Caste Census | ಜಾತಿಗಣತಿಯ ಮೂಲ ಪ್ರತಿ ನಾಪತ್ತೆ; ತನಿಖೆ ನಡೆಸದ ಸರ್ಕಾರ, ದತ್ತಾಂಶದ ಮೇಲೆ ಅನುಮಾನ?
ಮೂಲ ಪ್ರತಿ ಇಲ್ಲದಿರುವ ಕುರಿತು ಜಯಪ್ರಕಾಶ್ ಆಯೋಗದ ಸದಸ್ಯ ಕಾರ್ಯದರ್ಶಿ ದಯಾನಂದ ಅವರು ಎನ್.ವಿ. ಪ್ರಸಾದ್ ಅವರಿಗೆ ಪತ್ರ ಬರೆದಿದ್ದರೂ ಸರ್ಕಾರ ಸ್ಪಂದಿಸಿರಲಿಲ್ಲ. ಈ ಬಗ್ಗೆ 'ದ ಫೆಡರಲ್ʼ ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ರಾಜಕೀಯ ವಲಯದಲ್ಲಿ ಆ ವರದಿ ಚರ್ಚೆಗೆ ಕಾರಣವಾಗಿತ್ತು.;
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿಯ ಮೂಲ ಪ್ರತಿಯ ನಾಪತ್ತೆ ಪ್ರಕರಣದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ರಾಜ್ಯ ಸಚಿವ ಸಂಪುಟದಲ್ಲಿ ಮಂಡಿಸಿದ ಜಾತಿ ಜನಗಣತಿ ವರದಿಗೆ ಆಕ್ಷೇಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮೂಲ ಪ್ರತಿಯ ಪ್ರಶ್ನೆ ಎದ್ದಿದೆ. ಜಾತಿವಾರು ಜನಸಂಖ್ಯೆ ಮಾಹಿತಿಗೆ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ಅನುಮಾನ ವ್ಯಕ್ತಪಡಿಸಿದ್ದು, ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮೂಲ ಪ್ರತಿ ಸಿಎಂ ಮನೆಯಲ್ಲಿದೆ ಎಂಬ ಹೇಳಿಕೆ ತೀವ್ರ ಸಂಚಲನ ಸೃಷ್ಟಿಸಿದೆ.
ಆರ್. ಅಶೋಕ್ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ಅವರು ತಿರಸ್ಕರಿಸಿದ್ದು, ನನ್ನ ಬಳಿ ಮೂಲ ಪ್ರತಿ ಇಲ್ಲ ಎಂದಿರುವುದು ಹಾಗೂ ಜಯಪ್ರಕಾಶ್ ಹೆಗ್ಡೆ ಅವರು ಮೂಲ ಪ್ರತಿ ನಾಪತ್ತೆ ಕುರಿತು ಪ್ರಸ್ತಾಪಿಸಿರುವುದು ವರದಿಯನ್ನೇ ಅನುಮಾನದಿಂದ ನೋಡುವಂತಾಗಿದೆ. 2023 ರಿಂದ ಸಮೀಕ್ಷೆ ವರದಿ ನಾಪತ್ತೆಯ ಮಾತುಗಳು ಕೇಳಿ ಬರುತ್ತಿದ್ದರೂ ಸರ್ಕಾರವಾಗಲಿ, ಸಂಬಂಧಪಟ್ಟ ಇಲಾಖೆಗಳಾಗಲಿ ಸೂಕ್ತ ಮಾಹಿತಿ ನೀಡದಿರುವ ಕಾರಣ ಮೂಲ ವರದಿ ಎಲ್ಲಿ ಹೋಯಿತು, ಹೇಗೆ ನಾಪತ್ತೆಯಾಯಿತು ಎಂಬುದು ನಿಗೂಢವಾಗಿದೆ.
ಹಸ್ತಪ್ರತಿ ಇಲ್ಲ, ದತ್ತಾಂಶವಿದೆ
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜ್ ಸಿದ್ಧಪಡಿಸಿದ್ದ ವರದಿಯ ಮೂಲ ಪ್ರತಿಯು ಆಯೋಗದ ಸ್ಟ್ರಾಂಗ್ ರೂಮಿನಲ್ಲಿ ಇರಲಿಲ್ಲ. ಸ್ಕ್ಯಾನ್ ಮಾಡಿದ ಪ್ರತಿಗಳು ಮಾತ್ರ ಇದ್ದವು. ಬಿಇಎಲ್ ಸಂಗ್ರಹಿಸಿಟ್ಟಿದ್ದ ದತ್ತಾಂಶ ಆಧರಿಸಿ ಹೊಸ ವರದಿ ಸಿದ್ಧಪಡಿಸಲಾಗಿದೆ ಎಂದು ಜಯಪ್ರಕಾಶ್ ಹೆಗ್ಡೆ ಅವರು ಹೇಳುತ್ತಿದ್ದರೂ ಪ್ರತಿಪಕ್ಷಗಳಲ್ಲಿ ಮೂಡಿರುವ ಅನುಮಾನ ಮಾತ್ರ ದೂರವಾಗಿಲ್ಲ.
2021 ಆಗಸ್ಟ್ ತಿಂಗಳಲ್ಲಿ ಜನಗಣತಿ ವರದಿ ಹುಡುಕಿದದೂ ಸಿಕ್ಕಿರಲಿಲ್ಲ. ಲಭ್ಯವಿದ್ದ ವರದಿಗೆ ಆಯೋಗದ ಅಂದಿನ ಸದಸ್ಯ ಕಾರ್ಯದರ್ಶಿ ಎನ್.ವಿ. ಪ್ರಸಾದ್ ಅವರ ಸಹಿ ಇರಲಿಲ್ಲ, ಈ ಬಗ್ಗೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದರೂ ಸಮರ್ಪಕ ಉತ್ತರ ನೀಡದ ಕಾರಣ ಅದನ್ನು ಮೂಲ ಪ್ರತಿ ಎಂದು ಪರಿಗಣಿಸಿರಲಿಲ್ಲ ಎಂದು ಈ ಹಿಂದೆ ಜಯಪ್ರಕಾಶ್ ಹೆಗ್ಡೆ ಅವರು ಹೇಳಿದ್ದರು.
ಸ್ಟ್ರಾಂಗ್ ರೂಂನಲ್ಲಿ ಏನಿತ್ತು?
2021ಆಗಸ್ಟ್ 26 ರಂದು ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಕೆ. ದಯಾನಂದ ಅವರು ಆಯೋಗದ ಭದ್ರತಾ ಕೊಠಡಿ ತೆರೆದಾಗ ಮೂಲ ವರದಿಯ ಸ್ಕ್ಯಾನ್ ಮಾಡಿದ ಪ್ರತಿ ಹೊಂದಿದ್ದ ನಾಲ್ಕು ಪೆಟ್ಟಿಗೆಗಳು, ದತ್ತಾಂಶದ ಸಿಡಿಗಳು ದೊರೆತಿದ್ದವು. ಆದರೆ, ಅವುಗಳಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರ ಸಹಿ ಇತ್ತು. ಎನ್.ವಿ. ಪ್ರಸಾದ್ ಅವರ ಹೆಸರಿದ್ದರೂ ಸಹಿ ಇರಲಿಲ್ಲ. ಈ ಬಗ್ಗೆ ಎನ್.ವಿ. ಪ್ರಸಾದ್ ಅವರೊಂದಿಗೆ ಪತ್ರ ವ್ಯವಹಾರ ಮಾಡಿದರೂ ಸೂಕ್ತ ಪ್ರತಿಕ್ರಿಯೆ ನೀಡಿರಲಿಲ್ಲ. ಹಾಗಾಗಿ ಆ ವರದಿಯನ್ನು ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ ದೃಢೀಕರಿಸಿರಲಿಲ್ಲ.
ಇನ್ನು ವರದಿ ನಾಪತ್ತೆ ಕುರಿತು ಪ್ರತಿಕ್ರಿಯಿಸಿದ್ದ ಎಚ್. ಕಾಂತರಾಜ್ ಅವರು, ಮೂಲ ವರದಿ ನಾಪತ್ತೆಯಾಗಿಲ್ಲ. ಆಯೋಗದಲ್ಲಿರುವ ವರದಿ ಹೇಗೆ ಕಾಣೆಯಾಗುತ್ತದೆ ಎಂದು ಪ್ರಶ್ನಿಸಿದ್ದರು.
ಸಿಎಂ ಮನೆಯಲ್ಲಿ ಮೂಲ ಪ್ರತಿ ?
158.47 ಕೋಟಿ ರೂ. ವೆಚ್ಚದಲ್ಲಿ ಎಚ್.ಕಾಂತರಾಜು ನೇತೃತ್ವದ ಆಯೋಗ ಸಿದ್ದಪಡಿಸಿದ್ದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಮೂಲ ಪ್ರತಿಯು ಸಿಎಂ ಸಿದ್ದರಾಮಯ್ಯ ಅವರ ಮನೆಯಲ್ಲಿದೆ. ಈಗ ಸಂಪುಟದಲ್ಲಿ ಮಂಡಿಸಿರುವ ವರದಿ ಬೋಗಸ್ ಎಂದು ಅಶೋಕ್ ಆರೋಪಿಸಿದ್ದರು. ಅಲ್ಲದೇ ಮೂಲ ಪ್ರತಿ ನಾಪತ್ತೆಯಾಗಿರುವ ಸಂಬಂಧ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಹಾಗಾದರೆ ಸಂಪುಟದಲ್ಲಿ ಮಂಡಿಸಿರುವ ಸಮೀಕ್ಷಾ ವರದಿ ಅಸಲಿಯೇ ಅಥವಾ ನಕಲಿಯೇ ಎಂಬ ಅನುಮಾನಗಳು ಸಾರ್ವಜನಿಕರನ್ನು ಕಾಡುತ್ತಿವೆ.
2025 ಫೆಬ್ರವರಿ ತಿಂಗಳಲ್ಲಿ ಜಾತಿಗಣತಿಯ ಮೂಲ ಪ್ರತಿಯ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರು ಮೂಲಪ್ರತಿ ಕಳೆದು ಹೋಗಿಲ್ಲ. ಕಚೇರಿಯಲ್ಲಿ ಭದ್ರವಾಗಿದೆ ಎಂದು ಹೇಳಿದ್ದರು. ಹಾಗಾದರೆ , ಆಯೋಗದ ಸದಸ್ಯ ಕಾರ್ಯದರ್ಶಿಗೆ ಮೂಲ ಪ್ರತಿ ಏಕೆ ಸಿಗಲಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ.
ಸರ್ಕಾರ ಹೇಳುವುದೇನು?
2015 ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಯ ಅಂಕಿ ಅಂಶಗಳನ್ನು ಬಿಇಎಲ್ ಸಂಸ್ಥೆ ಗಣಕೀಕರಣಗೊಳಿಸಿ ಡೇಟಾ ಸೆಂಟರ್‌ನಲ್ಲಿ ಭದ್ರವಾಗಿ ಇರಿಸಿದೆ. ಎಚ್. ಕಾಂತರಾಜ ನೇತೃತ್ವದ ಆಯೋಗ ನೀಡಿರುವ ವರದಿಯ ಅಂಕಿಅಂಶಗಳ ಮಾಹಿತಿ ಹಾಗೂ ಇತರ ವಿವರಗಳ ಮುದ್ರಿತ ಪ್ರತಿಗಳನ್ನು ಪೆಟ್ಟಿಗೆಯಲ್ಲಿ ಇರಿಸಿ ಸೀಲ್ ಮಾಡಲಾಗಿದೆ. ಮೂಲ ಪ್ರತಿ ಎಂಬುದು ಯಾವುದೂ ಇಲ್ಲ. ಬಿಳಿ ಹಾಳೆಯಲ್ಲಿ ದಾಖಲಿಸಿದ ಅಂಕಿ ಅಂಶಗಳನ್ನು ಕ್ರೂಢೀಕರಿಸಿ ವರದಿ ತಯಾರಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ.
ಅದೇ ಹಾಳೆಗಳನ್ನು ಬಹಿರಂಗಪಡಿಸಿ ಎಂಬ ಒತ್ತಾಯಕ್ಕೆ ಸರ್ಕಾರದ ಬಳಿ ಯಾವುದೇ ಉತ್ತರ ಇಲ್ಲದಿರುವುದು ಪ್ರಬಲ ಸಮುದಾಯಗಳಲ್ಲಿ ಅನುಮಾನ ಮೂಡಿಸಿದೆ.
ಜಯಪ್ರಕಾಶ್ ಹೆಗ್ಡೆ ವರದಿ ನಂಬುವುದು ಹೇಗೆ?
2015 ರ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿ ಆಧರಿಸಿ ಸಲ್ಲಿಸಿರುವ ಜಯಪ್ರಕಾಶ್ ಹೆಗ್ಡೆ ಆಯೋಗದ ವರದಿ ಎಷ್ಟು ನಿಖರವಾಗಿದೆ ಎಂಬುವುದು ವಿವಿಧ ಸಮುದಾಯಗಳ ಪ್ರಶ್ನೆಯಾಗಿದೆ.
ಕಾಂತರಾಜು ಆಯೋಗದ ವರದಿಯ ದತ್ತಾಂಶ ಹತ್ತು ವರ್ಷಗಳ ಹಳೆಯದ್ದು. ಹತ್ತು ವರ್ಷದಲ್ಲಿ ಜನಸಂಖ್ಯೆ, ಆರ್ಥಿಕ ಸ್ಥಿತಿಗತಿ ಸಾಕಷ್ಟು ಬದಲಾವಣೆಯಾಗಿದೆ. ಹೀಗಿರುವಾಗ ವರದಿ ಪ್ರಸ್ತುತವಲ್ಲ ಎಂದು ಆರೋಪವೂ ಕೇಳಿ ಬರುತ್ತಿದೆ.
ಇನ್ನು ಹಲವು ಸಮುದಾಯಗಳು ಗಣತಿ ಪ್ರಕ್ರಿಯೆಗೆ ಅನುಮಾನ ವ್ಯಕ್ತಪಡಿಸಿವೆ. ಗಣತಿದಾರರು ಸರಿಯಾಗಿ ಮನೆ ಭೇಟಿ ಮಾಡಲಿಲ್ಲ. ಆದ್ದರಿಂದ ವರದಿಯೇ ಅವೈಜ್ಞಾನಿಕ ಎಂಬ ತಗಾದೆ ತೆಗೆದಿದ್ದಾರೆ.
ಕಾಂತರಾಜ್ ಆಯೋಗದ ವರದಿ ಬಳಸಿಕೊಂಡು 10 ವರ್ಷಗಳ ಬಳಿಕ ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗ ಹೊಸ ವರದಿ ಸಿದ್ಧಪಡಿಸಿರುವುದು ಸೋಜಿಗ ಎನಿಸಿದೆ. ಹೊಸತಾಗಿ ಸಿದ್ಧಪಡಿಸುವ ವರದಿಗೆ ಕಾನೂನು ಮಾನ್ಯತೆ ಇದೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜಾತಿ ಗಣತಿ ವರದಿಯ ಮೂಲಪ್ರತಿ ಇಲ್ಲದಿರುವುದರ ಬಗ್ಗೆ ಆಗಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಬರೆದ ಪತ್ರ
ಪೆಟ್ಟಿಗೆಗಳಿಂದಲೇ ವರದಿ ನಾಪತ್ತೆ?
ಕಾಂತರಾಜ ಆಯೋಗ ಸಿದ್ಧಪಡಿಸಿ, ಆಯೋಗದ ಕಚೇರಿಯಲ್ಲಿ ನಾಲ್ಕು ಮುಚ್ಚಿದ ಪೆಟ್ಟಿಗೆಗಳಲ್ಲಿ ಭದ್ರವಾಗಿ ಇರಿಸಿದ್ದ ಮುಖ್ಯ ವರದಿಯ ಹಸ್ತ ಪ್ರತಿ ನಾಪತ್ತೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಮೂಲ ಪ್ರತಿ ಇಲ್ಲದಿರುವ ಕುರಿತು ಜಯಪ್ರಕಾಶ್ ಆಯೋಗದ ಸದಸ್ಯ ಕಾರ್ಯದರ್ಶಿ ದಯಾನಂದ ಅವರು ಎನ್.ವಿ. ಪ್ರಸಾದ್ ಅವರಿಗೆ ಪತ್ರ ಬರೆದರೂ ಸ್ಪಂದಿಸಿರಲಿಲ್ಲ. ಎರಡನೇ ಬಾರಿಗೆ ಪತ್ರ ಬರೆದು ‘ಒಂದು ವಾರದಲ್ಲಿ ಅಭಿಪ್ರಾಯ ನೀಡದೇ ಇದ್ದರೆ ತಮಗೆ ಸಹಮತವಿಲ್ಲದೆ ಸಹಿ ಮಾಡಿರುವುದಿಲ್ಲʼ ಎಂದು ಪರಿಗಣಿಸಲಾಗುವುದು ಎಂದು ಹೇಳಿದ್ದರು. ಆದಾಗ್ಯೂ ಪ್ರಸಾದ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದು ಸರ್ಕಾರದ ಗಮನಕ್ಕೆ ಬಂದರೂ ತನಿಖೆ ನಡೆಸದಿರುವುದು ಅಥವಾ ಯಾವುದೇ ಕ್ರಮ ಜರುಗಿಸದಿರುವುದು ಅನುಮಾನವನ್ನು ಹೆಚ್ಚಿಸಿದೆ.