Rain Damages | ಮಹಾಮಳೆಗೆ ಅಪಾರ ಬೆಳೆ ಹಾನಿ, ಬೆಂಗಳೂರಿನಲ್ಲಿ ರಸ್ತೆಗಳೇ ಮಾಯ!

ಅಬ್ಬರದ ಮಳೆಗೆ ಜನಜೀವನ ಹಾಗೂ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಬೆಳೆಗಳು ಹಾನಿಗೊಳಗಾಗಿವೆ. ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರಿನ ತಗ್ಗುಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.;

Update: 2024-10-22 10:52 GMT

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಸಾಕಷ್ಟು ಅವಾಂತರ ಸೃಷ್ಟಿಸಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರಸ್ತೆಗಳು ನದಿಗಳಂತಾದರೆ, ಬಡಾವಣೆಗಳು ದ್ವೀಪಗಳಂತಾಗಿವೆ. ಅಬ್ಬರದ ಮಳೆಗೆ ಜನಜೀವನ ಹಾಗೂ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಕಾಲಿಕ ಭೀಕರ ಮಳೆಯಿಂದಾಗಿ ಅಪಾರ ಪ್ರಮಾಣ ಬೆಳೆ ಹಾನಿ ಸಂಭವಿಸಿದೆ. 

ವಿಮಾನ ನಿಲ್ದಾಣಕ್ಕೆ ಹೋಗಲು ಪರದಾಟ

ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರಿನಲ್ಲಿ ವಾಹನ ದಟ್ಟಣೆ ಹಾಗೂ ರಸ್ತೆಗಳು ಜಲಾವೃತವಾಗಿದ್ದರಿಂದ ವಿಮಾನ ಪ್ರಯಾಣಿಕರು ನಿಗದಿತ ಅವಧಿಯಲ್ಲಿ ವಿಮಾನ ನಿಲ್ದಾಣ ತಲುಪಲು ಪರದಾಡಿದರು. ಇದರಿಂದಾಗಿ ರಾತ್ರಿ 9 ಗಂಟೆಯ ನಂತರ 20 ಕ್ಕೂ ಹೆಚ್ಚು ವಿಮಾನಗಳ ಸಂಚಾರ ವ್ಯತ್ಯಯವಾಯಿತು.


ಇಬ್ಬರು ಮಕ್ಕಳು ನಾಪತ್ತೆ

ಕೆಂಗೇರಿಯಲ್ಲಿ ಸುರಿದ ಭಾರಿ ಮಳೆಯಿಂದ ಕೊಳೆಗೇರಿಯಲ್ಲಿ ವಾಸವಿದ್ದ ಇಬ್ಬರು ಮಕ್ಕಳು ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಕೆರೆಯಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮಕ್ಕಳಿಗಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸ್‌ ಸಿಬ್ಬಂದಿ ಕೆಂಗೇರಿ ಕೆರೆಯಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಪೈಕಿ ಜಾನ್ ಸೀನಾ (13) ಎಂಬ ಬಾಲಕನ ಮೃತದೇಹ ಪತ್ತೆಯಾಗಿದ್ದು, ಮಹಾಲಕ್ಷ್ಮೀ(11) ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಕೆರೆ ಪಕ್ಕದ ಬಡಾವಣೆಯಲ್ಲಿ ವಾಸವಾಗಿದ್ದ ನಾಗಮ್ಮ ಎಂಬುವರ ಮಕ್ಕಳಾದ ಇವರು, ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಕೆಂಗೇರಿ ಕೆರೆ ಬಳಿ ನೀರು ತರಲು ಹೋಗಿದ್ದರು.

ಅಪಾರ್ಟ್ಮೆಂಟ್ ಜಲಾವೃತ

ದೊಡ್ಡಬೊಮ್ಮಸಂದ್ರ ಕೆರೆಯ ಕೋಡಿ ಒಡೆದು ಕೊಡಿಗೆಹಳ್ಳಿಯ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಹಲವಾರು ಪ್ರದೇಶಗಳಲ್ಲಿ ವಿದ್ಯುತ್, ನೀರು ಸರಬರಾಜು ಸ್ಥಗಿತವಾಗಿದೆ. ಯಲಹಂಕದಲ್ಲಿ ಗೋಡೆ ಕುಸಿದು ಅಪಾರ್ಟ್ಮೆಂಟ್ ನೆಲಮಾಳಿಗೆ ಜಲಾವೃತಗೊಂಡಿದೆ. ಇದರಿಂದ ಅಲ್ಲಿನ ನಿವಾಸಿಗಳನ್ನು ರಕ್ಷಣಾ ಸಿಬ್ಬಂದಿ ದೋಣಿ ಮೂಲಕ ಸ್ಥಳಾಂತರಿಸಿದರು.

ಕೊಡಿಗೇಹಳ್ಳಿ ಮತ್ತು ಯಲಹಂಕ ಅಂಡರ್ಪಾಸ್, ನ್ಯೂ ಬಿಇಎಲ್ ಲೇಔಟ್, ಟಾಟಾ ನಗರ, ಭದ್ರಪ್ಪ ಲೇಔಟ್, ಹೆಬ್ಬಾಳ ಸರೋವರ ಲೇಔಟ್ಗಳು ಜಲಾವೃತಗೊಂಡಿದ್ದವು. ಸಿಲ್ಕ್, ಸರ್ಜಾಪುರ ಮುಖ್ಯ ರಸ್ತೆ ಜಲಾವೃತಗೊಂಡು ತೀವ್ರ ಸಂಚಾರ ದಟ್ಟಣೆ ಎದುರಿರಾಗಿತ್ತು.


ಇನ್ನಷ್ಟು ದಿನ ಮಳೆ ಸಾಧ್ಯತೆ?

ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತದಿಂದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನಷ್ಟು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಅ.28 ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ತುಂಬಿದ ಬೆಂಗಳೂರು ಕೆರೆಗಳು

ಬೆಂಗಳೂರಿನಲ್ಲಿ ಸತತ ಮಳೆಯಿಂದಾಗಿ 14 ಕೆರೆಗಳ ತುಂಬುವ ಹಂತ ತಲುಪಿವೆ. ಕೆಂಪಾಂಬುಧಿ ಕೆರೆ ಸೇರಿದಂತೆ ಮಡಿವಾಳ, ಅಗರ, ಇಬ್ಬಲೂರು, ಸಾರಕ್ಕಿ, ಹೇರೋಹಳ್ಳಿ, ಗಾಂಧಿನಗರ ಹೊಸಕೆರೆ, ಕೆಂಚಾಪುರ, ಕೊಡಿಗೆಹಳ್ಳಿ, ಜಕ್ಕೂರು, ದಾಸರಹಳ್ಳಿ, ನೆಲಮಂಗಲ, ಶಿವಪುರ ಸೇರಿದಂತೆ ಹಲವು ಕೆರೆಗಳು ಭರ್ತಿಯಾಗಿವೆ.

ಬೆಂಗಳೂರಿನಲ್ಲಿ ಕಳೆದ ಭಾನುವಾರದಿಂದ ಸೋಮವಾರ ರಾತ್ರಿವರೆಗೆ ಭಾರೀ ಮಳೆಯಾಗಿತ್ತು. ಕೆರೆಗಳು ಭರ್ತಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ಆಯಾ ವಲಯಗಳಲ್ಲಿ ಕೆರೆದಂಡೆಗಳನ್ನು ಭದ್ರಪಡಿಸುವಂತೆ ಸೂಚಿಸಿದೆ. ಜೊತೆಗೆ ಕೆರೆಗಳ ಬಳಿ ಫೆನ್ಸಿಂಗ್ ಅಳವಡಿಸಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ವಲಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.


ದೇವನಹಳ್ಳಿಯಲ್ಲಿ ಕೊಚ್ಚಿ ಹೋದ ಕಾರುಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದೆ. ದೇವನಹಳ್ಳಿಯ ನಾಗಾರ್ಜುನ ಕಾಲೇಜು ಬಳಿ ಸೋಮವಾರ ರಾತ್ರಿ ಮಳೆ ನೀರಿನ ರಭಸಕ್ಕೆ ಎರಡು ಕಾರುಗಳು ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿವೆ.

ಹುರಳಗುರ್ಕಿ ಗ್ರಾಮದ 6 ಮಂದಿ ಕಾರಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ನೀರಿನ ರಭಸಕ್ಕೆ ಕಾರು ಕೊಚ್ಚಿಕೊಂಡು ಹೋಗಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮಳೆಯಿಂದ ಹೂವಿನ ಬೆಳೆಗಳು ಹಾಳಾಗಿವೆ. ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಸಮೀಪ ಶ್ರೀಕಾಂತ್ ಅವರ ಬೆಳೆದಿದ್ದ ಸಿಲೋಷಿಯಾ ಜಾತಿಯ ಅಲಂಕಾರಿಗಳ ಹೂಗಳು ಬುಡದಲ್ಲೇ ಕೊಳೆತು ಹಾಳಾಗಿವೆ. ಸುಮಾರು 40 ಎಕರೆಯಲ್ಲಿ ಬೆಳೆದಿದ್ದ ಬೆಳೆ ಕಣ್ಣ ಮುಂದೆಯೇ ಕೊಳೆತು ಹೋದ ಪರಿಣಾಮ ಬೇಸತ್ತು ಗಿಡಗಳನ್ನು ಸಮೇತ ಕಿತ್ತೆಸೆದಿದ್ದಾರೆ.


ಗುರು ತಿಪ್ಪೇರುದ್ರಸ್ವಾಮಿ ಮಠಕ್ಕೆ ಜಲದಿಗ್ಬಂಧನ

ಚಿತ್ರದುರ್ಗದ ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ಹೊರಮಠ, ಪೊಲೀಸ್‌ ಠಾಣೆಗೂ ಜಲದಿಗ್ಬಂಧನವಾಗಿದೆ.

ಠಾಣೆ ಆವರಣದಲ್ಲಿದ್ದ ಜೀಪ್ ಮುಳುಗಡೆಯಾಗಿದೆ. ಠಾಣೆಯೊಳಗೆ ಮಳೆ ನೀರು ನುಗ್ಗಿದ್ದು, ದಾಖಲೆಗಳನ್ನು ರಕ್ಷಿಸಿಕೊಳ್ಳಲು ಪೊಲೀಸರು ಹರಸಾಹಸಪಟ್ಟರು.

50 ಮನೆಗಳಿಗೆ ನುಗ್ಗಿದ ನೀರು

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಯರಗನಾಳ ಗ್ರಾಮದಲ್ಲಿ ಗೌಡನಕೆರೆ ಕೋಡಿ ಬಿದ್ದು 50 ಮನೆಗಳಿಗೆ ನೀರು ನುಗ್ಗಿದೆ. ರಸ್ತೆ ಬದಿ ನಿಲ್ಲಿಸಿದ್ದ ಬೈಕ್, ಕಾರುಗಳು ಮುಳುಗಡೆಯಾಗಿವೆ. ಇನ್ನು ಹಾಸನದ ಹಾಸನಾಂಬ ಬಡಾವಣೆಯೂ ಜಲದಿಗ್ಭಂಧನಕ್ಕೆ ಒಳಗಾಗಿದೆ. ಜನರು ಮನೆಗಳಿಂದ ಹೊರಬಾರಲಾಗದೇ ಪರಿತಪಿಸುತ್ತಿದ್ದಾರೆ. ತೇಜೂರು ಹಾಗೂ ಉದ್ದೂರು ಕೆರೆ ಕೋಡಿ ಬಿದ್ದಿದ್ದು, ಹಾಸನದ- ಬೇಲೂರು ರಸ್ತೆ ಬಂದ್ ಆಗಿದೆ. ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.


ಮಳೆ ಹಾನಿ ಪರಿಹಾರಕ್ಕೆ ಸಿದ್ಧತೆ-ಸಿಎಂ

ರಾಜ್ಯಾದ್ಯಂತ ವಿಪರೀತ ಮಳೆಯಾಗುತ್ತಿದ್ದು, ಮಳೆ ಅನಾಹುತಗಳಿಗೆ ಶೀಘ್ರವೇ ಪರಿಹಾರ ನೀಡಲಾಗುವುದು. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಳೆ ಅನಾಹುತಗಳ ಕುರಿತು ನಿಗಾ ವಹಿಸಿದ್ದೇವೆ. ಸ್ಥಳ ಸಮೀಕ್ಷೆ ಕೂಡ ನಡೆಯುತ್ತಿದೆ. ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪ್ರಕೃತಿ ಮುನಿಸು ತಡೆಯಲಾಗಲ್ಲ: ಡಿಕೆಶಿ

ನಿರಂತರ ಮಳೆಯಿಂದ ಬೆಂಗಳೂರಿನ ರಸ್ತೆಗಳು ಜಲಾವೃತವಾಗಿದ್ದು, ನನಗೂ ಕೂಡ ಮಳೆ ಅವಾಂತರದ ಅನುಭವವಾಗಿದೆ. ಹಾಗಾಗಿ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಡಿ.ಕೆ. ಶಿವಕುಮಾರ್ ಹೇಳಿದರು.

ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಳೆಯಿಂದ ಅನೇಕ ಅನಾಹುತಗಳಾಗಿವೆ. ದುಬೈ, ದೆಹಲಿಯಲ್ಲಿ ಏನಾಗ್ತಿದೆಯೋ ಅದೇ ಇಲ್ಲೂ ಕೂಡ ಆಗುತ್ತಿದೆ. ಪ್ರಕೃತಿಯನ್ನು ಯಾರು ತಡೆದು ನಿಲ್ಲಿಸೋಕೆ ಆಗಲ್ಲ ಎಂದು ಅಹಾಯಕತೆ ವ್ಯಕ್ತಪಡಿಸಿದರು.

ಮಳೆ ಅನಾಹುತಗಳಿಗೆ ಸ್ಪಂದಿಸಲು ಅಧಿಕಾರಿಗಳು 24 ತಾಸು ಕೆಲಸ ಮಾಡುತ್ತಿದ್ದಾರೆ. ಅವರಿಗೆ ತೊಂದರೆ ಕೊಡಲು ಇಷ್ಟಪಡುವುದಿಲ್ಲ. ಯಲಹಂಕದ ಅಪಾರ್ಟ್ ಮೆಂಟ್ ನಲ್ಲಿರುವ 64 ಕುಟುಂಬಗಳನ್ನು ಬೇರೆಡೆ ಸ್ಥಳಾಂತರಿಸಲು ಸೂಚಿಸಿದ್ದು, ತಾತ್ಕಾಲಿಕವಾಗಿ ಅಪಾರ್ಟ್ ಮೆಂಟ್ ಕ್ಲೋಸ್ ಮಾಡಲು ಸೂಚಿಸಿದ್ದೇನೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಕಾಣೆಯಾಗಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಅವರಿಗೆ ಕಾಣಿಸಲ್ಲ ಅಲ್ವಾ, ನಿಮೆಗೆ ಕಾಣಿಸ್ತಿದ್ದೀನಲ್ಲ ಬಿಟ್ಟಾಕಿ.. ಎಂದರು.

ಘಟನಾ ಸ್ಥಳಕ್ಕೆ ಹೋಗಿ ಪ್ರಚಾರ ಪಡೆಯುವುದು ದೊಡ್ಡದಲ್ಲ. ಆದರೆ, ಅದು ನನಗೆ ಬೇಡ, ನಾನು ಇಲ್ಲೇ ಕುಳಿತು ಎಲ್ಲೆಲ್ಲಿ ಅನಾಹುತ ಆಗಿದೆ. ಅಲ್ಲಿಗೆ ಶಾಶ್ವತ ಪರಿಹಾರಗಳೇನು ಎಂಬುದನ್ನು ಯೋಚಿಸುತ್ತೇನೆ ಎಂದು ತಿರುಗೇಟು ನೀಡಿದರು.


ಮಳೆ ಅವಾಂತರ; ಸರ್ಕಾರದ ವಿರುದ್ಧ ಅಶೋಕ್ ಕಿಡಿ

ಬೆಂಗಳೂರಿನಲ್ಲಿ ಮಳೆಯಿಂದಾಗಿರುವ ಅನಾಹುತಗಳ ಬಗ್ಗೆ ಪ್ರಸ್ತಾಪಿಸಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಡಿ.ಕೆ.ಶಿವಕುಮಾರ್ ಅವರನ್ನು ಪಾರ್ಟ್ ಟೈಮ್ ಬೆಂಗಳೂರು ಅಭಿವೃದ್ಧಿ ಮಂತ್ರಿ ಎಂದು ಜರೆದಿದ್ದಾರೆ.

ಬೆಂಗಳೂರಿನಲ್ಲಿ 6,000 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಪುಕ್ಕಟೆ ಪ್ರಚಾರ ಪಡೆದುಕೊಂಡು ಇನ್ನೂ ಒಂದು ತಿಂಗಳು ಕಳೆದಿಲ್ಲ. ಆದರೆ ಇವತ್ತು ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳಿದೆಯೋ ಅಥವಾ ಗುಂಡಿಗಳಲ್ಲಿ ರಸ್ತೆ ಇದೆಯೋ ಅರ್ಥವಾಗದ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನ ಜನತೆ ತಮಗೆ ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡುವಿರಾ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ರಸ್ತೆ ಗುಂಡಿ ಮುಚ್ಚುವ ನೆಪದಲ್ಲಿ ನಕಲಿ ಬಿಲ್ ಸೃಷ್ಟಿ ಮಾಡಿ ಕಮಿಷನ್ ಹೊಡೆದು ಜನರ ಹಣ ಲಪಾಟಾಯಿಸಿದ್ದೀರಾ, ಉತ್ತರ ಕೊಡಿ ಉಪಮುಖ್ಯಮಂತ್ರಿಗಳೇ, ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಇನ್ನೆಷ್ಟು ಬಂಡಲ್ ಬಿಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Similar News