Bangalore Palace Land | ಮೈಸೂರು ರಾಜಮನೆತನ, ಸರ್ಕಾರ ಮತ್ತು ಟಿಡಿಆರ್: ಸುಪ್ರೀಂ ಗಡುವು ತಂದ ಸಂಕಷ್ಟ
ಅಭಿವೃದ್ಧಿ ಹಕ್ಕು ಪರಿಹಾರ (ಟಿಡಿಆರ್)ದಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಸುಗ್ರೀವಾಜ್ಞೆಗೂ ಸೊಪ್ಪು ಹಾಕದ ಸುಪ್ರೀಂಕೋರ್ಟ್, ರಾಜ್ಯ ಸರ್ಕಾರಕ್ಕೆ ಟಿಡಿಆರ್ ಪ್ರಮಾಣ ಪತ್ರ ಠೇವಣಿ ಇರಿಸಲು ಒಂದು ವಾರದ ಗಡುವು ನೀಡಿದೆ.;
ಬೆಂಗಳೂರು ಅರಮನೆ ಮೈದಾನದ ಜಮೀನು ವಿವಾದ ರಾಜ್ಯ ಸರ್ಕಾರ ಹಾಗೂ ಮೈಸೂರು ರಾಜಮನೆತನದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.
ಅಭಿವೃದ್ಧಿ ಹಕ್ಕು ಪರಿಹಾರ (ಟಿಡಿಆರ್)ದಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಸುಗ್ರೀವಾಜ್ಞೆಗೂ ಸೊಪ್ಪು ಹಾಕದ ಸುಪ್ರೀಂಕೋರ್ಟ್, ರಾಜ್ಯ ಸರ್ಕಾರಕ್ಕೆ ಟಿಡಿಆರ್ ಪ್ರಮಾಣ ಪತ್ರ ಠೇವಣಿ ಇರಿಸಲು ಒಂದು ವಾರದ ಗಡುವು ನೀಡಿದೆ. ಆದರೆ, ಯಾವುದೇ ಕಾರಣಕ್ಕೂ ಟಿಡಿಆರ್ ಮೊತ್ತ ಪಾವತಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಇದೀಗ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಅರಮನೆ ವಿವಾದ ಏನು, ಅಭಿವೃದ್ಧಿ ಹಕ್ಕು ಪರಿಹಾರ ನೀಡಲು ನಿರ್ದೇಶಿಸಿದ್ದೇಕೆ, ರಾಜ್ಯ ಸರ್ಕಾರದ ನಿಲುವೇನು ಎಂಬ ಮಾಹಿತಿ ಇಲ್ಲಿದೆ.
ಅರಮನೆ ಭೂ ವಿವಾದ ಏನು?
ಬೆಂಗಳೂರು ಮೇಖ್ರಿ ವೃತ್ತದಲ್ಲಿ ವಾಹನ ದಟ್ಟಣೆ ತಡೆಯುವ ಸಲುವಾಗಿ ರಾಜ್ಯ ಸರ್ಕಾರ ಬಳ್ಳಾರಿ ಹಾಗೂ ಜಯಮಹಲ್ ರಸ್ತೆ ವಿಸ್ತರಣೆಗೆ ನಿರ್ಧರಿಸಿತ್ತು. ರಸ್ತೆ ಅಗಲೀಕರಣಕ್ಕಾಗಿ ಅರಮನೆ ಮೈದಾನದ 15 ಎಕರೆ ಭೂಮಿ ಸ್ವಾಧೀನಕ್ಕೆ ಮುಂದಾಗಿತ್ತು. ಅದಕ್ಕಾಗಿ ಬೆಂಗಳೂರು ಅರಮನೆ ಸ್ವಾಧೀನ ಕಾಯ್ದೆಯಡಿ ಅಧಿಸೂಚನೆ ಹೊರಡಿಸಿ, ಕಾಮಗಾರಿಗೆ ಮುಂದಾಗಿತ್ತು. ಇದು ಮೈಸೂರು ರಾಜ ಮನೆತನ ಹಾಗೂ ರಾಜ್ಯ ಸರ್ಕಾರದ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿ ವಿವಾದದ ರೂಪ ಪಡೆದಿತ್ತು.
ವಿವಾದದ ಹಿನ್ನೆಲೆ ಏನು ?
1796ರಲ್ಲಿ ರಾಜ್ಯ ಸರ್ಕಾರ 427 ಎಕರೆ ಮತ್ತು 16 ಗುಂಟೆ ಸ್ಥಳವನ್ನು ಬೆಂಗಳೂರು ಅರಮನೆ ಸ್ವಾಧೀನ ಕಾಯ್ದೆಯ ಮೂಲಕ ಸ್ವಾಧೀನಕ್ಕೆ ಪಡೆದಿತ್ತು. ಅಧಿನಿಯಮ 1996ರ 8 ಮತ್ತು 9ನೇ ಪ್ರಕರಣದ ಅನ್ವಯ 11 ಕೋಟಿ ರೂ.ಎಂದು ನಿರ್ಧರಿಸಲಾಗಿತ್ತು. ಆಗ ಮೈಸೂರು ಮಹಾರಾಜರ ಉತ್ತರಾಧಿಕಾರಿಗಳು ಮತ್ತು ಬೆಂಗಳೂರು ಅರಮನೆ ಮತ್ತು ಜಮೀನಿನಲ್ಲಿ ಪಾಲು ಇದೆಯೆಂದು ಹೇಳಿ ಕಾಯ್ದೆಯನ್ನು ಪ್ರಶ್ನಿಸಿದ್ದರು. ಈ ರಿಟ್ ಅರ್ಜಿಗಳನ್ನು 1997ರ ಮಾರ್ಚ್ ತಿಂಗಳಲ್ಲಿ ಹೈಕೋರ್ಟ್ ವಜಾ ಮಾಡಿ ಸ್ವಾಧೀನ ಕಾಯ್ದೆಯನ್ನು ಎತ್ತಿ ಹಿಡಿದಿತ್ತು.
ರಾಜಮನೆತನದ ಉತ್ತರಾಧಿಕಾರಿಗಳು ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದರು. 1997ರಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿತ್ತು.
ಜಯಮಹಲ್ ರಸ್ತೆ ಅಗಲೀಕರಣ ಸಂಬಂಧವೂ ಇತ್ತೀಚಿಗೆ ಮತ್ತೊಂದು ಮಧ್ಯಂತರ ಆದೇಶ ನೀಡಿ, ಮೇಖ್ರಿ ವೃತ್ತದ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಅರಮನೆ ಜಾಗ ಬಳಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿತ್ತು.
ಅಭಿವೃದ್ಧಿ ಹಕ್ಕು ಪರಿಹಾರ ಪಾವತಿಗೆ ಸೂಚನೆ
ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆ ಅಗಲೀಕರಣ ಸಂಬಂಧ ರಾಜ್ಯ ಸರ್ಕಾರ 2009 ರಲ್ಲಿ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ರಾಜಮನೆತನದ ಉತ್ತರಾಧಿಕಾರಿಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ, ಅರಮನೆಯ 15 ಎಕರೆ 39 ಗುಂಟೆ ಆಸ್ತಿಗೆ ನೆರೆಯ ಸ್ಥಳಗಳ ಮಾರುಕಟ್ಟೆ ಮೌಲ್ಯ ಆಧರಿಸಿ ಅಭಿವೃದ್ಧಿ ಹಕ್ಕು ಪರಿಹಾರ( ಟಿಡಿಆರ್) ನೀಡುವಂತೆ ಆದೇಶಿಸಿತ್ತು.
15 ಎಕರೆ 39 ಗುಂಟೆಗೆ ಮಾರುಕಟ್ಟೆ ಆಧರಿತ ಅಭಿವೃದ್ಧಿ ಪರಿಹಾರ ಹಕ್ಕಿನ ಮೌಲ್ಯ 3400 ಕೋಟಿ ರೂ. ಪಾವತಿಸಬೇಕಾಗಿತ್ತು. ಇದು ಆರ್ಥಿಕ ಹೊರೆಯಾಗಿ ಪರಿಣಮಿಸಿದ ಕಾರಣ ಟಿಡಿಆರ್ ನೀಡಲು ಸರ್ಕಾರ ನಿರಾಕರಿಸಿತ್ತು.
ಸುಗ್ರೀವಾಜ್ಞೆ ಹೊರಡಿಸಿದ್ದ ಸರ್ಕಾರ
ರಸ್ತೆ ಅಗಲೀಕರಣಕ್ಕಾಗಿ ಅರಮನೆ ಮೈದಾನದ ಜಾಗ ಬಳಕೆಗೆ 3,400 ಕೋಟಿ ರೂ. ಮೊತ್ತದ ಟಿಡಿಆರ್ ಪರಿಹಾರ ನೀಡುವುದರಿಂದ ಆರ್ಥಿಕ ಹೊರೆಯಾಗಲಿದೆ ಎಂಬ ತೀರ್ಮಾನಿಸಿ ಜ.23ರಂದು ತುರ್ತು ಸಚಿವ ಸಂಪುಟ ಸಭೆ ನಡೆಸಿದ್ದ ರಾಜ್ಯ ಸರ್ಕಾರ, ರಸ್ತೆ ಅಗಲೀಕರಣ ಪ್ರಸ್ತಾಪವನ್ನೇ ಕೈಬಿಟ್ಟು ಸುಗ್ರೀವಾಜ್ಞೆ ಹೊರಡಿಸಿತ್ತು.
ಟಿಡಿಆರ್ ನ್ಯಾಯಬದ್ಧವಾಗಿಲ್ಲ
ಬೆಂಗಳೂರು ಅರಮನೆ ಮೈದಾನದ 15.39 ಎಕರೆ ಜಾಗಕ್ಕೆ 3,011 ಕೋಟಿ ರೂ. ಟಿಡಿಆರ್ ಪರಿಹಾರ ನೀಡುವುದರಿಂದ ಪಾರಾಗಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿತ್ತು. ಎರಡು ಕಿ.ಮೀ. ರಸ್ತೆ ಜಾಗಕ್ಕೆ 3,400 ಕೋಟಿ ರೂ. ಪರಿಹಾರ ನೀಡುವುದು ನ್ಯಾಯಬದ್ಧವಲ್ಲ ಎಂದು ರಾಜ್ಯ ಸರ್ಕಾರದ ಪರ ವಕೀಲರು ವಾದಿಸಿದ್ದರು. ಆದರೆ, ಟಿಡಿಆರ್ ಅನ್ನು ಮಾಲೀಕರಿಗೆ ವರ್ಗಾಯಿಸದೇ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಬಳಿ ಪ್ರಮಾಣ ಪತ್ರ ಠೇವಣಿ ಇಡುವಂತೆ ಸೂಚಿಸಿತ್ತು.
ಟಿಡಿಆರ್ ಎಂದರೇನು?
ಟಿಡಿಆರ್ ಒಂದು ವಿಶಿಷ್ಟ ಪರಿಹಾರ ಮಾದರಿಯಾಗಿದ್ದು, ಅಲ್ಲಿ ನಗದು ರೂಪದಲ್ಲಿ ಪಾವತಿಸುವ ಬದಲು, ಭೂಮಾಲೀಕರು ವ್ಯಾಪಾರ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳನ್ನು ಪಡೆಯುತ್ತಾರೆ. ಈ ಹಕ್ಕುಗಳು ಡವಲಪರ್‌ಗಳು ಹೆಚ್ಚಿನ ಮಹಡಿಗಳನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ.
ಅರಮನೆ ಮೈದಾನದಿಂದ ಅಗತ್ಯವಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು, ಸರ್ಕಾರವು ನಗದು ಪರಿಹಾರದ ಬದಲಿಗೆ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳನ್ನು (ಟಿಡಿಆರ್) ನೀಡಿತು.
ಟಿಡಿಆರ್‌ಗಳು ಭೂಮಾಲೀಕರಿಗೆ ಡೆವಲಪರ್‌ಗಳಿಗೆ ಅಭಿವೃದ್ಧಿ ಹಕ್ಕುಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡುತ್ತವೆ, ಇದು ಇತರ ಪ್ರದೇಶಗಳಲ್ಲಿ ಹೆಚ್ಚಿನ ನಿರ್ಮಾಣ ಸಾಮರ್ಥ್ಯವನ್ನು ಸಕ್ರಿಯಗೊಳಿಸುತ್ತದೆ.
ಮುನ್ನೆಲೆಗೆ ಬಂದ ಜಮೀನಿನ ಮೂಲ
ರಾಜ ಮನೆತನಕ್ಕೆ 3011 ಕೋಟಿ ರೂ. ಟಿಡಿಆರ್ ನೀಡುವ ಕುರಿತು ಸುಪ್ರೀಂಕೋರ್ಟ್ ಆದೇಶ ನೀಡಿದ ನಂತರ ಅರಮನೆ ಪ್ರದೇಶದ ಮೂಲದ ಬಗ್ಗೆ ಸಾಕಷ್ಟಿ ಚರ್ಚೆಗಳು ಆರಂಭವಾಗಿವೆ.
ಅರಮನೆ ಮೈದಾನ ಮೂಲತಃ ಕಂಟೋನ್ಮೆಂಟ್ ಪಟ್ಟಣದಲ್ಲಿ ಶಾಲಾ ಪ್ರಾಂಶುಪಾಲರಾಗಿದ್ದ ರೆವರೆಂಡ್ ಜೆ ಗ್ಯಾರೆಟ್ ಅವರಿಗೆ ಸೇರಿತ್ತು. ಇದನ್ನು 1873 ರಲ್ಲಿ ಚಾಮರಾಜ ಒಡೆಯರ್ ಅವರ ಪೋಷಕರು ಖರೀದಿಸಿದ್ದರು. ಈ ಜಾಗದಲ್ಲಿ ಅರಮನೆ ನಿರ್ಮಾಣವು 1874 ರಲ್ಲಿ ಪ್ರಾರಂಭವಾಯಿತು. ಆರಂಭಿಕ ನಿರ್ಮಾಣವು 1878 ರಲ್ಲಿ ಪೂರ್ಣಗೊಂಡಿತು. ನಂತರ ನವೀಕರಣಗಳು ನಡೆದವು.
ಅಧಿಸೂಚನೆ ರದ್ದು ಮಾಡಿದ್ದ ಬಿಜೆಪಿ ಸರ್ಕಾರ
2019 ರಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಸ್ತೆ ವಿಸ್ತರಣೆಗಾಗಿ ಭೂಸ್ವಾಧೀನಕ್ಕೆ ಅಧಿಕಾರ ನೀಡಿತು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ದುಬಾರಿ ವೆಚ್ಚದ ಕಾರಣ ಯೋಜನೆ ರದ್ದುಗೊಳಿಸಿತ್ತು.
ಟಿಡಿಆರ್ ಕುರಿತು ಕೃಷ್ಣ ಬೈರೇಗೌಡ ಹೇಳಿದ್ದೇನು?
ಸುಪ್ರೀಂಕೋರ್ಟ್ ಆದೇಶ ಕುರಿತು ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಸುಪ್ರೀಂಕೋರ್ಟ್ ಅರಮನೆ ಮೈದಾನದ ಮಾಲೀಕತ್ವದ ಕುರಿತು ತೀರ್ಪು ನೀಡುವವರೆಗೂ ಟಿಡಿಆರ್ ನೀಡುವುದಿಲ್ಲ. ಒಂದು ವೇಳೆ ಟಿ ಡಿ ಆರ್ ನೀಡಿದ ನಂತ್ರ , ಅವರು ಆಸ್ತಿ ಮಾರಾಟ ಮಾಡಿದರೆ ಸಮಸ್ಯೆ ಆಗಲಿದೆ. ಹಾಗದಾಗ ಟಿಡಿಆರ್ ಹಿಂಪಡೆಯುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಲಾಗುವುದು ಎಂದು ಹೇಳಿದ್ದಾರೆ.
ಅರಮನೆ ಭೂಮಿಯನ್ನು 1994ರಲ್ಲಿ ಸರ್ಕಾರ ವಶಪಡಿಸಿಕೊಂಡಿದೆ. ಆದರೆ ಅದಕ್ಕೆ 2024ರ ಮೌಲ್ಯದಂತೆ ಪರಿಹಾರ ಕೇಳುವುದು ಸಮರ್ಥನಿಯವಲ್ಲ. ಜೊತೆಗೆ ನಾವು ಭೂಮಿಯನ್ನೇ ಬಳಕೆ ಮಾಡಿಲ್ಲ. ಹೀಗಿರುವಾಗ ಟಿ ಡಿ ಆರ್ ಪಾವತಿಸುವುದು ಹೇಗೆ ಎಂದು ಹೇಳಿದ್ದಾರೆ.
ರಾಜವಂಶಸ್ಥ ಯದುವೀರ್ ಹೇಳುವುದೇನು?
ಟಿಡಿಆರ್ ನೀಡಲು ಸರ್ಕಾರಕ್ಕೆ ಖರ್ಚೇನೂ ಆಗುವುದಿಲ್ಲ, ಅದೊಂದು ಪ್ರಮಾಣ ಪತ್ರ ಅಷ್ಟೇ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ ಒಡೆಯರ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯಸರ್ಕಾರಕ್ಕೆ ಹಿನ್ನಡೆಯಾಗಿದೆ, ಹಾಗೆಂದು ಒಡೆಯರ್ ಮನೆತನಕ್ಕೆ ಖುಷಿಯೇನೂ ಆಗಿಲ್ಲ, ಕಾನೂನು ನ್ಯಾಯವನ್ನು ಎತ್ತಿ ಹಿಡಿದಿದೆ ಅಷ್ಟೇ.
ಸರ್ಕಾರ ಕಾನೂನು ಪ್ರಕ್ರಿಯೆಯಂತೆ ಕೆಲಸ ಮಾಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಟಿಡಿಆರ್ ಕೊಡುವುದೆಂದರೆ ಅವರ ಖಜಾನೆಯಿಂದ ಒಂದು ರೂಪಾಯಿ ಕೊಡುವುದಲ್ಲ. ಕೇವಲ ಒಂದು ಸರ್ಟಿಫಿಕೇಟ್ ಕೊಡಬೇಕಾಗಿದೆ. ಅನಂತರ ರಸ್ತೆ ಅಭಿವೃದ್ಧಿ, ಅಗಲಿಕರಣ ಮಾಡಬಹುದು. 2009ರಲ್ಲಿ ಟಿಡಿಆರ್ ಕೊಡುತ್ತೇವೆ ಎಂದು ಸರ್ಕಾರ ನಿರ್ಣಯ ಕೈಗೊಂಡಿತ್ತು. ಅಂದಿನಿಂದ ಇಂದಿನವರೆಗೆ 15 ವರ್ಷ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಿಕೊಂಡು ಬಂದಿದ್ದೇವೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ನಿರಂತರವಾಗಿ ನಡೆಯಬೇಕು, ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು ಎಂಬ ಯಾವುದೇ ದುರುದ್ದೇಶ ನಮಗೆ ಇಲ್ಲ ಎಂದು ಹೇಳಿದ್ದಾರೆ.
2009ರಲ್ಲಿ ಟಿಡಿಆರ್ ಕೊಟ್ಟು ರಸ್ತೆ ಅಗಲೀಕರಣ ಮಾಡುವ ಬಗ್ಗೆ ಸರ್ಕಾರ ಒಪ್ಪಿಕೊಂಡಿತ್ತು. ರಾಜ್ಯ ಸರ್ಕಾರ ನಂತರ ಟಿಡಿಆರ್ ನೀಡಲು ನಿರಾಕರಿಸಿದೆ. ಸರ್ಕಾರ ಟಿಡಿಆರ್ ನೀಡದೆ, ಯಾವುದೇ ಪರಿಹಾರ ನೀಡದೆ ಬಳ್ಳಾರಿ ಮತ್ತು ಜಯಮಹಲ್ ರಸ್ತೆಗಳ ಅಭಿವೃದ್ಧಿ, ಅಗಲೀಕರಣ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರವನ್ನು ನೀಡಿದಲ್ಲಿ 8000 ಕೋಟಿ ರೂ. ವೆಚ್ಚ ಮಾಡುವ ಬದಲು 120 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಗಲಿಕರಣ ಮಾಡಬಹುದು ಎಂದು ಹೇಳಿದ್ದಾರೆ.