರಾಮಯ್ಯ ಅವರಿಗೆ ಇಷ್ಟೊಂದು ದುರಹಂಕಾರ ಬರಬಾರದಿತ್ತು. ನಾವು ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳ ಕುರಿತಾದ ಮನವಿ ಪತ್ರಗಳನ್ನು ಕೊಟ್ಟಿದ್ದೆವು, ಅವುಗಳನ್ನು ಕಸದ ಬುಟ್ಟಿಗೆ ಎಸೆದಿರುವುದು ಸರಿಯಲ್ಲ, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಕ್ಷಮೆ ಕೋರಬೇಕು. ಇಲ್ಲದಿದ್ರೆ ಸಿಎಂ ಜಿಲ್ಲೆಗೆ ಬಂದಾಗ ಕಪ್ಪುಬಾವುಟ ಪ್ರದರ್ಶಿಸಬೇಕಾಗುತ್ತದೆ, ಧಿಕ್ಕಾರ ಕೂಗಬೇಕಾಗುತ್ತದೆ. ನಿಮಗೆ ಮಾನ-ಮರ್ಯಾದೆ ಇದ್ದರೆ ಕೂಡಲೇ ರೈತರ ಕ್ಷಮೆ ಕೇಳಿʼʼ ಎಂದು ರೈತ ಮುಖಂಡರೊಬ್ಬರು ಎಚ್ಚರಿಕೆ ನೀಡಿದ್ದಾರೆ.

ʻʻನಮ್ಮ ಮನವಿ ಪತ್ರಗಳನ್ನು ಕಸದ ಬುಟ್ಟಿಗೆ ಎಸೆಯುವುದಾಗಿದ್ದರೆ ನಮ್ಮ ಮನವಿಗಳನ್ನು ಸ್ವೀಕರಿಸಿದ್ದಾದರು ಯಾಕೆ? ಯಾಕಿಷ್ಟೊಂದು ನಿರ್ಲಕ್ಷ್ಯ? ಸ್ವತಃ ಮುಖ್ಯಮಂತ್ರಿಯನ್ನೇ ಭೇಟಿ ಮಾಡಿ ಸಲ್ಲಿಸಿದ್ದ ಮನವಿ ಪತ್ರಗಳಿಗೆ ಈ ಗತಿಯಾದರೆ ಅಧಿಕಾರಿಗಳಿಗೆ ಸಲ್ಲಿಸುವ ಮನವಿ ಪತ್ರಗಳ ಕಥೆ ಏನು?ʼʼ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Tags:    

Similar News