ಪೆನ್‌ ಡ್ರೈವ್‌ ಲೈಂಗಿಕ ಹಗರಣ | ಎಸ್‌ ಐಟಿ ವಶಕ್ಕೆ ಆರೋಪಿ ಪ್ರಜ್ವಲ್‌: ನ್ಯಾಯಾಲಯದ ಆದೇಶ

Update: 2024-05-31 11:21 GMT

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಬೇಡಿಕೆಗೆ ಮನ್ನಣೆ ನೀಡಿರುವ ನ್ಯಾಯಾಲಯ, ಆರೋಪಿ ಪ್ರಜ್ವಲ್‌ನನ್ನು ಜೂನ್‌ 6 ರವರೆಗೆ ಆರು ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ವಹಿಸಿ ಆದೇಶಿಸಿದೆ.

ಶುಕ್ರವಾರ ಬೆಳಗಿನ ಜಾವ ಜರ್ಮನಿಯಿಂದ ವಾಪಸ್ಸಾಗಿದ್ದ ಆರೋಪಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದ ಎಸ್‌ಐಟಿ, ವೈದ್ಯಕೀಯ ತಪಾಸಣೆಯ ಬಳಿಕ ಸಿಟಿ ಸಿವಿಲ್‌ ಕೋರ್ಟಿಗೆ ಹಾಜರುಪಡಿಸಿತ್ತು.

ಪ್ರಕರಣದ ಕುರಿತು ವಿಚಾರಣೆಗಾಗಿ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಎಸ್‌ಐಟಿ ನ್ಯಾಯಾಧೀಶರಿಗೆ ಮನವಿ ಮಾಡಿದ್ದರು. ಆದರೆ, ಆರೋಪಿಯ ಪರ ವಕೀಲರು ಅದಕ್ಕೆ ಆಕ್ಷೇಪಿಸಿದ್ದರು. ವಾದ- ವಿವಾದ ಆಲಿಸಿದ ನ್ಯಾಯಾಲಯ ಸಂಜೆ ನಾಲ್ಕೂವರೆ ಹೊತ್ತಿಗೆ ಆದೇಶ ನೀಡಿದ್ದು, ಜೂನ್‌ 6 ರವರೆಗೆ ವಿಚಾರಣೆಗಾಗಿ ಎಸ್‌ಐಟಿ ವಶಕ್ಕೆ ವಹಿಸಿದೆ.

ಏನಿದು ಪ್ರಕರಣ?

ಈವರೆಗೆ ಒಟ್ಟು ನಾಲ್ಕು ದೂರುಗಳು ದಾಖಲಾಗಿದ್ದು, ನೂರಾರು ಮಹಿಳೆಯರ ಮೇಲೆ ಲೌಂಗಿಕ ದೌರ್ಜನ್ಯ ಎಸಗಿ, ವಿಡಿಯೋ ಮಾಡಿಟ್ಟುಕೊಂಡಿರುವ ಗಂಭೀರ ಆರೋಪ ಪ್ರಜ್ವಲ್‌ ಮೇಲಿದೆ. ಗನ್‌ ತೋರಿಸಿ, ಅತ್ಯಾಚಾರ ಎಸಗಿ, ಕೃತ್ಯವನ್ನು ಮೊಬೈಲ್‌ ನಲ್ಲಿ ಚಿತ್ರೀಕರಿಸಿ, ಅದನ್ನೇ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯೊಬ್ಬರು ಪ್ರಜ್ವಲ್‌ ವಿರುದ್ಧ ಎಸ್‌ ಐಟಿಯಲ್ಲಿ ದೂರು ದಾಖಲಿಸಿದ್ದಾರೆ.

ಲೋಕಸಭಾ ಚುನಾವಣೆಯ ಪ್ರಚಾರ ಕಾವೇರಿದ ವೇಳೆ ಪ್ರಜ್ವಲ್‌ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋಗಳನ್ನು ಒಳಗೊಂಡಿರುವ ಪೆನ್‌ ಡ್ರೈವ್‌ ಗಳು ಪ್ರಜ್ವಲ್‌ ಅಭ್ಯರ್ಥಿಯಾಗಿರುವ ಹಾಸನ ಲೋಕಸಭಾ ಕ್ಷೇತ್ರದಾದ್ಯಂತ ಹರಿದಾಡಿದ್ದವು. ಆ ಬಳಿಕ ಈ ಲೈಂಗಿಕ ಹಗರಣ ಹಾಸನವಷ್ಟೇ ಅಲ್ಲದೆ ರಾಜ್ಯದಾದ್ಯಂತ ಭಾರೀ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿತ್ತು.

ಆದರೆ, ಕಳೆದ ಏ.28 ರಂದು ಪ್ರಜ್ವಲ್‌ ವಿರುದ್ಧ ಮೊದಲ ಪ್ರಕರಣ ಹೊಳೆನರಸೀಪುರದಲ್ಲಿ ದಾಖಲಾಗಿತ್ತು. ಪ್ರಕರಣ ದಾಖಲಾದ ಬೆನ್ನಲ್ಲೇ ರಾಜ್ಯ ಸರ್ಕಾರ ಎಸ್‌ ಐಟಿ ರಚಿಸಿ ತನಿಖೆಗೆ ಚಾಲನೆ ನೀಡಿತ್ತು. ಆದರೆ, ಹಾಸನ ಲೋಕಸಭಾ ಚುನಾವಣೆಯ ಮತದಾನ ಮುಗಿದ ಮಾರನೇ ದಿನ ಏ.27ರ ಬೆಳಗಿನ ಜಾವವೇ ಪ್ರಜ್ವಲ್‌ ದೇಶ ತೊರೆದು ಜರ್ಮನಿಗೆ ಹೋಗಿ ತಲೆಮರೆಸಿಕೊಂಡಿದ್ದ. 

Tags:    

Similar News