Parashurama Theme Park| ಕಾರ್ಕಳ ಪೊಲೀಸ್ ಠಾಣೆ ಗೋದಾಮಿನಲ್ಲಿ ಬಿದ್ದ ಛಿದ್ರ ಪರಶುರಾಮ ವಿಗ್ರಹ
ಕಾರ್ಕಳದ ಉಮಿಕಲ್‌ಬೆಟ್ಟದ ಮೇಲೆ ನಿರ್ಮಾಣವಾಗಿರುವ ಪರಶುರಾಮ ಥೀಮ್‌ಪಾರ್ಕ್‌ನಲ್ಲಿ ಸ್ಥಾಪಿಸಲಾದ ವಿವಾದಿತ ಪರಶುರಾಮ ಪ್ರತಿಮೆ ಬಿಡಿಬಿಡಿಯಾಗಿ ಇದೀಗ ಕಾರ್ಕಳ ಪೊಲೀಸ್‌ಠಾಣೆಯ ಗೋದಾಮಿನಲ್ಲಿ ರಾಶಿ ಬಿದ್ದಿದೆ
ಕಾರ್ಕಳದ ಇಲ್ಲಿನ ಬೈಲೂರು ಸಮೀಪ ಉಮಿಕಲ್‌ಬೆಟ್ಟದ ಮೇಲೆ ನಿರ್ಮಾಣವಾಗಿರುವ ಪರಶುರಾಮ ಥೀಮ್‌ಪಾರ್ಕ್‌ನಲ್ಲಿ ಸ್ಥಾಪಿಸಲಾದ ವಿವಾದಿತ ಪರಶುರಾಮ ಪ್ರತಿಮೆ ಬಿಡಿಬಿಡಿಯಾಗಿ ಇದೀಗ ಕಾರ್ಕಳ ಪೊಲೀಸ್‌ಠಾಣೆಯ ಗೋದಾಮಿನಲ್ಲಿ ರಾಶಿ ಬಿದ್ದಿದೆ.
ಈ ವಿಗ್ರಹವನ್ನು ಬೆಂಗಳೂರಿನ ಕೆಂಗೇರಿಯ ನಿರ್ಮಾಣ ಸ್ಥಳದಿಂದ ಕಲಾವಿದ ಕೃಷ್ಣ ನಾಯ್ಕ್‌ಅವರಿಗೆ ಸೇರಿದ ಕಾರ್ಯಾಗಾರದಿಂದ ತರಲಾಗಿದೆ. ಕಾರ್ಕಳ ಪೊಲೀಸರು ಬೆಂಗಳೂರು ಪೊಲೀಸರ ನೆರವಿನಿಂದ ಈ ವಿಗ್ರಹದ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್‌ಭದ್ರತೆಯಲ್ಲಿ ವಿಗ್ರಹವನ್ನು ಕಾರ್ಕಳ ಗ್ರಾಮಾಂತರ ಠಾಣೆ ಆವರಣಕ್ಕೆ ತರಲಾಗಿದೆ. ವಿಗ್ರಹದ ಭಾಗಗಳು ಕಾಣದಂತೆ ಅವುಗಳ ಮೇಲೆ ಟಾರ್ಪಾಲ್‌ಹೊದೆಸಲಾಗಿದೆ.
ಕಂಚಿನ ಪ್ರತಿಮೆ- ಫೈಬರ್‌ಸಾಮಗ್ರಿ ವಿವಾದ
33 ಅಡಿ ಎತ್ತರದ ಈ ಪ್ರತಿಮೆಯನ್ನು 2023ರ ಜನವರಿ ೨೭ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ್ದರು. ಅದುವರೆಗೆ ಪರಶುರಾಮ ವಿಗ್ರಹ ಕಂಚಿನದ್ದು ಎಂದೇ ಹೇಳಲಾಗಿತ್ತು. 15 ಟನ್‌ಭಾರವಿದೆ ಎಂಬ ವಿವರವೂ ಇತ್ತು. ಉದ್ಘಾಟನೆಯ ಬಳಿಕ ಯೋಜನೆಯ ಕಾಮಗಾರಿ ನಡೆಸಿದ್ದ ಉಡುಪಿಯ ನಿರ್ಮಿತಿ ಕೇಂದ್ರವು ಅದನ್ನು ತೆರವುಗೊಳಿಸಲು ಮುಂದಾಗಿತ್ತು. ಕೆಲವು ಹಿಂದೂ ಸಂಘಟನೆಗಳ ನಾಯಕರು ಹಾಗೂ ಕಾಂಗ್ರೆಸ್‌ಮುಖಂಡರು ಪರಶುರಾಮ ಪ್ರತಿಮೆ ನಿರ್ಮಾಣ ಸಾಮಗ್ರಿಯ ಮೇಲೆ ಆಕ್ಷೇಪ ಎತ್ತಿ, ಪರೀಕ್ಷೆಗೊಳಪಡಿಸಿದ್ದರು. ಸಾಕಷ್ಟು ವಿವಾದಕ್ಕೀಡಾದ ಈ ಪ್ರತಿಮೆ ಕೊನೆಗೂ ಫೈಬರ್‌ನಿರ್ಮಾಣ ಎಂಬುದು ಬಹಿರಂಗಗೊಂಡಿತ್ತು. ಇಡೀ ಪ್ರಕರಣ ಶಾಸಕ ಸುನೀಲ್‌ಕುಮಾರ್‌ಅವರ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿತ್ತು. ಕಾಂಗ್ರೆಸ್‌ಇದನ್ನು ಚುನಾವಣಾ ಅಸ್ತ್ರವನ್ನಾಗಿಯೂ ಬಳಸಿತು. ಮಾತ್ರವಲ್ಲ, ಬಿಜೆಪಿ ಕಾರ್ಯಕರ್ತರು ಮತ್ತು ಹಿಂದೂ ಮುಖಂಡರಲ್ಲಿ ಶಾಸಕರ ಬಗ್ಗೆ ತೀವ್ರ ಅಸಮಾಧಾನ ಮೂಡುವಂತೆ ಮಾಡಿತ್ತು. ಇದರಿಂದ ಒಂದಿಷ್ಟು ಮಂದಿ ಪ್ರಮೋದ್‌ಮುತಾಲಿಕ್‌ಅವರ ಶ್ರೀರಾಮಸೇನೆಯತ್ತ ವಾಲಿ, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುತಾಲಿಕ್‌ಅವರನ್ನು ಬೆಂಬಲಿಸಿದ್ದರು. ಸ್ವತಃ ಮುತಾಲಿಕ್‌ಅವರೂ ಕೂಡಾ ತಮ್ಮ ಶಿಷ್ಯ ಸುನೀಲ್‌ಕುಮಾರ್‌ಮೇಲೆ ಆರೋಪ ಮಾಡಿ ಅವರ ಕಾರ್ಯವೈಖರಿ ಮೇಲೆ ಬೇಸರ ಹೊರಹಾಕಿದ್ದರು.
ಪರಶುರಾಮನ ಕೊಡಲಿಗೆ ಮೊದಲ ʼಬಲಿʼ
ಪ್ರತಿಮೆಯ ವಿವಾದ ತಾರಕಕ್ಕೇರಿತು. ನಲ್ಲೂರಿನ ನಿವಾಸಿ ಕೃಷ್ಣ ಅವರು ಈ ವರ್ಷ ಫೆ. 7 ರಂದು ಈ ಬಗ್ಗೆ ಪೊಲೀಸ್‌ದೂರು ದಾಖಲಿಸಿದ್ದರು. ಕಾಂಗ್ರೆಸ್‌ಸರ್ಕಾರ ಈ ಪ್ರಕರಣವನ್ನು ತನಿಖೆಗೊಳಪಡಿಸಿತು. ತನಿಖಾ ಹಂತದಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್‌ಕುಮಾರ್‌ಅವರನ್ನು ಅಮಾನತುಗೊಳಿಸಲಾಗಿತ್ತು. ಅವ್ಯವಹಾರ ಆರೋಪದ ಈ ಪ್ರಕರಣವನ್ನು ಸರ್ಕಾರ ಸಿಒಡಿ ತನಿಖೆಗೆ ಒಪ್ಪಿಸಿದೆ. ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲೂ ತನಿಖೆ ನಡೆಯುತ್ತಿದೆ.
ಶನಿವಾರ ಕಾರ್ಕಳ ಪೊಲೀಸರು ಈ ಪ್ರತಿಮೆ ನಿರ್ಮಿಸಿದ ಶಿಲ್ಪಿ ಕೃಷ್ಣ ನಾಯ್ಕ್‌ಅವರ ಕ್ರಿಷ್‌ಆರ್ಟ್‌ವರ್ಲ್ಡ್‌ನ ಕಾರ್ಯಾಗಾರಕ್ಕೆ ತೆರಳಿ ಪ್ರತಿಮೆಯ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ.
ʼಪೊಲೀಸರು ನೊಟೀಸ್‌ನೀಡದೇ ಬಲವಂತವಾಗಿ ವಿಗ್ರಹವನ್ನು ಜಪ್ತಿ ಮಾಡಿ ಒಯ್ದಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ಮುಖಂಡ ಉದಯ ಕುಮಾರ್‌ಶೆಟ್ಟಿ ಅವರು ತಮಗೆ ಬೆದರಿಕೆ ಹಾಕಿದ್ದಾರೆʼ ಎಂದು ಕೃಷ್ಣ ನಾಯ್ಕ ಅವರು ಆರೋಪಿಸಿದ್ದಾರೆ.
ಆದರೆ ಈ ಆರೋಪವನ್ನು ನಿರಾಕರಿಸಿರುವ ಉಡುಪಿಯ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಡಾ.ಅರುಣ್, ʼಪ್ರತಿಮೆಯ ಭಾಗಗಳನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಿ, ವಶಪಡಿಸಿಕೊಂಡಿದ್ದೇವೆ. ಸ್ಥಳಕ್ಕೆ ದೂರುದಾರರನ್ನು ಕರೆದಿದ್ದೆವು. ಅವರೂ ಬಂದು ಸಹಿ ಹಾಕಿದ್ದರು. ವಿಗ್ರಹ ನಿರ್ಮಾಣ ಮಾಡಿದವರಿಗೂ (ಕೃಷ್ಣ ನಾಯ್ಕ) ನೊಟೀಸ್‌ನೀಡಲಾಗಿತ್ತು. ಜಪ್ತಿ ಪ್ರಕ್ರಿಯೆಯನ್ನು ಅನ್ನಪೂರ್ಣೇಶ್ವರಿ ನಗರದ ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆʼ ಎಂದು ಸ್ಪಷ್ಟಪಡಿಸಿದರು.
6 ಕೋಟಿ ಅಲ್ಲ 1.25 ಕೋಟಿ
ಟಿವಿ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿರುವ ಕೃಷ್ಣ ನಾಯ್ಕ ಅವರು, ʼಈ ಪ್ರತಿಮೆ ನಿರ್ಮಿಸಲು ನಾನು ೬ ಕೋಟಿ ರೂಪಾಯಿ ಪಡೆದಿದ್ದೇನೆ ಎಂದು ಆರೋಪಿಸಲಾಗುತ್ತಿದೆ. ವಾಸ್ತವವಾಗಿ ಮಾತುಕತೆ ಪ್ರಕಾರ ೨ ಕೋಟಿ ರೂಪಾಯಿಗೆ ವಿಗ್ರಹ ನಿರ್ಮಾಣ ಮಾಡಲು ಒಪ್ಪಿಗೆ ನೀಡಿದ್ದೆ. ಆದರೆ ನನಗೆ ಕೇವಲ 1.25 ಕೋಟಿ ರೂಪಾಯಿ ಪಾವತಿ ಆಗಿದೆ. ಈ ವಿವಾದ, ಆರೋಪಗಳ ಹಿನ್ನೆಲೆಯಲ್ಲಿ ಆ ಹಣವನ್ನೂ ವಾಪಸ್‌ಕೊಡುತ್ತೇನೆ. ಈ ಯೋಜನೆ, ಅಪವಾದಗಳು ನನಗೆ ಬೇಡ. ಇಡೀ ಪ್ರಕರಣದಿಂದ ನನ್ನನ್ನು ಹೊರಗಿಡಿ ಎಂದು ಕೇಳಿದ್ದೇನೆ. ಅದ್ಯಾವುದಕ್ಕೂ ಸ್ಪಂದಿಸದ ಆಡಳಿತ ವ್ಯವಸ್ಥೆ ಈ ರೀತಿ ತೊಂದರೆ ಕೊಡುತ್ತಿದೆʼ ಎಂದು ದೂರಿದರು.
ಅಂತೂ ವಾದ ವಿವಾದಗಳು ಮುಂದುವರಿಯುತ್ತಲೇ ಇದೆ. ಹಿಂದುತ್ವದ ಹೆಸರಿನಲ್ಲಿ ಮತಬ್ಯಾಂಕ್‌ಸೃಷ್ಟಿಸುವ ಯತ್ನದಲ್ಲಿ ಯಶಸ್ವಿಯಾದ ಬಿಜೆಪಿ, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಹೆಸರಿನಲ್ಲಿ 2004ರಿಂದ ತನ್ನ ಖಾತೆ ತೆರೆದಿತ್ತು. ಮೂರನೇ ಬಾರಿಗೆ ಆಯ್ಕೆಯಾಗಿರುವ ಶಾಸಕ, ಮಾಜಿ ಸಚಿವ ವಿ. ಸುನೀಲ್‌ಕುಮಾರ್‌ಈಗ ಈ ಆರೋಪವನ್ನು ಕೇಳಬೇಕಾಗಿದೆ. ಆರೋಪಗಳಿಗೆ ಶಾಸಕರು ಅತ್ಯಂತ ಕಟುವಾಗಿ ಪ್ರತಿಕ್ರಿಯಿಸಿದ ಘಟನೆಗಳೂ ನಡೆದಿವೆ
ಅಂತೂ ಛಿದ್ರ ಪರಶುರಾಮ ಠಾಣೆಯ ಆವರಣದಲ್ಲಿ ಬಿದ್ದಿದ್ದಾನೆ. ಕಂಚಿನ ಪರಶುರಾಮ ಎದ್ದು ನಿಲ್ಲುತ್ತಾನೋ ಅಥವಾ ಈ ಪ್ರಕರಣದಲ್ಲಿ ಇನ್ನೆಷ್ಟು ಜನರ ಮೇಲೆ ʼಕೊಡಲಿ ಬೀಸುತ್ತಾನೋʼ ಎಂಬ ಕುತೂಹಲ ಉಳಿದಿದೆ.