ಪೆನ್‌ಡ್ರೈವ್ ಪ್ರಕರಣದ ಸಂತ್ರಸ್ತೆಯ ಅಪಹರಣ | ಯಾವುದೇ ಕ್ಷಣದಲ್ಲಿ ಎಚ್ ಡಿ ರೇವಣ್ಣ ಬಂಧನ?
ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಹೇಳಿರುವಂತೆ ಶನಿವಾರ ಸಂಜೆ 5 ಗಂಟೆಯೊಳಗೆ ಎಚ್.ಡಿ. ರೇವಣ್ಣ ಅವರು ಎಸ್ಐಟಿ ಮುಂದೆ ಹೇಳಿಕೆ ನೀಡಲು ಹಾಜರಾಗದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಎಸ್ಐಟಿ ನಿರ್ಧರಿಸಿದೆ.;
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಸಂತ್ರಸ್ತೆಯ ಅಪಹರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಎಚ್.ಡಿ. ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದೆ.
ಮಾಜಿ ಸಚಿವ ಹಾಗೂ ಶಾಸಕ ರೇವಣ್ಣ, ಪೊಲೀಸರ ಮುಂದೆ ಬಂದು ತಮ್ಮ ವಿರುದ್ಧ ಹೇಳಿಕೆ ದಾಖಲಿಸಬಾರದು ಎಂಬ ಕಾರಣಕ್ಕೆ ಅತ್ಯಾಚಾರ ಸಂತ್ರಸ್ತೆಯಲ್ಲಿ ಒಬ್ಬರಿಗೆ ಬೆದರಿಸಿ ತಮ್ಮ ಸಹಾಯಕ ಸತೀಶ್ ಬಾಬಣ್ಣ ಎಂಬವನ ಮೂಲಕ ಆ ಮಹಿಳೆಯನ್ನು ಅಪಹರಿಸಿರುವ ಆರೋಪ ಎದುರಿಸುತ್ತಿದ್ದಾರೆ.
ಮೈಸೂರಿನ ಪೊಲೀಸ್ ಠಾಣೆಯೊಂದರಲ್ಲಿ ಸಂತ್ರಸ್ತೆಯ ಪುತ್ರ, ರೇವಣ್ಣ ಮತ್ತು ಅವರ ಸಹಾಯಕನ ವಿರುದ್ಧ ದಾಖಲಿಸಿರುವ ಅಪಹರಣ ಪ್ರಕರಣದ ಸಂಬಂಧ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನೀರೀಕ್ಷಣಾ ಜಾಮೀನು ಸಲ್ಲಿಸಿದ್ದಾರೆ. ಈ ಸಂಬಂಧ ನ್ಯಾಯಾಲಯ ಶನಿವಾರ ಸಂಜೆಯೊಳಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಈ ನಡುವೆ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಹೇಳಿರುವಂತೆ ಶನಿವಾರ ಸಂಜೆ 5 ಗಂಟೆಯೊಳಗೆ ಎಚ್.ಡಿ. ರೇವಣ್ಣ ಅವರು ಎಸ್ಐಟಿ ಮುಂದೆ ಹೇಳಿಕೆ ನೀಡಲು ಹಾಜರಾಗದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಎಸ್ಐಟಿ ನಿರ್ಧರಿಸಿದೆ.
ಮೂಲಗಳ ಪ್ರಕಾರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡದೇ ಇದ್ದರೆ ಎಸ್ ಐಟಿ, ರೇವಣ್ಣ ಬಂಧಿಸಲು ಮುಂದಾಗಲಿದೆ. ಜತೆಗೆ ಒಂದು ವೇಳೆ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದ್ದೇ ಆದಲ್ಲಿ, ಹೇಳಿಕೆ ನೀಡಲು ಹಾಜರಾಗದೆ ತನಿಖೆಗೆ ಸಹಕರಿಸಿಲ್ಲ ಎಂಬ ಕಾರಣಕ್ಕೆ ಎಸ್ಐಟಿ ವಶಕ್ಕೆ ಪಡೆಯಲೂ ಅವಕಾಶವಿದೆ.
ಈ ನಡುವೆ ಎಸ್ಐಟಿ ಸದ್ಯಕ್ಕೆ “ತಲೆಮರೆಸಿಕೊಂಡಿರುವ” ಆರೋಪಿ ಎಚ್ ಡಿ ರೇವಣ್ಣ ಅವರು ತನಿಖೆಗೆ ಹಾಜರಾಗದೆ ತಪ್ಪಿಸಿಕೊಂಡರೆ ವಿಶೇಷ ತಂಡ ರಚಿಸಿ ಬಂಧಿಸಲು ಕ್ರಮಕೈಗೊಳ್ಳಲಾಗಿದೆ. ಒಂದು ವೇಳೆ ಬಂಧನವಾಗಿದ್ದೇ ಆದರೆ, ಮುಂದಿನ ಕ್ರಮಗಳಿಗಾಗಿ ಹಾಗೂ ವಶಕ್ಕೆ ಪಡೆದ ವ್ಯಕ್ತಿಯ ಆರೋಗ್ಯ ತಪಾಸಣೆಗಾಗಿ ಬೇಕಾಗಿರುವ ತಜ್ಞ ವೈದ್ಯರನ್ನೂ ಪೊಲೀಸ್ ಅಧಿಕಾರಿಗಳು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.