ಜ್ಞಾನ ದೇಗುಲದಲ್ಲಿ ಅಮಾನವೀಯತೆ: ಶುಲ್ಕಕ್ಕಾಗಿ ತಾಯಿಯ ತಾಳಿ ಪಡೆದ ನರ್ಸಿಂಗ್ ಕಾಲೇಜು ಚೇರ್ಮನ್
ಹಣ ಪಾವತಿಸಲು ಸಾಧ್ಯವಿಲ್ಲ ಎಂದು ಕುಟುಂಬದವರು ತಿಳಿಸಿದಾಗ, ಅವರು ಹಣ ಇಲ್ಲದಿದ್ದರೆ, ನಿಮ್ಮ ಮೈಮೇಲಿನ ಚಿನ್ನವನ್ನಾದರೂ ಕೊಡಿ ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.;
ಬಿಬಿಸಿ ನರ್ಸಿಂಗ್ ಕಾಲೇಜು
"ಮಗಳ ಭವಿಷ್ಯಕ್ಕಾಗಿ ನನ್ನ ಕೊರಳಲ್ಲಿದ್ದ ತಾಳಿಯನ್ನು ಕೇಳಿದ್ರು, ಬೇರೆ ದಾರಿ ಕಾಣದೆ ಬಿಚ್ಚಿಕೊಟ್ಟೆ..." – ಹೀಗೆ ಹೇಳುತ್ತಾ ಕಣ್ಣೀರಿಟ್ಟರು ವಿದ್ಯಾರ್ಥಿನಿ ಕಾವೇರಿಯ ತಾಯಿ ರೇಣುಕಮ್ಮ. ಅವರ ಈ ಕಣ್ಣೀರಿಗೆ ಕಾರಣ, ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿರುವ ಬಿಬಿಸಿ ನರ್ಸಿಂಗ್ ಕಾಲೇಜಿನ ಆಡಳಿತ ಮಂಡಳಿಯ ಅಮಾನವೀಯ ನಡೆ.
ಕನಕಗಿರಿ ತಾಲೂಕಿನ ಮುಸ್ಲಾಪೂರ ಗ್ರಾಮದ ಬಡ ಕುಟುಂಬದ ಕಾವೇರಿ ವಾಲಿಕಾರ್, ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ಬಿ.ಎಸ್ಸಿ. ನರ್ಸಿಂಗ್‌ಗೆ ಪ್ರವೇಶ ಪಡೆದಿದ್ದರು. ಪ್ರವೇಶ ಸಮಯದಲ್ಲಿ 10,000 ರೂ. ಪಾವತಿಸಿ, ಬಡತನದ ಕಾರಣ ಉಳಿದ 90,000 ರೂ. ಶುಲ್ಕವನ್ನು ನಂತರ ಪಾವತಿಸುವುದಾಗಿ ಕುಟುಂಬ ಭರವಸೆ ನೀಡಿತ್ತು.
ಆದರೆ, ಕಾವೇರಿಗೆ ಅದೃಷ್ಟವಶಾತ್ ಗದಗಿನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಸೀಟು ದೊರೆಯಿತು. ಇದರಿಂದಾಗಿ, ಬಿಬಿಸಿ ಕಾಲೇಜಿನಿಂದ ವರ್ಗಾವಣೆ ಪ್ರಮಾಣಪತ್ರ (ಟಿಸಿ) ಪಡೆಯಲು ಹೋದಾಗ, ಅವರ ಸಂಕಷ್ಟದ ಸರಮಾಲೆ ಶುರುವಾಯಿತು.
ಕಾಲೇಜಿನ ಚೇರ್ಮನ್ ಡಾ. ಸಿ.ಬಿ. ಚಿನಿವಾಲ, ಬಾಕಿ ಉಳಿದ 90,000 ರೂ. ಶುಲ್ಕವನ್ನು ಸಂಪೂರ್ಣ ಪಾವತಿಸಿದರೆ ಮಾತ್ರ ಟಿಸಿ ನೀಡುವುದಾಗಿ ಪಟ್ಟು ಹಿಡಿದರು. ಕುಟುಂಬದವರು ತಮ್ಮ ಆರ್ಥಿಕ ಅಸಹಾಯಕತೆಯನ್ನು ತೋಡಿಕೊಂಡಾಗ, "ಹಣ ಇಲ್ಲದಿದ್ದರೆ ನಿಮ್ಮ ಮೈಮೇಲಿರುವ ಬಂಗಾರವನ್ನಾದರೂ ಕೊಡಿ" ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಬೇರೆ ದಾರಿ ಕಾಣದೆ, ಮಗಳ ಭವಿಷ್ಯವೇ ಮುಖ್ಯವೆಂದು ಭಾವಿಸಿದ ತಾಯಿ ರೇಣುಕಮ್ಮ, ತಮ್ಮ ಪತಿಯ ಎದುರೇ ಕೊರಳಲ್ಲಿದ್ದ ಪವಿತ್ರ ಮಾಂಗಲ್ಯ ಸರವನ್ನು ಬಿಚ್ಚಿ ಕಾಲೇಜಿಗೆ ಒತ್ತೆಯಾಗಿಟ್ಟು, ಮಗಳ ಟಿಸಿ ಪಡೆದು ಬಂದಿದ್ದಾರೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜ್ಞಾನ ನೀಡಬೇಕಾದ ಶಿಕ್ಷಣ ಸಂಸ್ಥೆಯೊಂದು ಇಂತಹ ಅಮಾನವೀಯ ಮತ್ತು ಕರುಣೆಯಿಲ್ಲದ ನಡೆ ಅನುಸರಿಸಬಾರದಿತ್ತು ಎಂದು ಹಲವರು ಖಂಡಿಸಿದ್ದಾರೆ. ಚೇರ್ಮನ್ ಡಾ. ಚಿನಿವಾಲ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.