BJP Infighting | ಷೋಕಾಸ್‌ ನೋಟಿಸ್‌ ಹಿಂದೆ ಮಹಾನ್‌ ನಾಯಕರ ಕೈವಾಡ: ಎಂ.ಪಿ.ರೇಣುಕಾಚಾರ್ಯ

ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಕುರಿತು ಎರಡು ತಿಂಗಳ ಹಿಂದೆಯೇ ಮಹಾನ್ ನಾಯಕರು ಮಾತನಾಡಿಕೊಂಡಿದ್ದರು. ನೋಟಿಸ್‌ಗೆ ದಾಖಲೆ ಸಹಿತ ಉತ್ತರ ಕೊಡುತ್ತೇನೆ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.;

Update: 2025-03-26 11:14 GMT

ಬಿಜೆಪಿಯ ಕೇಂದ್ರ ಶಿಸ್ತುಪಾಲನಾ ಸಮಿತಿ ನೀಡಿರುವ ಷೋಕಾಸ್ ನೋಟಿಸ್ ಹಿಂದೆ ಮಹಾನ್ ನಾಯಕರೊಬ್ಬರ ಕೈವಾಡವಿದೆ. ಇಂತಹ ನೋಟಿಸ್‌ಗೆ ನಾನು ಹೆದರುವುದಿಲ್ಲ. ದಾಖಲೆ ಸಮೇತ ನೋಟಿಸ್‌ಗೆ ಉತ್ತರ ಕೊಡುತ್ತೇನೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಕುರಿತು ಎರಡು ತಿಂಗಳ ಹಿಂದೆಯೇ ಮಹಾನ್ ನಾಯಕರು ಮಾತನಾಡಿಕೊಂಡಿದ್ದರು. ವರಿಷ್ಠರು ನೀಡಿರುವ ನೋಟಿಸ್‌ಗೆ ನಾನು ಭಯ ಬೀಳುವುದಿಲ್ಲ. ದಾಖಲೆ ಸಹಿತ ಉತ್ತರ ಕೊಡುತ್ತೇನೆ. ನೋಟಿಸ್‌ನಿಂದ ಹೆಚ್ಚು ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಪರ ಮಾತನಾಡಿದ್ದಕ್ಕೆ ನನಗೆ ನೋಟಿಸ್ ನೀಡಿದ್ದಾರೆ. ಆದರೆ, ಯಡಿಯೂರಪ್ಪ ಬಗ್ಗೆ ಹಗುರವಾಗಿ ಮಾತನಾಡಿದವರಿಗೇಕೆ ನೋಟಿಸ್‌ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಹಾನ್‌ ನಾಯಕರ ಹೆಸರು ಶೀಘ್ರ ಬಹಿರಂಗ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಇದ್ದಾಗ ಟೀಕೆಗಳು ಕೇಳಿ ಬರುತ್ತಿರಲಿಲ್ಲ. ಆದರೆ, ಯಡಿಯೂರಪ್ಪ ಮತ್ತು ವಿಜಯೇಂದ್ರ ಬಂದ ಮೇಲೆ ಟೀಕೆಗಳು ವ್ಯಾಪಕವಾಗಿವೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಇದ್ದಾಗಲು ಟೀಕೆ ಮಾಡಲಿಲ್ಲ. ಈಗ ಕೆಲ ಕೇಂದ್ರ ನಾಯಕರೇ ಯತ್ನಾಳ್ ಮೂಲಕ ಟೀಕೆ ಮಾಡಿಸುತ್ತಿದ್ದಾರೆ. ಇದನ್ನು ಸ್ವತಃ ಯತ್ನಾಳ್ ಅವರೇ ಒಪ್ಪಿಕೊಂಡಿದ್ದಾರೆ. ಪಕ್ಷದಲ್ಲಿ ಗೊಂದಲ ಸೃಷ್ಟಿಸುತ್ತಿರುವ ಆ ಮಹಾನ್ ನಾಯಕರ ಹೆಸರನ್ನು ಶೀಘ್ರವೇ ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದಾರೆ.

ಮಂಗಳವಾರ ತಡರಾತ್ರಿ ಷೋಕಾಸ್‌ ನೋಟಿಸ್ ಕೈಸೇರಿದೆ. ಕಾರ್ಯಕರ್ತರು, ಶಾಸಕರು, ಮಾಜಿ ಶಾಸಕರು ಹಾಗೂ ವೀರಶೈವ ಮುಖಂಡರು ನನಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ನಾನು ನೋಟಿಸ್‌ಗೆ ಭಯಪಟ್ಟಿಲ್ಲ, ರೇಣುಕಾಚಾರ್ಯ ಎಂದಿಗೂ ಭಯ ಬೀಳುವ ವ್ಯಕ್ತಿಯಲ್ಲ ಎಂದು ಹರಿಹಾಯ್ದಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ವಿಧಾನಸಭೆ ಹೊರಗೆ ಮತ್ತು ಒಳಗೆ ನಿರಂತರವಾಗಿ ಟೀಕೆ ಮಾಡುತ್ತಿದ್ದ ಮಹಾನ್ ನಾಯಕರಿಗೆ ಅಂದೇ ನೋಟಿಸ್ ಕೊಟ್ಟಿದ್ದರೆ ಈಗ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇಂತಹವರಿಂದಲೇ ಬಿಜೆಪಿಯು 2013 ಮತ್ತು 2023 ರಲ್ಲಿ ಅಧಿಕಾರದಿಂದ ವಂಚಿತವಾಯಿತು. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದು ತಪ್ಪು ಎಂದು ಅಂದು ನೇರವಾಗಿ ಹೇಳಿದ್ದೆ. 2019 ರಿಂದ ಇಲ್ಲಿಯವರಿಗೆ ಯಡಿಯೂರಪ್ಪ ಅವರನ್ನು ಟೀಕೆ ಮಾಡಿದವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ, ನೋಟಿಸ್ ಕೊಟ್ಟರೂ ಯಾಕೆ ಪಕ್ಷದಿಂದ ಉಚ್ಛಾಟನೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪಕ್ಷದ ವಿದ್ಯಮಾನಗಳ ಕುರಿತು ಹೈಕಮಾಂಡ್‌ಗೆ ನಾನು ಪತ್ರ ಬರೆದಿದ್ದರೆ ಪರಿಸ್ಥಿತಿ ಬೇರೆಯೇ ಆಗುತಿತ್ತು. ರಾಷ್ಟ್ರೀಯ ನಾಯಕರಿಗೆ ಗೌರವ ನೀಡಿ ಪತ್ರ ಬರೆಯುವ ಉದ್ದೇಶದಿಂದ ಹಿಂದೆ ಸರಿದೆ. ಆದರೆ, ಈಗ ಷೋಕಾಸ್ ನೋಟಿಸ್ ಜಾರಿ ಮಾಡಿದ್ದು, ಮಾತನಾಡಲು ವೇದಿಕೆ ಕೊಟ್ಟಂತೆ ಆಗಿದೆ. ಐದಾರು ವರ್ಷಗಳಿಂದ ಪಕ್ಷದಲ್ಲಿನ ಗೊಂದಲಗಳು ಮತ್ತು ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ಹೈಕಮಾಂಡ್‌ಗೆ ಪತ್ರ ಬರೆಯುತ್ತೇನೆ. ಜೊತೆಗೆ ಶಿಸ್ತು ಸಮಿತಿಗೆ ಸಮರ್ಪಕ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.

Tags:    

Similar News