ಪರಿಷತ್‌ ಚುನಾವಣೆ | ಬಿಜೆಪಿ ಅಭ್ಯರ್ಥಿ ಘೋಷಣೆ, ಜೆಡಿಎಸ್‌ ಅಭ್ಯರ್ಥಿಗೆ ಬಿ ಫಾರ್ಮ್‌: ಮೈತ್ರಿಯಲ್ಲಿ ಗೊಂದಲ

ಜೆಡಿಎಸ್‌ ಮತ್ತು ಬಿಜೆಪಿ ವರಿಷ್ಠರ ನಡುವೆ ನಡೆದ ಈ ಸ್ಥಾನ ಹಂಚಿಕೆಯ ಬಗ್ಗೆ ಜೆಡಿಎಸ್‌ ಆಕಾಂಕ್ಷಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೊನೇ ಕ್ಷಣದಲ್ಲಿ ಜೆಡಿಎಸ್‌ ಹೆಚ್ಚುವರಿಯಾಗಿ ಮತ್ತೊಂದು ಸ್ಥಾನ ಪಡೆದುಕೊಂಡಿದೆ. ಹಾಗಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ದಿಢೀರ್‌ ಬದಲಾವಣೆಯಾಗಿದೆ.

Update: 2024-05-15 08:06 GMT

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡಿದ ಬಿಜೆಪಿ ಮತ್ತು ಜೆಡಿಎಸ್‌ ನ ಎನ್‌ಡಿಎ ಮೈತ್ರಿಕೂಟ, ಆ ಚುನಾವಣೆಯ ಬೆನ್ನಲ್ಲೇ ಬಂದಿರುವ ವಿಧಾನ ಪರಿಷತ್‌ ಚುನಾವಣೆಯ ಹೊತ್ತಿಗಾಗಲೇ ಗೊಂದಲಕ್ಕೀಡಾಗಿದೆ.

ಜೂನ್ 3 ರಂದು ಆರು ಸ್ಥಾನಗಳಿಗೆ ನಡೆಯಲಿರುವ ಪದವೀಧರ,‌ ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್‌ ಚುನಾವಣೆ ಅಭ್ಯರ್ಥಿಗಳ ವಿಷಯದಲ್ಲಿ ಉಭಯ ಪಕ್ಷಗಳ ನಡುವೆ ಹೊಂದಾಣಿಕೆಯ ಕೊರತೆಗೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯ ದಿಢೀರ್‌ ಬದಲಾವಣೆ ಸಾಕ್ಷಿಯಾಗಿದೆ. ವಾಸ್ತವವಾಗಿ ಸೀಟು ಹಂಚಿಕೆಯ ವಿಷಯದಲ್ಲೇ ಎರಡೂ ಪಕ್ಷಗಳ ನಡುವೆ ಗೊಂದಲ ಏರ್ಪಟ್ಟಿದ್ದು, ಆರಂಭದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಐದು ಮತ್ತು ಒಂದು ಸ್ಥಾನದ ಲೆಕ್ಕದಲ್ಲಿ ಸ್ಥಾನ ಹಂಚಿಕೆಯಾಗಿತ್ತು.

ಜೆಡಿಎಸ್‌ ಮತ್ತು ಬಿಜೆಪಿ ವರಿಷ್ಠರ ನಡುವೆ ನಡೆದ ಈ ಸ್ಥಾನ ಹಂಚಿಕೆಯ ಬಗ್ಗೆ ಜೆಡಿಎಸ್‌ ಆಕಾಂಕ್ಷಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೊನೇ ಕ್ಷಣದಲ್ಲಿ ಜೆಡಿಎಸ್‌ ಹೆಚ್ಚುವರಿಯಾಗಿ ಮತ್ತೊಂದು ಸ್ಥಾನ ಪಡೆದುಕೊಂಡಿದೆ. ಹಾಗಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ದಿಢೀರ್‌ ಬದಲಾವಣೆಯಾಗಿದೆ.

ಚುನಾವಣೆ ನಡೆಯಲಿರುವ ಆರು ಸ್ಥಾನಗಳ ಪೈಕಿ, ಈ ಮೊದಲು ಬಿಜೆಪಿ 5 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿತ್ತು. ಒಂದು ಸ್ಥಾನವನ್ನು ಮಿತ್ರ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು. ಅದರಂತೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಈ ಸಿ. ನಿಂಗರಾಜ್ ಗೌಡ ಅವರಿಗೆ ಟಿಕೆಟ್ ಘೋಷಿಸಲಾಗಿತ್ತು. ಆದರೆ ಇದೀಗ ಅದೇ ಕ್ಷೇತ್ರಕ್ಕೆ ಮಂಡ್ಯದ ವಿವೇಕಾನಂದ ಅವರಿಗೆ ಜೆಡಿಎಸ್‌ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬುಧವಾರ ಬೆಳಿಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಬಿ ಫಾರಂ ವಿತರಿಸಿದ್ದಾರೆ. 

ಮೇ 12ರಂದು ಬಿಜೆಪಿ ಪ್ರಕಟಿಸಿದ್ದ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಈ ಸಿ. ನಿಂಗರಾಜ್ ಗೌಡ ಅವರಿಗೆ ಟಿಕೆಟ್ ಘೋಷಿಸಲಾಗಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಜೆಡಿಎಸ್‌ ನಾಯಕರ ಒತ್ತಾಯದಂತೆ ಕ್ಷೇತ್ರವನ್ನು ಬಿಟ್ಟು ಕೊಡಲಾಗಿದೆ. ಆ ಕ್ಷೇತ್ರಕ್ಕೆ ವಿಧಾನಪರಿಷತ್‌ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಹಾಗೂ ವಿವೇಕಾನಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಇವರಲ್ಲಿ ವಿವೇಕಾನಂದ ಅವರು ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಾಗಿ ಬಿಜೆಪಿ ಹೈಕಮಾಂಡ್ ಸಮ್ಮತಿ ಸೂಚಿಸಿದೆ ಎಂದು ಜೆಡಿಎಸ್‌ ನಾಯಕರು ಈ ಹಿಂದೆಯೇ ಹೇಳಿದ್ದರು. ಆದರೆ ರಾಜ್ಯ ಬಿಜೆಪಿ ನಾಯಕರು ಆ ಕ್ಷೇತ್ರಕ್ಕೆ ನಿಂಗರಾಜ್ ಗೌಡ ಅವರ ಹೆಸರು ಘೋಷಿಸಿದ್ದರು. ಆದರೆ ಇದೀಗ ಬಿಜೆಪಿಯ ನಿಂಗರಾಜ್‌ ಗೌಡ ಅವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ವಿವೇಕಾನಂದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎಂದು ಜೆಡಿಎಸ್‌ ಮುಖಂಡರು ಹೇಳಿದ್ದಾರೆ. ಅದರಂತೆ ಮೇ 16ಕ್ಕೆ ಜೆಡಿಎಸ್ ಅಭ್ಯರ್ಥಿ ವಿವೇಕಾನಂದ ನಾಮಪತ್ರ ಸಲ್ಲಿಸಲು ಎಲ್ಲಾ ಸಿದ್ದತೆ ನಡೆಸಿದ್ದಾರೆ.

ಕಾಂಗ್ರೆಸ್‌ನಿಂದ ಮರಿತಿಬ್ಬೇಗೌಡ ಕಣಕ್ಕೆ

ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿಯಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಹಾಲಿ ಪರಿಷತ್ ಸದಸ್ಯ ಮರಿತಿಬ್ಬೇ ಗೌಡ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಖುದ್ದು ಸಿಎಂ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಮೈಸೂರು ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಜರಿದ್ದಿದ್ದರು.

ಮರಿತಿಬ್ಬೇಗೌಡ ಅವರು ಕಳೆದ ಬಾರಿ ಈ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಜಯ ಗಳಿಸಿದ್ದರು. ಆದರೆ, ಲೋಕಸಭಾ ಚುನಾವಣೆಗೆ ಮುನ್ನ ಜೆಡಿಎಸ್‌ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿದ್ದರು. 

Tags:    

Similar News