ಪೆನ್ ಡ್ರೈವ್ ಪ್ರಕರಣ | ರೇವಣ್ಣ, ಪ್ರಜ್ವಲ್ ರೇವಣ್ಣಗೆ ನೋಟಿಸ್ ಜಾರಿ ಮಾಡಿದ ಎಸ್‌ಐಟಿ
ಪೆನ್ ಡ್ರೈವ್ ಲೈಂಗಿಕ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ, ಆರೋಪಿಗಳಾದ ಎಚ್ ಡಿ ರೇವಣ್ಣ ಮತ್ತು ಅವರ ಪುತ್ರ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಮಂಗಳವಾರ ನೋಟಿಸ್ ನೀಡಿದೆ.;
ಪೆನ್ ಡ್ರೈವ್ ಲೈಂಗಿಕ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ, ಆರೋಪಿಗಳಾದ ಎಚ್ ಡಿ ರೇವಣ್ಣ ಮತ್ತು ಅವರ ಪುತ್ರ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಮಂಗಳವಾರ ನೋಟಿಸ್ ನೀಡಿದೆ.
ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅವರ ನಗ್ನ ವಿಡಿಯೋ ಮತ್ತು ಫೋಟೋಗಳನ್ನು ತೆಗೆದಿಟ್ಟುಕೊಂಡಿರುವ ಮತ್ತು ಅವುಗಳನ್ನು ಪೆನ್ ಡ್ರೈವ್ ಮೂಲಕ ಬಹಿರಂಗಗೊಳಿಸಿರುವ ಗಂಭೀರ ಪೆನ್ ಡ್ರೈವ್ ಪ್ರಕರಣದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್ ಐಟಿ ರಚಿಸಿದ್ದು, ಸೋಮವಾರದಿಂದಲೇ ವಿಶೇಷ ತಂಡ ತನಿಖೆ ಕೈಗೆತ್ತಿಕೊಂಡಿದೆ.
ಹೊಳೆನರಸೀಪುರ ನಗರ ಠಾಣೆಯಲ್ಲಿ ಜೆಡಿಎಸ್ ನಾಯಕ ಹಾಗೂ ಮಾಜಿ ಸಚಿವ ಎಚ್ ಡಿ ರೇವಣ್ಣ ಮತ್ತು ಅವರ ಪುತ್ರ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅವರ ಮನೆಕೆಲಸದವರು ಎನ್ನಲಾದ ಮಹಿಳೆಯೊಬ್ಬರು ಭಾನುವಾರ ದೂರು ನೀಡಿದ್ದರು. ಲೈಂಗಿಕ ಕಿರುಕುಳದ ಆ ಆರೋಪದ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಾಗಿತ್ತು.
ಇದೀಗ ಎಸ್ ಐಟಿ, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಹೇಳಿಕೆ ದಾಖಲಿಸಲು ಆರೋಪಿಗಳಾದ ರೇವಣ್ಣ ಮತ್ತು ಪ್ರಜ್ವಲ್ ಅವರಿಗೆ ನೋಟಿಸ್ ನೀಡಿದೆ. ಸಿಆರ್ಪಿಸಿ 41(ಸಿ) ಅಡಿಯಲ್ಲಿ ನೋಟಿಸ್ ಜಾರಿಮಾಡಲಾಗಿದೆ ಎನ್ನಲಾಗಿದೆ.
ನೋಟಿಸ್ ತಲುಪಿದ 24 ತಾಸಿನಲ್ಲೇ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಆರೋಪಿಗಳಿಗೆ ಸೂಚಿಸಲಾಗಿದ್ದು, ಹಾಜರಾಗದೇ ಇದ್ದಲ್ಲಿ ಮುಂದಿನ ಕ್ರಮ ಜರುಗಿಸುವುದಾಗಿ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಹೇಳಲಾಗಿದೆ.
ಈ ನಡುವೆ, ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಕಳೆದ ಶನಿವಾರವೇ ದೇಶ ತೊರೆದಿದ್ದು, ಜರ್ಮನಿಯ ಫ್ರಾಂಕ್ಫರ್ಟ್ಗೆ ತೆರಳಿದ್ದಾರೆ ಎನ್ನಲಾಗಿದೆ.